ಚಿತ್ರ: ಪಾಠಶಾಲಾ
ನಿರ್ದೇಶಕ: ಹೆದ್ದೂರು ಮಂಜುನಾಥ ಶೆಟ್ಟಿ
ನಿರ್ಮಾಪಕ: ಹೆದ್ದೂರು ಮಂಜುನಾಥ ಶೆಟ್ಟಿ
ತಾರಾಗಣ: ಪ್ರಶಾಂತ್ ನಟನ, ಬಾಲಾಜಿ ಮನೋಹರ್, ಕಿರಣ್ ನಾಯಕ್ ಮುಂತಾದವರು.
ಬಿಸಿನಿಮಾಸ್ ರೇಟಿಂಗ್: 3.5/5
ಎಲ್ಲಿ ನೋಡಿದರೂ ಹಸಿರ ಸಿರಿ, ನೀರ ಝರಿ. ಇವುಗಳ ಮಧ್ಯೆ ಪ್ರಕೃತಿಯ ಮಕ್ಕಳಂತೆ ಬದುಕುವ ಜನ ಸಮೂಹ. ಮಕ್ಕಳ ಶಿಕ್ಷಣಕ್ಕೊಂದು ಸರ್ಕಾರಿ ಶಾಲೆ. ಇಷ್ಟರಲ್ಲೇ ಸುತ್ತುವ ಕಥೆಗೆ ಅರಣ್ಯದ ಆಳ ಸೇರಿಕೊಳ್ಳುತ್ತಿದ್ದಂತೆ ಹೊಸ ಪಾಠದ ಆರಂಭವಾಗುತ್ತದೆ. ಅದುವೇ ಪಾಠಶಾಲಾ ಸಿನಿಮಾದ ಕಥೆ.
ಒಂದು ಹಳ್ಳಿಯಲ್ಲಿರುವ ಸರ್ಕಾರಿ ಶಾಲೆ ಹೇಗಿರುತ್ತದೆ ಎನ್ನುವುದನ್ನು ಕಣ್ಣಾರೆ ಅನುಭವಿಸಿದಷ್ಟೇ ಸಹಜವಾಗಿ ಪರದೆ ಮೇಲೆ ತೋರಿಸುತ್ತಾ ನಿರ್ದೇಶಕರು ಕಥೆ ಹೇಳುತ್ತಾ ಸಾಗಿದ್ದಾರೆ.
ವಿದ್ಯಾರ್ಥಿಗಳನ್ನು ಹೇಗೆ ಶಾಲೆಗೆ ಸೇರಿಸಲಾಗುತ್ತದೆ ಎನ್ನುವಲ್ಲಿಂದ ಶುರುಮಾಡಿ, ಅವರಿಗೆ ಹೇಗೆ ಪಾಠ ಮಾಡಲಾಗುತ್ತದೆ, ಅವರು ಶಾಲೆಗೆ ಬರುವ ದಾರಿ ಹೇಗಿರುತ್ತದೆ ಎನ್ನುವ ಪ್ರತಿಯೊಂದು ಅಂಶಗಳ ಮನಮುಟ್ಟುವಂತೆ ಹೇಳಿ ಮನಸೂರೆ ಮಾಡಿದ್ದಾರೆ. ಮತ್ತೊಂದೆಡೆ ಮಲೆನಾಡ ಹಳ್ಳಿಗಳ ವಾತಾವರಣವನ್ನು ಅತ್ಯಂತ ಸಹಜವಾಗಿ ಕಟ್ಟಿಕೊಡಲಾಗಿದೆ. ಮನೆಮನೆಗಳ ನಡುವಿನ ಸಾಲದ ಸಂಬಂಧ, ಪತಿ ಪತ್ನಿಯರ ಮಧ್ಯದ ಅನುಬಂಧ ಹೀಗೆ ಪ್ರತಿಯೊಂದನ್ನು ಕೂಡ ಡಿಟೈಲ್ ಆಗಿ ತೋರಿಸಲಾಗಿದೆ.
ಚಿತ್ರದಲ್ಲಿ ಸಾಕಷ್ಟು ಪಾತ್ರಗಳಿವೆ. ಅವುಗಳಲ್ಲಿ ಅರಣ್ಯಾಧಿಕಾರಿಯ ಪಾತ್ರವೂ ಒಂದು. ನಟನ ಪ್ರಶಾಂತ್ ನಿರ್ವಹಿಸಿರುವ ಈ ಪಾತ್ರದಲ್ಲಿ ಭಾವಗಳ ವೈವಿಧ್ಯತೆ ಇದೆ. ಈ ಅರಣ್ಯಾಧಿಕಾರಿ ಜತೆಗೆ ವಿರೋಧ ಕಟ್ಟಿಕೊಳ್ಳುವ ವ್ಯಕ್ತಿಯಾಗಿ ಕಿರಣ್ ನಾಯಕ್ ನಟಿಸಿದ್ದಾರೆ. ಅವರು ಇಲ್ಲಿ ಹೆಚ್ಚಾಗಿ ಸಿಡುಕುತ್ತಲೇ ಇರುತ್ತಾರೆ. ಇವರ ಹಿರಿಯ ಪುತ್ರನಾಗಿ ನಟಿಸಿದ ಸಣ್ಣ ಹುಡುಗನಿಂದ ಹಿಡಿದು ಹೆಚ್ಚಿನ ಪಾತ್ರಧಾರಿಗಳನ್ನು ಹೊಸದಾಗಿಯೇ ಆಡಿಶನ್ ಮೂಲಕ ಆರಿಸಲಾಗಿದೆ. ಈ ಮಕ್ಕಳೆಲ್ಲ ನುರಿತ ಕಲಾವಿದರಂತೆ ನಟಿಸಿದ್ದಾರೆ.
ಶಿಕ್ಷಕರ ಪಾಠ, ಹಿರಿಯರ ವರ್ತನೆ ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಈ ಎಳೆಯ ಮಕ್ಕಳ ಮೇಲೆ ಹೇಗೆಲ್ಲ ಪ್ರಭಾವ ಬೀರುತ್ತವೆ ಎಂದು ತೋರಿಸಲಾಗಿದೆ. ಅದೇ ವೇಳೆ ಅರಣ್ಯಾಧಿಕಾರಿಯ ಕೋಪಕ್ಕೆ ತುತ್ತಾಗಿ ಕಾಡಿನಲ್ಲೇ ಅಡಗುತಾಣ ಮಾಡಿಕೊಳ್ಳುವ ಮಂದಿಗೆ ಹೇಗೆ ಮಕ್ಕಳೇ ಮಾರ್ಗದರ್ಶನ ಮಾಡುತ್ತಾರೆ ಎನ್ನುವುದನ್ನು ಕೂಡ ತೋರಿಸಿದ್ದಾರೆ.
ಮಲೆನಾಡ ಮಳೆಯಂತೆ ಸಾಹುವ ಕಥೆಗೆ ನಟ ಬಾಲಾಜಿ ಮನೋಹರ್ ಎಂಟ್ರಿ ಹೊಸದೊಂದು ತಿರುವು ನೀಡುತ್ತದೆ. ಆನಂತರದ ಕ್ಲೈಮ್ಯಾಕ್ಸ್ ಟ್ವಿಸ್ಟ್ ನೋಡಲು ಎಲ್ಲರಿಗೂ ಖುಷಿ. ನಿರ್ದೇಶಕ ಮಂಜುನಾಥ್ ಶೆಟ್ಟಿ ಇಲ್ಲಿ ಪಾತ್ರವಾಗಿಯೂ ಕಾಣಿಸಿದ್ದಾರೆ. ಕಥೆಯಲ್ಲಿ ಬರುವ ಮೂರು ಪ್ರಮುಖ ಕುಟುಂಬಗಳಲ್ಲಿ ಇವರದ್ದೂ ಒಂದು.
ನರಸಿಂಹಣ್ಣ, ಕಿಟ್ಟಣ್ಣ, ಸಂಜೀವಣ್ಣ ಮೊದಲಾದ ಪಾತ್ರಗಳು ಅವುಗಳ ಸಂಭಾಷಣೆಗಳು ಅಪ್ಪಟ ಮಲೆನಾಡಿನ ಸೊಗಡನ್ನು ಕಟ್ಟಿಕೊಡುತ್ತಾ ಸಾಗುತ್ತವೆ. ಹಾಸ್ಯದಿಂದ ಗಂಭೀರತೆಗೆ ಬದಲಾಗುವ ಚಿತ್ರದ ಸನ್ನಿವೇಶಕ್ಕೆ ಹೊಂದುವಂತೆ ನೀಡಲಾದ ಹಿನ್ನೆಲೆ ಸಂಗೀತಕ್ಕಾಗಿ ಮ್ಯಾಥ್ಯುಮನು ಮತ್ತು ಅದ್ಭುತವಾದ ಹಾಡಿನ ಸಂಗೀತಕ್ಕಾಗಿ ವಿಕಾಸ್ ವಸಿಷ್ಠರನ್ನು ಅಭಿನಂದಿಸಲೇಬೇಕು. ಇದು ಕುಟುಂಬ ಸಮೇತ ನೋಡಬಹುದಾದ ಚಿತ್ರ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.





Be the first to comment