‘ಫ್ಯಾನ್’ ಚಿತ್ರದ ಧ್ವನಿಸುರುಳಿ ಬಿಡುಗಡೆ

ಬಾಲಿವುಡ್‍ನ ಸ್ಟಾರ್ ಶಾರುಖ್‍ಖಾನ್ ನಟಿಸಿದ್ದ ಫ್ಯಾನ್ ಚಿತ್ರದ ಟೈಟಲ್‍ನಲ್ಲಿ ಕನ್ನಡದಲ್ಲೂ ಚಿತ್ರವೊಂದು ತಯಾರಾಗಿದ್ದು, ಇಲ್ಲಿ ಕಿರುತೆರೆ ನಾಯಕ ಹಾಗೂ ಅವನ ಅಭಿಮಾನಿಯ ನಡುವಿನ ಕಥೆಯನ್ನು ಒಳಗೊಂಡಿದೆ. ಮೊನ್ನೆ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.ಕಲಾವಿದರ ಸಂಘದ ಆವರಣದಲ್ಲಿ ನಡೆದ ಆ ಸಮಾರಂಭಕ್ಕೆ ಶಾಸಕ ಎಂ.ಕೃಷ್ಣಪ್ಪ, ನಟ ರಕ್ಷಿತ್‍ಶೆಟ್ಟಿ, ವಾಣಿಜ್ಯಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಬಾ.ಮಾ.ಹರೀಶ್, ಆನಂದ್ ಆಡಿಯೋದ ಆನಂದ್ ಛಾಬ್ರಿಯಾ ಅವರು ಆಗಮಿಸಿ ಧ್ವನಿಸುರುಳಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಫ್ಯಾನ್ ಚಿತ್ರವನ್ನು ದರ್ಶಿತ್‍ಭಟ್ ಅವರು ನಿರ್ದೇಶಿಸಿದ್ದು ಇವರು ಅಪ್ಪಟ ಕರಾಟೆ ಕಿಂಗ್ ಶಂಕರ್‍ನಾಗ್ ಅವರ ಅಭಿಮಾನಿಯಾಗಿದ್ದು ಬಹುತೇಕ ಶಂಕರ್‍ನಾಗ್ ರ ಹುಟ್ಟೂರಾದ ಹೊನ್ನಾರದಲ್ಲೇ ಚಿತ್ರೀಕರಣ ಮಾಡಲಾಗಿದೆ.ನಿರ್ದೇಶಕ ದರ್ಶಿತ್ ಮಾತನಾಡಿ, ಈ ಚಿತ್ರದ ನಾಯಕ ಶಂಕರ್‍ನಾಗ್ ಅಭಿಮಾನಿಯಾಗಿದ್ದು , ಈ ಚಿತ್ರವನ್ನು ಭಗ್ನಪ್ರೇಮಿಗಳಿಗೆ ಅರ್ಪಣೆ ಮಾಡುತ್ತಿದ್ದೇವೆ. ಈ ಚಿತ್ರಕ್ಕೆ ಹಾಡುಗಳು ಪೂರಕವಾಗಿದ್ದು, ಸೋಷಿಯಲ್ ಚಾಟಿಂಗ್ ಬಗ್ಗೆ ಕೂಡ ಒಂದು ಗೀತೆಯನ್ನು ಮಾಡಲಾಗಿದೆ. ವಿಕ್ರಂ ಮತ್ತು ಚಂದನಾ ದಂಪತಿಗಳು ಸಂಗೀತ ಸಂಯೋಜನೆ ಮಾಡಿದ್ದಾರೆ.

ಸೂಪರ್ ಹಿಟ್ ಟೀವಿ ಸೀರಿಯಲ್‍ವೊಂದರ ಕಥೆಯ ಎಳೆ ಇದರಲ್ಲಿದ್ದು, ಹೊನ್ನಾವರ, ಕುಮಟ, ಮುರುಡೇಶ್ವರದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಶಂಕರ್‍ನಾಗ್ ಹುಟ್ಟಿ ಬೆಳೆದ ಹೊನ್ನಾವರದ ಚಿತ್ರಾಪುರದಲ್ಲಿ ಜಯಂತ್‍ಕಾಯ್ಕಿಣಿ ಅವರು ಬರೆದ ಹಾಡನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ 4 ಹಾಡುಗಳಿದ್ದು, ಪ್ರತಿ ಹಾಡು ಚಿತ್ರಕಥೆಗೆ ಪೂರಕವಾಗಿದೆ. ಕಥೆಯನ್ನು ಬಿಟ್ಟು ಯಾವ ಹಾಡನ್ನೂ ಮಾಡಿಲ್ಲ ಎಂದರು.ರಕ್ಷಿತ್ ಶೆಟ್ಟಿ ಮಾತನಾಡಿ, ಶಂಕರ್‍ನಾಗ್ ಅವರು ಚಿತ್ರರಂಗದಲ್ಲಿ 11 ವರ್ಷಗಳಲ್ಲೇ ಇಡೀ ಭಾರತದಲ್ಲೇ ತಮ್ಮ ಛಾಪು ಮೂಡಿಸಿದ್ದರು. ಅವರೊಂದಿಗೆ ಯಾರನ್ನೂ ಹೋಲಿಕೆ ಮಾಡಲು ಆಗುವುದಿಲ್ಲ, ನಮಗೆ ಅವರೇ ಸ್ಫೂರ್ತಿ ಎಂದು ಹೇಳಿದರು.ಚಿನ್ನೇಗೌಡರು ಮಾತನಾಡಿ, ದರ್ಶಿತ್ ಶಂಕರ್‍ನಾಗ್ ಅವರ ಅಭಿಮಾನಿಯಾಗಿದ್ದು, ಅವರ ಮೇಲಿನ ಪ್ರೀತಿಯಿದಲೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ನಾಯಕ, ನಾಯಕಿ ಮುದ್ದಾಗಿ ಕಾಣಿಸುತ್ತಾರೆ. ನಾಯಕಿ ಅದಿತಿಶೆಟ್ಟಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ರೀತಿ ಚಿತ್ರರಂಗದಲ್ಲಿ ಬೆಳಗಲಿ ಎಂದು ಹಾರೈಸಿದರು.ಶಂಕರ್‍ನಾಗ್‍ರ ಅಭಿಮಾನಿ, ಟಿವಿ ನಟನಾಗಿ ಆರ್ಯನ್ ಕಾಣಸಿಕೊಂಡಿದ್ದರೆ, ಆತನನ್ನು ಪ್ರೀತಿಸುವ ಹುಡುಗಿಯ ಪಾತ್ರವನ್ನು ಆದ್ವಿತಿಶೆಟ್ಟಿ ನಿಭಾಯಿಸಿದ್ದಾರೆ. ಸಮೀಕ್ಷಾ, ವಿಜಯಕಾಶಿ, ಮಂಡ್ಯರಮೇಶ್, ನವೀನ್ ಪಡೀಲ್ ಮುಂತಾದವರು ನಟಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ಸಿಕ್ಸರ್ ಬಾರಿಸಲು ಹೊರಟಿರುವ ನಿರ್ದೇಶಕ ದರ್ಶಿತ್ಗೆ ಪ್ರೇಕ್ಷಕರ ಬೆಂಬಲ ದೊರೆಯುವಂತಾಗಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!