ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಸಂಜೆ 5 ಗಂಟೆಗೆ ಅಧಿಕೃತ ಚಾಲನೆ ದೊರೆಯಲಿದೆ.
ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ತ್ರೋತ್ಸವದ ರಾಯಭಾರಿಗಳಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ ಹಾಗೂ ನಟಿ ರುಕ್ಮಿಣಿ ವಸಂತ್ ಭಾಗವಹಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಉಪಸ್ಥಿತರಿರಲಿದ್ದಾರೆ.
‘ಬೆಂಗಳೂರಿನಲ್ಲಿ ಜಗತ್ತು’ ಎಂಬ ಥೀಮ್ ಅಡಿಯಲ್ಲಿ ಜನವರಿ 30ರಿಂದ ಫೆಬ್ರವರಿ 6ರವರೆಗೆ ನಡೆಯಲಿರುವ ಚಿತ್ರೋತ್ಸವದಲ್ಲಿ 65 ದೇಶಗಳ ಸುಮಾರು 225 ಅತ್ಯುತ್ತಮ ಚಿತ್ರಗಳು ಪ್ರದರ್ಶನವಾಗಲಿವೆ. ಚಲನಚಿತ್ರೋತ್ಸವಕ್ಕೆ ‘ಸ್ತ್ರೀ ಸಂವೇದನೆ, ಸಮಾನತೆಯ ದನಿ’ ಟ್ಯಾಗ್‌ಲೈನ್ ಆಯ್ಕೆ ಮಾಡಲಾಗಿದೆ.
ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗ, ಚಿತ್ರ ಭಾರತಿ, ಕನ್ನಡ ಸಿನಿಮಾ ಸ್ಪರ್ಧೆ, ಸಮಕಾಲೀನ ವಿಶ್ವ ಚಿತ್ರಗಳು, ಫಿಪ್ರೆಸ್ಕಿ–ವಿಮರ್ಶಕರ ವಾರ, ಜೀವನ ಕಥನ ಆಧಾರಿತ ಚಿತ್ರಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ.
ಚಿತ್ರ ಪ್ರದರ್ಶನಗಳು ಲುಲು ಮಾಲ್ (ಸಿನಿಪೊಲಿಸ್), ಸುಚಿತ್ರಾ ಫಿಲಂ ಸೊಸೈಟಿ, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘಗಳಲ್ಲಿ ನಡೆಯಲಿವೆ.
ಡಾ. ರಾಜಕುಮಾರ್ ಅಭಿನಯದ ಐತಿಹಾಸಿಕ ಕನ್ನಡ ಚಿತ್ರಗಳು, ಪೋಲಿಷ್ ನಿರ್ದೇಶಕ ಆಂದ್ರೆ ವಾಜ್ದಾ ಅವರ ಚಿತ್ರಗಳು, ಸ್ಮಿತಾ ಪಾಟೀಲ್ ಅವರ ಆಯ್ದ ಚಿತ್ರಗಳು, ಅಚಿತಪಾಂಗ್ ವೀರಸೆಥಕುಲ್ ಅವರ ಪ್ರಮುಖ ಚಿತ್ರಗಳು, ಭಾರತೀಯ ಕ್ಲಾಸಿಕ್ ಸಿನಿಮಾಗಳು ಚಿತ್ರೋತ್ಸವವದ ವಿಶೇಷ ಆಕರ್ಷಣೆಯಾಗಿವೆ.
—–





Be the first to comment