ಚಿತ್ರ: ಫ್ಲರ್ಟ್
ನಿರ್ದೇಶಕ: ಚಂದನ್ ಕುಮಾರ್
ನಿರ್ಮಾಪಕ: ಚಂದನ್ ಕುಮಾರ್
ತಾರಾಗಣ: ಚಂದನ್ ಕುಮಾರ್, ನಿಮಿಕಾ ರತ್ನಾಕರ್
ರೇಟಿಂಗ್: 4/5
ಮೊದಲ ನೋಟಕ್ಕೆ ಇದೊಂದು ಪ್ರೇಮಚಿತ್ರ. ಆದರೆ ನೋಡುತ್ತಾ ಹೋದಂತೆ ಸಸ್ಪೆನ್ಸ್ ಥ್ರಿಲ್ಲರ್ ಆಗಿ ಕಾಡುತ್ತದೆ. ಅದಕ್ಕೆ ಕಾರಣ ಕಥೆಯಲ್ಲಿರುವ ಅನಿರೀಕ್ಷಿತ ತಿರುವುಗಳು.
ಮೊದಲಾರ್ಧದಲ್ಲಿ ಚಿತ್ರದ ನಾಯಕ ಒಬ್ಬ ಫ್ಲರ್ಟ್. ಹೆಣ್ಣುಮಕ್ಕಳೊಡನೆ ಫ್ಲರ್ಟ್ ಮಾಡಿ ಅವರ ಕ್ಯಾರೆಕ್ಟರ್ ಬಗ್ಗೆ ಅವರದೇ ಪ್ರಿಯಕರರಿಗೆ ಮಾಹಿತಿ ನೀಡುವ ಗುಪ್ತಚರ. ಹೃದಯಚೋರ! ಆದರೆ ದ್ವಿತೀಯಾರ್ಧದಲ್ಲಿ ಬರುವ ಫ್ಲ್ಯಾಶ್ ಬ್ಯಾಕ್ ಸ್ಟೋರಿ ಹೇಳುವುದೇ ಬೇರೆ. ಈತನೊಬ್ಬ ಸಂಭಾವಿತ ಹುಡುಗ. ಏಕ ಪ್ರೇಯಸೀ ವ್ರತಸ್ಥ! ಹಾಗಾದರೆ ಸತ್ಯ ಯಾವುದು? ಅಥವಾ ಇವೆರಡನ್ನೂ ಮೀರಿದ ಸತ್ಯ ಇನ್ನೊಂದು ಇದೆಯಾ? ಉತ್ತರ ಸಿಗಬೇಕಾದರೆ ನೀವು ಈ ಚಿತ್ರ ನೋಡಲೇಬೇಕು. ಇಷ್ಟಕ್ಕೂ ಕೋರ್ಟ್ ಕಟಕಟೆಯಿಂದ ಶುರುವಾಗುವ ಚಿತ್ರದಲ್ಲಿ ಕೃಷ್ಣ ಅತ್ಯಾಚಾರದ ಆರೋಪಿಯಾಗಿ ನಿಂತಿರುತ್ತಾನೆ. ಈ ಆರೋಪ ಹೊರಿಸಿದ್ದು ಯಾರು? ಅಂತಿಮ ತೀರ್ಪು ಏನು? ಎನ್ನುವುದು ಕೂಡ ಕಥೆಗೆ ಕುತೂಹಲ ನೀಡುವ ಅಂಶವಾಗಿದೆ.
ಕೃಷ್ಣನಾಗಿ ಚಂದನ್ ಕುಮಾರ್ ಕಥೆಗೆ ತಕ್ಕಂತೆ ಕಾಣಿಸಿದ್ದಾರೆ. ಮೊದಲಾರ್ಧದಲ್ಲಿ ಫ್ಲರ್ಟ್ ಬಾಯ್ ಗೆ ಜೀವ ಕೊಟ್ಟ ಹಾಗೆ ವಿರಾಮದ ಬಳಿಕ ಹೇಳಲಾಗುವ ಫ್ಲ್ಯಾಶ್ ಬ್ಯಾಕ್ ಸ್ಟೋರಿಯಲ್ಲಿ ಗಂಭೀರ ಸ್ವಭಾವದ ಹುಡುಗನಾಗಿ ಕಾಣಿಸಿದ್ದಾರೆ. ಎರಡೂ ಪಾತ್ರಗಳನ್ನು ನಂಬುವ ರೀತಿಯಲ್ಲಿ ಪ್ರಸ್ತುತ ಪಡಿಸುವಲ್ಲಿ ಚಂದನ್ ಗೆದ್ದಿದ್ದಾರೆ.
ಚಿತ್ರದಲ್ಲಿ ಮತ್ತೊಂದು ಪ್ರಧಾನ ಪಾತ್ರವಾಗಿ ಕಾಣಿಸಿರುವವರು ನಿಮಿಕಾ ರತ್ನಾಕರ್. ನಿಮಿಕಾಗೆ ಈ ಚಿತ್ರ ಒಳ್ಳೆಯದೊಂದು ಬ್ರೇಕ್ ಕೊಟ್ಟರೆ ಅಚ್ಚರಿ ಏನಿಲ್ಲ. ಸನಿಹ ಎನ್ನುವ ಹುಡುಗಿಯಾಗಿ ನಟಿಸಿರುವ ನಿಮಿಕಾ ತನ್ನ ಕ್ಯಾರೆಕ್ಟರ್ ಬಗ್ಗೆ ಏನೆಲ್ಲಾ ಕಥೆ ಕಟ್ಟುತ್ತಾರೋ, ಆ ಎಲ್ಲ ಪಾತ್ರಗಳಿಗೆ ಜೀವ ತುಂಬುವಂತೆ ಕಾಣಿಸಿದ್ದಾರೆ. ಈ ಎರಡು ಪ್ರಧಾನ ಪಾತ್ರಗಳಾಚೆ ಕೂಡ ಪ್ರತಿಯೊಂದು ಪಾತ್ರಗಳನ್ನು ಕೂಡ ಪ್ರಧಾನವಾಗಿಸುವಂಥ ಅವಕಾಶಗಳನ್ನು ನೀಡಲಾಗಿದೆ. ಮೊದಲಾರ್ಧದಲ್ಲಿ ಹಾಸ್ಯನಟನಂತೆ ಕಾಣಿಸುವ ಗಿರೀಶ್ ಶಿವಣ್ಣ, ಮಧ್ಯಂತರದ ಬಳಿಕ ತಮ್ಮ ಮತ್ತೊಂದು ಮುಖದ ಪ್ರದರ್ಶನ ಮಾಡುತ್ತಾರೆ.
ನಿಮಿಕಾ ತಂದೆಯ ಪಾತ್ರದಲ್ಲಿ ಅರವಿಂದ್ ರಾವ್ ನಟಿಸಿದ್ದಾರೆ. ಚಂದನ್ ಪರ ವಕೀಲರಾಗಿ ಸಾಧುಕೋಕಿಲ ನಗಿಸುತ್ತಾರೆ. ಎದುರು ಭಾಗದ ವಕೀಲರ ಪಾತ್ರದಲ್ಲಿ ಶ್ರುತಿ ಕಾಣಿಸಿದ್ದಾರೆ. ನ್ಯಾಯಾಧೀಶರಾಗಿ ಅವಿನಾಶ್ ನೀಡುವ ತೀರ್ಮಾನದ ಬಗ್ಗೆ ಪ್ರೇಕ್ಷಕರ ಕುತೂಹಲ ಸೃಷ್ಟಿಯಾಗುತ್ತದೆ. ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡಗೂ ಇಲ್ಲಿ ಒಂದು ಪ್ರಮುಖ ಪಾತ್ರವಿದೆ.
ಪ್ರತಿಯೊಂದು ಸಂಭಾಷಣೆಗಳು ಕೂಡ ಆಕರ್ಷಕವಾಗಿವೆ. ಸಾಂದರ್ಭಿಕವಾಗಿವೆ. ಕಿಚ್ಚ ಸುದೀಪ್ ಗಾಯನ ಕೂಡ ಸಂದರ್ಭಕ್ಕೆ ಪೂರಕವಾಗಿವೆ. ಚಂದನ್ ನಟನಾಗಿ ಮಾತ್ರವಲ್ಲ ಕಥೆಗಾರನಾಗಿ, ನಿರ್ದೇಶಕನಾಗಿಯೂ ತಾನು ಪ್ರತಿಭಾವಂತ ಎಂದು ತೋರಿಸಿಕೊಟ್ಟಿದ್ದಾರೆ.






Be the first to comment