ಫುಲ್ ಮೀಲ್ಸ್

Movie Review: ಲಕ್ಕಿ ಮದುವೇಲಿ ಫುಲ್ ಮೀಲ್ಸ್ ಉಂಡವನೇ ಜಾಣ!

ಚಿತ್ರ: ಫುಲ್ ಮೀಲ್ಸ್
ನಿರ್ದೇಶನ: ವಿನಾಯಕ ಎನ್
ನಿರ್ಮಾಪಕ: ಲಿಖಿತ್ ಶೆಟ್ಟಿ
ತಾರಾಗಣ: ಲಿಖಿತ್ ಶೆಟ್ಟಿ, ಖುಷಿ, ತೇಜಸ್ವಿನಿ
ರೇಟಿಂಗ್: 3.5/5

ಮದುವೆ ಊಟ ಅಂದರೆ ಹೊಟ್ಟೆ ತುಂಬುವಂತಿರಬೇಕು. ಮದುವೆ ಕಥೆ ಸಿನಿಮಾ ಆದರೆ? ಅದು ಕೂಡ ಮನಸು ತುಂಬ ಖುಷಿ ನೀಡುವಂತಿರಬೇಕು. ಅಂಥದೊಂದು ಚಿತ್ರ ಅನ್ನೋದಕ್ಕೇನೇ ಇರಬೇಕು ಈ ಸಿನಿಮಾಗೆ ನಿರ್ದೇಶಕರು ಫುಲ್ ಮೀಲ್ಸ್ ಎನ್ನುವ ಹೆಸರಿಟ್ಟಿದ್ದಾರೆ. ಆ ನಿರೀಕ್ಷೆಯಲ್ಲಿ ಬರುವ ಪ್ರೇಕ್ಷಕನಿಗೆ ಯಾವ ನಿರಾಸೆಯೂ ಆಗದಂತೆ ಒಂದೊಳ್ಳೆಯ ಚಿತ್ರವನ್ನು ತೆರೆಗೆ ತರಲಾಗಿದೆ.

ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿರುವ ಯುವಕ. ಆದರೆ ತನ್ನ ಪ್ರತಿಭೆ ಸಾಬೀತು ಮಾಡಲು ಒಂದೊಳ್ಳೆಯ ಅವಕಾಶವೇ ಸಿಕ್ಕಿಲ್ಲ ಎನ್ನುವುದು ಆತನ ನೋವು. ಇದೇ ಸಮಯ ಪ್ರಿ ವೆಡ್ಡಿಂಗ್ ಚಿತ್ರೀಕರಣಕ್ಕೆ ಅವಕಾಶ ಲಭಿಸುತ್ತದೆ. ಆದರೆ ಅಲ್ಲಿ ನೋಡಿದರೆ ಮದುವೆ ಹುಡುಗಿಯೇ ಈತನಿಗೆ ಮನಸೋಲುತ್ತಾಳೆ. ಆದರೆ ಕಥೆಯಲ್ಲಿನ ಪ್ರಮುಖ ತಿರುವು ಶುರುವಾಗುವುದೇ ಆ ನಂತರ. ಅದೇನು ಟ್ವಿಸ್ಟ್? ಅದರ ಹಿನ್ನೆಲೆ ಏನು? ಎನ್ನುವುದೆಲ್ಲ ಎರಡನೇ ಭಾಗದಲ್ಲಿ ರಸಮಯವಾಗಿ ಅನವರಣಾಗೊಳ್ಳುತ್ತ ಹೋಗುತ್ತದೆ.

ಸಿನಿಮಾದ ಮೊದಲ ದೃಶ್ಯವೇ ಆಸಕ್ತಿದಾಯಕವಾಗಿ ಮೂಡಿ ಬಂದಿದೆ. ಹಾಗೆ ಶುರುವಾಗುವ ಫುಲ್ ಮೀಲ್ಸ್ ಸಂಭ್ರಮ ಕೊನೆಯವರೆಗೂ ಲವಲವಿಕೆಯಲ್ಲೇ ಸಾಗುತ್ತದೆ. ಚಿತ್ರದ ನಾಯಕ, ಲಕ್ಕಿ ಎನ್ನುವ ಛಾಯಾಗ್ರಾಹಕನಾಗಿ ಲಿಖಿತ್ ಶೆಟ್ಟಿ ಮನ ಗೆಲ್ಲುವಂಥ ನಟನೆ ನೀಡಿದ್ದಾರೆ. ಈ ಕಥೆಗೆ ಎರಡೆರಡು ಮಂದಿ ನಾಯಕಿಯರು. ಒಂದು ಪಾತ್ರದಲ್ಲಿ ಖುಷಿ ನಟಿಸಿದ್ದರೆ, ಮತ್ತೊಂದು ಪಾತ್ರಕ್ಕೆ ತೇಜಸ್ವಿನಿ ಶರ್ಮ ಜೀವ ತುಂಬಿದ್ದಾರೆ. ಮದುವೆ ನಿಶ್ಚಿತಗೊಂಡ ಹುಡುಗಿಯ ಪಾತ್ರವನ್ನು ಖುಷಿ ಅಭಿನಯಿಸಿದ್ದಾರೆ. ಖುಷಿಯ ನಟನೆ ನೋಡುಗರ ಪ್ರಶಂಸೆಗೆ ಪಾತ್ರವಾಗಿದೆ. ಲಕ್ಕಿಯ ಹಿಂದೆ ಪ್ರೀತಿಗಾಗಿ ಅಲೆಯುವ ಮೇಕ್ಅಪ್ ಕಲಾವಿದೆಯಾಗಿ ತೇಜಸ್ವಿನಿ ಶರ್ಮ‌ ಕಾಣಿಸಿದ್ದಾರೆ.

ಲಕ್ಕಿ ಬಾಳಲ್ಲಿ ಅದೃಷ್ಟ ಲಕ್ಷ್ಮಿ ಒಲಿಯಲಿ ಎಂದು ಕಾಯುವ ಮಾವ ಪುಲಿಕೇಶಿಯಾಗಿ ರಂಗಾಯಣ ರಘು ನಟಿಸಿದ್ದಾರೆ. ರಘು ಪತ್ನಿಯಾಗಿ ಚಂದ್ರಕಲಾ‌ಮೋಹನ್ ಪಾತ್ರ ಮಾಡಿದ್ದಾರೆ. ಲಕ್ಕಿಗೆ ಛಾಯಾಗ್ರಹಣಕ್ಕೆ ಸಾಥ್ ನೀಡುವ ಕೆಲಸದಲ್ಲಿ ಕಾಣಿಸುವ ವಿಜಯ್ ಚೆಂಡೂರ್ ನಗಿಸುತ್ತಾರೆ. ನಾಯಕಿಯ ಅಣ್ಣನಾಗಿ ನಟಿಸಿರುವ ರಾಜೇಶ್ ನಟರಂಗ ಭಾವುಕಗೊಳಿಸುತ್ತಾರೆ. ಸುಜಯ್ ಶಾಸ್ತ್ರಿಯಿಂದ ಹಿಡಿದು ಹೊನ್ನವಳ್ಳಿ ಕೃಷ್ಣರ ತನಕ ಪ್ರತಿಯೊಬ್ಬ ಕಲಾವಿದರನ್ನು ನಿರ್ದೇಶಕರು ಪಾತ್ರಗಳಾಗಿಸಿರುವ ರೀತಿ ನಿಜಕ್ಕೂ ಅಭಿನಂದನಾರ್ಹ.

ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ಕವಿರಾಜ್ ರಚಿಸಿರುವ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರದ ಪ್ರೇಮ ದೃಶ್ಯಗಳಿಗೆ ಮತ್ತೊಂದು ಸ್ಥಾನವನ್ನು ತಂದು ಕೊಟ್ಟಿದೆ. ಸಂದರ್ಭಕ್ಕೆ ತಕ್ಕ ಸಂಭಾಷಣೆಗಳು ಚಿತ್ರದ ಮತ್ತೊಂದು ಆಕರ್ಷಣೆ. ಕೌಟುಂಬಿಕ ಪ್ರೇಕ್ಷಕರ ಮನ ಗೆಲ್ಲುವಂಥ ದೃಶ್ಯಗಳಿಂದಾಗಿ ಫುಲ್ ಮೀಲ್ಸ್ ಗೆಲುವಿನ ಭರವಸೆ ಸೃಷ್ಟಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!