ಮೋಹನ್ ಲಾಲ್ ಅವರನ್ನು ತಾರೆಯಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಲಯಾಳಂ ಚಿತ್ರಕತೆಗಾರ, ನಟ, ನಿರ್ದೇಶಕ ಶ್ರೀನಿವಾಸನ್ (69) ಇಂದು ನಿಧನರಾಗಿದ್ದಾರೆ.
ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೇರಳದ ಉದಯಂಪೆರೂರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಶ್ರೀನಿವಾಸನ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರು ಚಿತ್ರರಂಗದಲ್ಲಿ ಕೆಲ ವರ್ಷಗಳಿಂದ ಸಕ್ರಿಯರಾಗಿರಲಿಲ್ಲ.
1976ರಲ್ಲಿ ಬಿಡುಗಡೆಯಾದ ಮನಿಮುಳಕ್ಕಮ್ ಅವರ ಮೊದಲ ಸಿನಿಮಾ. ಸುಮಾರು 40 ವರ್ಷಗಳ ಸಿನಿ ಜೀವನದಲ್ಲಿ 200ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು. 2018ರಲ್ಲಿ ಅವರು ಕೊನೆಯ ಬಾರಿ ಬಣ್ಣ ಹಚ್ಚಿದ್ದರು.
ಶ್ರೀನಿವಾಸನ್ ತಮ್ಮ ಸಹಜ ಸಂಭಾಷಣೆ, ನೈಜ ಬದುಕನ್ನು ಪ್ರತಿಬಿಂಬಿಸುವ ಕಥಾವಸ್ತುಗಳ ಮೂಲಕ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದರು. ಅವರ ಚಿತ್ರಕಥೆಗಳು ಮಧ್ಯಮ ವರ್ಗದ ಕುಟುಂಬಗಳ ಬದುಕು, ಹಾಸ್ಯ–ಭಾವನೆಗಳ ಮಿಶ್ರಣದಿಂದ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗಿದ್ದವು.
ಮೋಹನ್ ಲಾಲ್ ಅವರ ಆರಂಭಿಕ ಮತ್ತು ಪ್ರಮುಖ ಚಿತ್ರಗಳಿಗೆ ಶ್ರೀನಿವಾಸನ್ ಅವರ ಕಥೆ–ಸಂಭಾಷಣೆ ದೊಡ್ಡ ಬಲವಾಗಿತ್ತು. ಈ ಜೋಡಿಯ ಚಿತ್ರಗಳು ಮಲಯಾಳಂ ಸಿನಿರಂಗದಲ್ಲಿ ಇತಿಹಾಸ ನಿರ್ಮಿಸಿವೆ.
ಕೇರಳದ ಕಣ್ಣೂರ್ ಜಿಲ್ಲೆಯಲ್ಲಿ ಜನಿಸಿದ ಅವರು, ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಚೆನ್ನೈಯ ಫಿಲ್ಮ್ ಅಂಡ್ ಟೆಲಿವಿಷನ್ ಸಂಸ್ಥೆಯಲ್ಲಿ ಸಿನಿಮಾ ತರಬೇತಿ ಪಡೆದಿದ್ದರು. ಶ್ರೀನಿವಾಸನ್ ಅವರ ನಿಧನದಿಂದ ದಕ್ಷಿಣ ಭಾರತದ ಚಿತ್ರರಂಗಕ್ಕೆ ಅಪಾರ ನಷ್ಟ ಉಂಟಾಗಿದೆ. ಮಲಯಾಳಂ ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.
—–





Be the first to comment