ಶೇಷ 2016

ಮಾರ್ಚ್ 6ಕ್ಕೆ ‘ಶೇಷ 2016’ ಚಿತ್ರ ರಿಲೀಸ್

ಪ್ರಮೋದ್ ಶೆಟ್ಟಿ , ಜಾನ್ ಕೈಪ್ಪಲ್ಲಿ ಹಾಗೂ ಅರ್ಚನಾ ಕೊಟ್ಟಿಗೆ ಅಭಿನಯದ “ಶೇಷ 2016” ಚಿತ್ರ ಬಿಡುಗಡೆ ಮುನ್ನ Amazon ಪ್ರೈಮ್ ಸಂಸ್ಥೆಯು ಓಟಿಟಿ ಗೆ ಒಳ್ಳೆ ಮೊತ್ತಕ್ಕೆ ಪಡೆದುಕೊಂಡಿದೆ.

ಬೆಳ್ಳಿ ಪರದೆ ಮೇಲೆ ಮತ್ತೊಮ್ಮೆ ಪೋಲಿಸ್ ಕಥಾನಕ ಚಿತ್ರ ಬರಲು ಸಜ್ಜಾಗಿದೆ. ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರೀಕರಣವಾದ ಈ ಸಿನಿಮಾದಲ್ಲಿ ಪೊಲೀಸ್ ಇಲಾಖೆಯಲ್ಲಿರುವಂತಹ ಭ್ರಷ್ಟ ಹಾಗೂ ಪ್ರಾಮಾಣಿಕತೆಯ ಸಂಘರ್ಷದ ನಡುವೆ ಸಾಗುವ ಕುತೂಹಲಕಾರಿ ಕಥೆಯನ್ನು ಒಳಗೊಂಡಿದೆಯಂತೆ. ಮರಡಿಗುಡ್ಡ ಎಂಟರ್ಟೈನ್ಮೆಂಟ್ಸ್ ಮೂಲಕ ಉಮೇಶ್ ಗೌಡ , ಮಂಜುವಾಣಿ .ವಿ. ಎಸ್ ಹಾಗೂ ವೀಣಾ. ಎಸ್ ನಿರ್ಮಾಣದ ಈ ಚಿತ್ರವನ್ನು ಯುವ ಪ್ರತಿಭೆ ಪ್ರದೀಪ್ ಅರಸೀಕೆರೆ ನಿರ್ದೇಶನ ಮಾಡಿದ್ದಾರೆ. ಈಗ ಚಿತ್ರದ ಬಿಡುಗಡೆ ದಿನಾಂಕ ಹಾಗೂ ಓ ಟಿಟಿ ಪ್ಲಾಟ್ಫಾರ್ಮ್ ರೈಟ್ ಪಡೆದಿರುವ ಸಂಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಲು ಇತ್ತೀಚಿಗೆ ಚಿತ್ರತಂಡ ಜಿಟಿ ಮಾಲ್ ನಲ್ಲಿರುವ ಉತ್ಸವ ಲೆಗಸಿಯಲ್ಲಿ ಪತ್ರಿಕಾಗೋಷ್ಠಿಯನ್ನು ಯೋಜನೆ ಮಾಡಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ಎಸಿಪಿ ಗಣೇಶ್ ಹಾಗೂ ಮೋಹನ್ ಕುಮಾರ್ ದಾನಪ್ಪ ರವರು ಆಗಮಿಸಿ ಚಿತ್ರದ ಬಿಡುಗಡೆ ದಿನಾಂಕದ ಪೋಸ್ಟರ್ ಲಾಂಚ್ ಮಾಡಿದರು.

ತದನಂತರ ಎಸಿಪಿ ಗಣೇಶ್ ಮಾತನಾಡುತ್ತ ಸಾಮಾನ್ಯವಾಗಿ ಪೊಲೀಸ್ ಪಾತ್ರಗಳನ್ನು ನೆಗೆಟಿವ್ ಆಗಿ ತೋರಿಸುವುದೇ ಹೆಚ್ಚು , ಈ ಚಿತ್ರತಂಡ ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಒಂದಷ್ಟು ಕಥೆಯ ಬಗ್ಗೆ ಮಾಹಿತಿ ಪಡೆದುಕೊಂಡೆ. ಪೊಲೀಸ್ ಇಲಾಖೆಯಲ್ಲಿ ಇರುವಂತಹ ಭ್ರಷ್ಟ ವ್ಯಕ್ತಿಗಳ ಜೊತೆಗೆ ಒಳ್ಳೆಯ ಅಧಿಕಾರಿಗಳ ಬಗ್ಗೆ ಕೂಡ ಸಿನಿಮಾದಲ್ಲಿ ತೋರಿಸಿದ್ದಾರಂತೆ. ಜನರಲ್ಲಿ ಜಾಗೃತಿ ಮೂಡಿಸುವ ಸಮಾಜಕ್ಕೆ ಉತ್ತಮ ಚಿತ್ರಗಳನ್ನು ಕೊಡುವ ಕೆಲಸ ಆಗಬೇಕು. ನಾನು ಮೂಲತಃ ಹೊಸಪೇಟೆಯವನು. ನಟ ಅಜಯ್ ರಾವ್ ನನ್ನ ಆತ್ಮೀಯ ಗೆಳೆಯ , ನಾನು ಅವನ ಸಿನಿಮಾ ಬದುಕಿನ ಬಗ್ಗೆ ಹತ್ತಿರದಿಂದ ನೋಡಿದ್ದೇನೆ. ಜನರನ್ನ ಸಿನಿಮಾ ಗೆ ಕರೆ ತರುವುದೇ ಬಹಳ ಕಷ್ಟವಾಗಿದೆ. ಕಲಾವಿದರಾಗಿ ಗುರುತಿಸಿಕೊಳ್ಳುವುದು ಸುಲಭದ ಮಾತಲ್ಲ , ಅವರು ದೈವದಿಂದ ವರ ಪಡೆದ ಪುತ್ರರು. ಓದಿ ಕೆಲಸ ಗಿಟ್ಟಿಸಿಕೊಳ್ಳುವುದು ಆದರೆ ನಟನೆ ಮಾಡುವುದು ಬಹಳ ಕಷ್ಟ. ಎಲ್ಲರೂ ಮೊಬೈಲ್ ನಲ್ಲಿ ನೋಡುವುದಕ್ಕಿಂತ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಈಗ ಪರಸಿ ಕಡಿವಾಣದ ಬಗೆಯು ಚರ್ಚೆ ನಡೆಯುತ್ತಿದೆ , ಈ ಚಿತ್ರವನ್ನು ನೋಡಿ ಎಂದು ಹೇಳಿದರು.

ಶೇಷ 2016

ಮತ್ತೊಬ್ಬ ಅಧಿಕಾರಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಮುಖ್ಯಸ್ಥ ಮೋಹನ್ ಕುಮಾರ್ ದಾನಪ್ಪ ಮಾತನಾಡುತ್ತಾ ನಾನು ಉತ್ತರ ಕರ್ನಾಟಕ ಭಾಗದವನು, ನಾನು ನನ್ನ ಫ್ಯಾಮಿಲಿ ಜೊತೆ ಹೋಗಿ ಕನ್ನಡ ಸಿನಿಮಾಗಳನ್ನ ನೋಡುತ್ತೇನೆ. ಕನ್ನಡದ ಉತ್ತಮ , ಸಾಮಾಜಿಕ ಕಳಕಳಿ ಇರುವಂತಹ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು.

ಇನ್ನು ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಪ್ರಮೋದ್ ಶೆಟ್ಟಿ , ಜಾನ್ ಕೈಪ್ಪಲ್ಲಿ ಕಾಂಬಿನೇಷನ್ನ ಈ “ಶೇಷ 2016” ಚಿತ್ರದ ಓಟಿಟಿ ರೈಟ್ಸ್ ಅನ್ನ ಅಮೆಜಾನ್ ಪ್ರೈಮ್ ವೀಡಿಯೋಸ್ ಒಳ್ಳೆ ಮೊತ್ತಕ್ಕೆ ಪಡೆದುಕೊಂಡಿದೆ. ಹೈದರಾಬಾದ್ ಮೂಲದ ಡಾ. ರಾಜೀವ್ ಹಾಗೂ ಕ್ರಾಂತಿ ಪ್ರಸಾದ್ ಇದರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು , ನಂತರ ಪ್ರಸಾದ್ ಮಾತನಾಡುತ್ತಾ ಸರಿ ಸುಮಾರು ಈಗಾಗಲೇ 1880 ಚಿತ್ರಗಳ ಹಕ್ಕನ್ನು ಪಡೆದುಕೊಂಡಿದ್ದೇವೆ. ಉತ್ತಮ ಕ್ವಾಲಿಟಿ , ಸದಭಿ ರುಚಿಯ ಚಿತ್ರಗಳು ಬಂದರೆ ಖಂಡಿತ ನಾವು ಸಪೋರ್ಟ್ ಮಾಡುತ್ತೇವೆ. ಹಾಗಾಗಿಯೇ ನಾವು ಈಗ ಶೇಷ 2016 ಚಿತ್ರದ ರೈಟ್ಸ್ ಪಡೆಯುವ ಮೂಲಕ ಚಿತ್ರ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದೇವೆ ಎಂದರು. ಅದೇ ರೀತಿ ಡಾ. ರಾಜೀವ್ ಕನ್ನಡ ಬರೆದಿದ್ದರು ಇಂಗ್ಲಿಷ್ ನಲ್ಲಿ ಮಾತನಾಡುತ್ತಾ ಒಳ್ಳೆಯ ಚಿತ್ರಗಳಿಗೆ ನಮ್ಮ ಬೆಂಬಲ ಇದ್ದೇ ಇರುತ್ತೆ ಎಂದರು.

ಈ ಚಿತ್ರದ ನಿರ್ದೇಶಕ ಪ್ರದೀಪ್ ಅರಸೀಕೆರೆ ಮಾತನಾಡುತ್ತಾ ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಒಳ್ಳೇದು ಕೆಟ್ಟದರ ಸಂಘರ್ಷಗಳ ನಂತರ ಉಳಿದಿರುವದನ್ನ ಶೇಷ ಎನ್ನುತ್ತಾರೆ. 2016ರ ಕಾಲದ ಘಟ್ಟದಲ್ಲಿ ಕರ್ನಾಟಕ ಹಾಗೂ ಕೇರಳ ಬಾರ್ಡರ್ ನಲ್ಲಿ ನಡೆಯುವಂತಹ ಕಾಲ್ಪನಿಕ ಘಟನೆಗಳ ಸುತ್ತ ಬೆಸೆದುಕೊಂಡು ಮಾಡಿರುವಂತಹ ಚಿತ್ರ ಇದಾಗಿದೆ. ನನ್ನನ್ನ ನಂಬಿ ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ನಾನು ಸದಾ ಋಣಿಯಾಗಿರುತ್ತೇನೆ. ನಾನು ಈ ಹಿಂದೆ ಕೆ.ಇ.ಬಿ ಯಲ್ಲಿ ಕೆಲಸ ಮಾಡುತ್ತಿದ್ದೆ , ಸಿನಿಮಾ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ಈ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಈ ಸಬ್ಜೆಕ್ಟ್ ಬಗ್ಗೆ ಬಹಳಷ್ಟು ಚರ್ಚೆ ಮಾಡಿ ಪೊಲೀಸ್ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟ ಚಟುವಟಿಕೆಗಳ ಬಗ್ಗೆ ಈ ಚಿತ್ರ ಮಾಡಿದ್ದೇನೆ. ಸಾಮಾನ್ಯವಾಗಿ ನಾವು ಗಮನಿಸಿದರೆ ಎಲ್ಲದಕ್ಕೂ ಒಂದೊಂದು ಪರ್ಯಾಯ ವ್ಯವಸ್ಥೆ ಇದ್ದೆ ಇರುತ್ತದೆ. ಗೌರ್ನಮೆಂಟ್ ಹಾಸ್ಪಿಟಲ್ ಇಲ್ಲದಿದ್ದರೆ ಪ್ರೈವೇಟ್, ಗೌರ್ಮೆಂಟ್ ಸ್ಕೂಲ್ ಇಲ್ಲದಿದ್ದರೆ ಪ್ರೈವೇಟ್ ಹೀಗೆ ಆದರೆ ಸರ್ಕಾರದ ಪೊಲೀಸ್ ಇಲಾಖೆಯಲ್ಲಿ ಬದಲಿ ವ್ಯವಸ್ಥೆ ಇಲ್ಲ. ಇಂಥ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರದಿಂದ ಜನರು ಹೇಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏನೆಲ್ಲಾ ಕಷ್ಟ , ಕಾರ್ಪಣ್ಯಗಳು ಎದುರಾಗುತ್ತದೆ ಎಂಬ ಸೂಕ್ಷ್ಮ ವಿಚಾರವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ. ನೈಟ್ ಎಫೆಕ್ಟ್ ಜೊತೆ ಮಳೆಯಲ್ಲಿ ಹೆಚ್ಚು ಚಿತ್ರೀಕರಣ ನಡೆದಿದೆ. ಹಗಲು ರಾತ್ರಿ ಎನ್ನದೆ ಸುಮಾರು 35 ದಿನ ಶೂಟಿಂಗ್ ಮಾಡಿದ್ದು , ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದೇವೆ. ಅದರಲ್ಲೂ amazon ಪ್ರೈಮ್ ಸಂಸ್ಥೆಯು ನಮ್ಮ ಜೊತೆ ಕೈಜೋಡಿಸಿ ಓಟಿಟಿ ಹಕ್ಕನ್ನು ಪಡೆದುಕೊಂಡಿದೆ. ನಮ್ಮ ಚಿತ್ರದ ಕಲಾವಿದರು ತಂತ್ರಜ್ಞರು ಎಲ್ಲರೂ ತುಂಬು ಸಹಕಾರ ನೀಡಿದ್ದಾರೆ. ಮಾರ್ಚ್ 06ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.

ಈ ಚಿತ್ರದ ನಿರ್ಮಾಪಕ ಉಮೇಶ್ ಗೌಡ ಮಾತನಾಡುತ್ತಾ ನಮ್ಮ ಚಿತ್ರದ ಓ ಟಿ ಟಿ ಹಕ್ಕನ್ನ amazon ಪ್ರೈಮ್ ಸಂಸ್ಥೆಯು ಪಡೆದುಕೊಂಡಿದೆ. ನಮ್ಮ ಚಿತ್ರದ ಪ್ರಚಾರದ ಕಾರ್ಯ ಇಲ್ಲಿಂದ ಆರಂಭಿಸುತ್ತಿದ್ದೇವೆ. ಹುಬ್ಬಳ್ಳಿಯಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರಚಾರದ ಕಾರ್ಯ ಮಾಡುತ್ತೇವೆ. ಅದೇ ರೀತಿ ಕೇರಳದ ವೈನಾಡು ಸೇರಿದಂತೆ ಹಲವು ಭಾಗಗಳಲ್ಲೂ ಕೂಡ ಪ್ರಚಾರದ ಕೆಲಸ ನಡೆಸಿ ನಂತರ ಮಾರ್ಚ್ 06ರಂದು ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಉಳಿದ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವ ಉದ್ದೇಶವಿದೆ. ನಮ್ಮ ತಂಡಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಕೇಳಿಕೊಂಡರು.

ನಟ ಪ್ರಮೋದ್ ಶೆಟ್ಟಿ ಮಾತನಾಡುತ್ತಾ ನನಗೆ ಪೊಲೀಸ್ ಪಾತ್ರಗಳು ಹೆಚ್ಚಾಗಿ ಹುಡುಕಿಕೊಂಡು ಬರುತ್ತದೆ. ಆದರೆ ಈ ಚಿತ್ರ ಬಹಳ ವಿಭಿನ್ನವಾಗಿದೆ, ಕನ್ನಡ ಹಾಗೂ ಮಲಯಾಳಂ ಭಾಷೆ ಎರಡರಲ್ಲೂ ಸಿದ್ಧವಾಗಿದೆ. ನಾನೇ ಮಲಯಾಳಂ ಡಬ್ ಕೂಡ ಮಾಡಿದ್ದೇನೆ. ಇದು ಸ್ಟೇಷನ್ ಸುತ್ತ ನಡೆಯೋ ಘಟನೆ. ಒಂದು ರೀತಿ ಬೆಲ್ ಬಾಟಮ್ ಫೀಲ್ ಕೊಡುತ್ತೆ.. ಈ ಚಿತ್ರ ಬಹಳ ಕುತೂಹಲಕಾರಿಯಾಗಿದೆ ನೀವೆಲ್ಲರೂ ನೋಡಿ ಎಂದು ಕೇಳಿಕೊಂಡರು. ಹಿರಿಯ ನಟ ಸಿದ್ಲಿಂಗು ಶ್ರೀಧರ್ ಮಾತನಾಡುತ್ತಾ ನಾನು ಹೆಡ್ ಕಾನ್ಸ್ಟೇಬಲ್ ಪಾತ್ರ ಮಾಡಿದ್ದೇನೆ. ಸುಮಾರು 15 ದಿನಗಳ ಕಾಲ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಇದೊಂದು ರೀತಿ ಸೀಟ್ ಎಡ್ಜ್ ಚಿತ್ರವಾಗಿದೆ ಇಂತಹ ಚಿತ್ರಗಳು ಗೆಲ್ಲಬೇಕು ಎಂದರು. ಅದೇ ರೀತಿ ನಟಿ ಅರ್ಚನಾ ಕೊಟ್ಟಿಗೆ ಮಾತನಾಡುತ್ತಾ ನನ್ನದು ಇದರಲ್ಲಿ ಪೊಲೀಸ್ ಪಾತ್ರವೇ , ಆದರೆ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಹೇಳೋ ಹಾಗಿಲ್ಲ , ನೀವೆಲ್ಲರೂ ನಮ್ಮ ಚಿತ್ರವನ್ನು ನೋಡಿ ಯಶಸ್ವಿಗೊಳಿಸಿ ಎಂದರು.

ಅದೇ ರೀತಿ ನಟ ಸಾಯಿ ಭೈರವ ಕೂಡ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇನ್ನು ಈ ಚಿತ್ರದಲ್ಲಿ ಮಲಯಾಳಂನ ಪ್ರತಿಭೆ ಜಾನ್ ಕೈಪ್ಪಲ್ಲಿ ಪ್ರಮುಖ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ದೇವರಾಜ್ ಎಸ್ ಪಿ ಪಾತ್ರವನ್ನು ನಿರ್ವಹಿಸಿದ್ದಾರೆ. ಉಳಿದಂತೆ ಹಲವಾರು ಯುವ ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು , ಆರ್. ಎಸ್ .ಆನಂದ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ
ರವಿ ಸಿಂಧನೂರು ಸೇರಿದಂತೆ ಹಲವಾರು ಬಂದು ತಂಡಕ್ಕೆ ಶುಭವನ್ನ ಕೋರಿದರು. ಎರಡು ಭಾಷೆಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಮಾರ್ಚ್ 06ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!