45

45 ಟ್ರೇಲರ್ ಬಿಟ್ಟು‌ಕೊಟ್ಟ ಗುಟ್ಟೇನು?

ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಹೀಗೆ ಕನ್ನಡ ಚಿತ್ರರಂಗದ ಮೂವರು ಪ್ರಮುಖ ಕಲಾವಿದರು ಮೊದಲ ಬಾರಿ ಒಂದಾಗಿ ನಟಿಸುತ್ತಿರುವ ಚಿತ್ರ 45. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡದೆ ಕುತೂಹಲ ಕಾಯ್ದುಕೊಂಡಿದ್ದಾರೆ ನಿರ್ದೇಶಕ ಅರ್ಜುನ್ ಜನ್ಯ. ಇದೀಗ ಬಿಡುಗಡೆಯಾಗಿರುವ ಟ್ರೈಲರ್ ಗರುಡಪುರಾಣಕ್ಕೂ ಚಿತ್ರಕ್ಕೂ ಸಂಬಂಧ ಇರಬಹುದೆನ್ನುವ ಕುತೂಹಲ ಸೃಷ್ಟಿಸಿದೆ.

ಡಿಸೆಂಬರ್ 25 ರಂದು ತೆರೆಗೆ ಬರಲಿರುವ ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.‌ ಬೆಂಗಳೂರಿನ ವಿದ್ಯಾಪೀಠದ ಬಳಿಯಿರುವ ಮೈದಾನದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಈ ಚಿತ್ರದ ಟ್ರೇಲರ್ ಅನಾವರಣವಾಗಿದ್ದು ವಿಶೇಷ.

ಸಮಾರಂಭದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಸುಧಾರಾಣಿ, ಪ್ರಮೋದ್ ಶೆಟ್ಟಿ, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ನಿರ್ದೇಶಕ ಅರ್ಜುನ್ ಜನ್ಯ ಆಡಿರುವ ಮಾತುಗಳೇ ಹೊಸ ಕುತೂಹಲಕ್ಕೆ ಕಾರಣವಾಗಿದೆ.

“ನಮ್ಮ ಹಿರಿಯರು ನಮಗೆ ತಿಳಿಸಿಕೊಟ್ಟಿರುವ ಅನೇಕ ಸಂಸ್ಕೃತಿಯನ್ನು ನಾವು ಮರೆತಿದ್ದೇವೆ. ಆ ವಿಷಯದ ಒಂದೆಳೆ ಇಟ್ಟುಕೊಂಡು ಈ ಸಿನಿಮಾ ಕಥೆ ಮಾಡಿದ್ದೇನೆ” ಎಂದು ಅರ್ಜುನ್ ಜನ್ಯ ಹೇಳಿದ್ದಾರೆ. ಅಲ್ಲಿಗೆ ಈ‌ ಕಥೆಯಲ್ಲಿ ಗರುಡ ಪುರಾಣದ ಉಲ್ಲೇಖ ಈ ಚಿತ್ರದಲ್ಲಿದೆ ಎನ್ನುವ ಕುತೂಹಲ ಸೃಷ್ಟಿಯಾಗಿದೆ.

ಗರುಡ ಪುರಾಣ ಹೇಳುವುದೇನು?

ಗರುಡ ಪುರಾಣದ ಪ್ರಕಾರ ಜಗತ್ತು ಲಕ್ಷ್ಮಿ ಮತ್ತು ವಿಷ್ಣುವಿನ ಸುತ್ತ ಸುತ್ತುತ್ತದೆ.‌ ವಿಷ್ಣು ಬ್ರಹ್ಮ ಎಂದು ಕರೆಯಲ್ಪಡುವ ಬದಲಾಗದ ವಾಸ್ತವ ಮತ್ತು ಲಕ್ಷ್ಮೀ ಮಾಯೆ ಎಂದು ಕರೆಯಲ್ಪಡುವ ಬದಲಾಗುತ್ತಿರುವ ವಾಸ್ತವವನ್ನು ಒಳಗೊಂಡಿದೆ.‌ ಇದರಲ್ಲಿ ಸಾವಿನ ನಂತರದ ಜೀವಬದ ಬಗ್ಗೆಯೂ ಹೇಳಲಾಗುತ್ತದೆ. ಸ್ವರ್ಗ ನರಕಗಳ ಬಗ್ಗೆಯೂ ಉಲ್ಲೇಖಗಳಿವೆ. ಚಿತ್ರದ ಟೀಸರ್ ಈಗಾಗಲೇ ಒಂದು ಕಾಲ್ಪನಿಕ ಲೋಕವನ್ನು ಜಗತ್ತಿಗೆ ಪರಿಚಯಿಸಿದೆ. ಅದು ಗರುಡ ಪುರಾಣದಲ್ಲಿರುವ ನರಕವನ್ನು ಹೋಲುತ್ತದೆ ಎನ್ನಲಾಗಿದೆ.‌ ಮಾತ್ರವಲ್ಲ ಗರುಡ ಪುರಾಣದ ಕಾಲ್ಪನಿಕತೆಗೆ ಇಲ್ಲಿನ ಕಥೆಯನ್ನು ಪೂರಕವಾಗುವ ಮಾದರಿಯಲ್ಲಿ ಅರ್ಜುನ್ ಜನ್ಯ ತಯಾರು ಮಾಡಿದ್ದಾರೆ ಎಂದು ಊಹಿಸಲಾಗುತ್ತಿದೆ.

ಈ ಟ್ರೇಲರ್ ಚೆನ್ನಾಗಿ ಮೂಡಿಬಂದಿದೆ ಎಂದು ಮಾತನಾಡಿದ ನಟ ಶಿವರಾಜಕುಮಾರ್, ಚಿತ್ರದಲ್ಲಿ ಸುಧಾರಾಣಿ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸಿದಾಗಿ ತಿಳಿಸಿದರು. ಈ ಚಿತ್ರದ ಬಿಡುಗಡೆ ಬಳಿಕ ಅರ್ಜುನ್ ಜನ್ಯ ದೊಡ್ಡ ಸ್ಥಾನಕ್ಕೆ ಹೋಗುತ್ತಾರೆ ಎಂದು ಶಿವಷ್ಣ ಭವಿಷ್ಯ ನುಡಿದಿದ್ದಾರೆ.

ಈ ಸಿನಿಮಾದಲ್ಲಿ ತೆರೆಯ ಮೇಲೆ ಮೂರು ಸ್ಟಾರ್ ಗಳು ಕಾಣಿಸಿದ್ದೇವೆ. ಅದರೆ ತೆರೆಯ ಹಿಂದೆ ಮೂರು ಸ್ಟಾರ್ ಗಳು‌ ಇದ್ದಾರೆ. ಮೊದಲ ಸ್ಟಾರ್ ನಿರ್ಮಾಪಕ ರಮೇಶ್ ರೆಡ್ಡಿ. ಅವರು ದುಡಿದಿದ್ದನ್ನೆಲ್ಲಾ ಈ ಚಿತ್ರಕ್ಕೆ ಸುರಿದಿದ್ದಾರೆ. ಎರಡನೇ ಸ್ಟಾರ್ ನಿರ್ದೇಶಕ ಅರ್ಜುನ್ ಜನ್ಯ ಎರಡು ವರ್ಷದಿಂದ ಶ್ರಮ ಹಾಕಿದ್ದಾರೆ. ಮೂರನೇ ಸ್ಟಾರ್ ಛಾಯಾಗ್ರಾಹಕ ಸತ್ಯ ಹೆಗಡೆ ಎಂದು ತಂತ್ರಜ್ಞರಿಗೆ ಗೌರವ ಸಲ್ಲಿಸಿ ನಟ ಉಪೇಂದ್ರ ಮಾತನಾಡಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರವನ್ನು ನೀಡಿದ ಪ್ರತಿಯೊಬ್ಬರಿಗೂ ನಿರ್ಮಾಪಕ ರಮೇಶ್ ರೆಡ್ಡಿ ಧನ್ಯವಾದ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!