ಚಿತ್ರ: ಸೂಪರ್ ಹಿಟ್
ನಿರ್ದೇಶನ: ವಿಜಯಾನಂದ್
ನಿರ್ಮಾಣ: ಉಮೇಶ್ ಜಿ
ತಾರಾಗಣ: ಗಿಲ್ಲಿ ನಟ, ಗೌರವ್ ಶೆಟ್ಟಿ, ಶ್ವೇತಾ ಮೊದಲಾದವರು…
ರೇಟಿಂಗ್: 3.5/5
ಇದ್ದು ಕದ್ದ ಕಾರಿನ ಕಥೆ. ವಿಚಿತ್ರ ಏನೆಂದರೆ ಅದೇ ಕಾರಿನ ಡಿಕ್ಕಿಯಲ್ಲೇ ಕಾರಿನ ಮಾಲಕನೂ ಇರುತ್ತಾನೆ. ಈ ಸತ್ಯ ಗೊತ್ತಿಲ್ಲದೆ ಇಬ್ಬರು ಯುವಕರು ಒಬ್ಬಳು ಯುವತಿಯೊಡನೆ ಪ್ರಯಾಣ ನಡೆಸುತ್ತಾರೆ. ಇಷ್ಟಕ್ಕೂ ಕಾರ್ ಡಿಕ್ಕಿಯೊಳಗಿರುವ ಮಾಲಕ ಜೀವಂತವಾಗಿದ್ದಾನ? ಮುಂದಿನ ಕಥೆ ಏನು? ಈ ಎಲ್ಲ ಕುತೂಹಲಗಳಿಗೆ ರಸಮಯವಾದ ಉತ್ತರವನ್ನು ಸೂಪರ್ ಹಿಟ್ ನೀಡುತ್ತದೆ.
ಬೀದಿಯಲ್ಲಿದ್ದ ಕಾರ್ ಅಪಹರಿಸುವ ಮೂಲಕ ಕಥೆಗೆ ಚಾಲನೆ ನೀಡುವ ಸತ್ಯನಾಗಿ ಗೌರವ ಶೆಟ್ಟಿ ನಟಿಸಿದ್ದಾರೆ. ಆದರೆ ಕದ್ದ ಕಾರನ್ನು ತನ್ನದೇ ದಾರಿಗೆ ತಿರುಗಿಸುವ ಅಪಹರಣಕಾರನಾಗಿ ಗಿಲ್ಲಿನಟ ಕಾಣಿಸಿದ್ದಾರೆ. ಅದಕ್ಕೂ ಮೊದಲೇ ಕಾರೇರಿ ಸತ್ಯನ ಬೆನ್ನು ಬೀಳುವ ಯುವತಿಯಾಗಿ ಶ್ವೇತಾ ಅಭಿನಯಿಸಿದ್ದಾರೆ.
ಗಿಲ್ಲಿನಟ ಪ್ರಥಮ ಬಾರಿಗೆ ನಾಯಕ ನಟರಾಗಿ ಅಭಿನಯಿಸಿರುವ ಚಿತ್ರ ಇದು. ಆದರೆ ಅವರ ರಿಯಾಲಿಟಿ ಶೋ ಅಭಿಮಾನಿಗಳಿಗೆ ಖುಷಿ ನೀಡುವಂಥ ಪಾತ್ರವನ್ನೇ ಇಲ್ಲಿ ನೀಡುವಲ್ಲಿ ನಿರ್ದೇಶಕ ವಿಜಯಾನಂದ್ ಯಶಸ್ವಿಯಾಗಿದ್ದಾರೆ. ಗಿಲ್ಲಿನಟನಿಂದ ಪ್ರೇಕ್ಷಕರು ಬಯಸುವ ಪಂಚ್ ಸಂಭಾಷಣೆಗಳಿಗೆ ಇಲ್ಲಿ ಹೇರಳವಾದ ಅವಕಾಶಗಳನ್ನೇ ನೀಡಲಾಗಿದೆ.
ಚಿತ್ರದಲ್ಲಿ ಹಾಸ್ಯ ಕಲಾವಿದರ ದಂಡೇ ಇವೆ. ಸಾಧುಕೋಕಿಲ ಎಂಟ್ರಿಯೊಂದಿಗೆ ಶುರುವಾಗುವ ಚಿತ್ರದಲ್ಲಿ ಅವರ ನಟನೆಯೇ ಮತ್ತೊಂದು ಹೈಲೈಟ್. ಒಂದು ಸಣ್ಣ ಗ್ಯಾಪ್ ಬಳಿಕ ಕಾಣಿಸಿಕೊಂಡಿರುವ ಸಾಧು ತಮ್ಮ ಸ್ಥಾನಕ್ಕೆ ಬೇರೆ ಯಾರೂ ಸಾಟಿ ಇಲ್ಲ ಎಂದು ಸಾಬೀತು ಮಾಡಿದ್ದಾರೆ. ಚಿತ್ರದಲ್ಲಿ ಓಂ ಸಿನಿಮಾದ ಶಿವರಾಜ್ ಕುಮಾರ್, ಕೆ.ಜಿ.ಎಫ್ ಚಿತ್ರದ ರಾಕಿ ಭಾಯ್, ವಾಲಿಯಲ್ಲಿನ ಸುದೀಪ್ ಪಾತ್ರಗಳ ಹಿನ್ನೆಲೆಯಲ್ಲಿರುವ ದೃಶ್ಯಗಳನ್ನು ಇಲ್ಲಿ ಹಾಸ್ಯಾತ್ಮಕವಾಗಿ ತೋರಿಸಲಾಗಿದೆ. ಅವುಗಳು ಪ್ರೇಕ್ಷಕರನ್ನು ನಗಿಸುವಲ್ಲಿ ಸಫಲವಾಗುತ್ತವೆ.
ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರಿಂದ ಹಿಡಿದು ಇಂದಿನ ಜನಪ್ರಿಯ ಕಲಾವಿದ ಗಿರೀಶ್ ಶಿವಣ್ಣ ತನಕ ಸಾಕಷ್ಟು ಮಂದಿ ಹಾಸ್ಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಂದೆಡೆ ಖುದ್ದು ನಿರ್ದೇಶಕ ವಿಜಯಾನಂದ್ ತನ್ನ ಹಿರಿಯ ಸಹೋದರ ನಾಗೇಂದ್ರ ಪ್ರಸಾದ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ಕಳ್ಳನಾಗಿ ಗೋವಿಂದೇಗೌಡ, ಪೊಲೀಸ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ನ್ಯಾಯಾಧೀಶರಾಗಿ ಡ್ರ್ಯಾಗನ್ ಮಂಜು ಪ್ರತ್ಯಕ್ಷರಾದರೂ ತಮ್ಮ ಪಾತ್ರಗಳಿಗಿಂತ ವಿಭಿನ್ನವಾದ ಮ್ಯಾನರಿಸಮ್ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ. ಕದ್ದ ಕಾರಿನ ಹಿಂದೆ ಅಡಗಿದ ರಹಸ್ಯವೇನು? ಮುಂದೇನಾಯಿತು ಎನ್ನುವ ಕುತೂಹಲಗಳಿಗೆ ಈ ಹಾಸ್ಯಮಯ ಚಿತ್ರದಲ್ಲಿ ಆಕರ್ಷಕವಾದ ಉತ್ತರವಿದೆ.





Be the first to comment