ಚಿತ್ರ: ಗತ ವೈಭವ
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಣ: ದೀಪಕ್ ತಿಮ್ಮಪ್ಪ, ಸುನಿ ಸಿನಿಮಾಸ್, ಸರ್ವೆಗಾರ ಸಿಲ್ವರ್ ಸ್ಕ್ರೀನ್ಸ್
ತಾರಾಗಣ: ಎಸ್ ಎಸ್ ದುಷ್ಯಂತ್, ಆಶಿಕಾ ರಂಗನಾಥ್ ಮುಂತಾದವರು.
ರೇಟಿಂಗ್: 4/5
ಏಳೇಳು ಜನ್ಮದಲ್ಲೂ ನೀನೇ ನನ್ನ ಜೋಡಿಯಾಗಿರಬೇಕು ಎಂದು ಬೇಡುವುದನ್ನು ಕೇಳಿದ್ದೇವೆ. ಆದರೆ ಹಾಗೆ ಪ್ರೇಮಿಗಳಾಗಿ ಹುಟ್ಟಿದವರ ಆಧುನಿಕ ಕಥೆ ನಮಗೆ ಯಾರಿಗೂ ಗೊತ್ತಿಲ್ಲ. ಅಂಥದೊಂದು ಕಥೆಯನ್ನು ನಿಜಗೊಳಿಸಿದ್ದಾರೆ ನಿರ್ದೇಶಕ ಸುನಿ.
ಗತವೈಭವ ಎನ್ನುವ ಹೆಸರೇ ಸೂಚಿಸುವಂತೆ ಇದು ಕಳೆದು ಹೋದ ವೈಭವಗಳನ್ನು ಹೇಳುವ ಕಥೆ. ಕಳಕೊಂಡ ಕಥೆಯಿಂದ ಆರಂಭಿಸಿ ಪಡೆದುಕೊಳ್ಳುವ ಕಥೆ ಹೇಳುವುದು ಈ ಚಿತ್ರದ ಪ್ರಮುಖ ಆಕರ್ಷಣೆ.
ವೈದ್ಯ ದಂಪತಿಯ ಪುತ್ರ ಪುರಾತನ. ಆತ ಹೊಸದಾಗಿ ಭೇಟಿಯಾಗುವ ಸುಂದರಿ ಆಧುನಿಕ. ಆದರೆ ಇವರಿಬ್ಬರ ಹೆಸರಿನಂತೆ ಇಲ್ಲಿ ಆಧುನಿಕತೆ ಮತ್ತು ಪುರಾತನಗಳ ಅನುಬಂಧವಿದೆ. ಆ ಸಂಬಂಧ ಏನು ಎನ್ನುವುದೇ ಗತವೈಭವದಲ್ಲಿ ಅಡಗಿರುವ ಪ್ರಧಾನ ಅಂಶ.
ಚಿತ್ರದಲ್ಲಿ ಒಟ್ಟು ನಾಲ್ಕು ಕಾಲಘಟ್ಟದ ಪ್ರೀತಿ ಇದೆ. ಅದರಲ್ಲೊಂದು ಪುರಾಣ ಕಾಲದ ಕಥೆ. ಇನ್ನೊಂದು ಸ್ವಾತಂತ್ರ್ಯ ಪೂರ್ವದ ಕಥೆ. ಮತ್ತೊಂದು ಸ್ವಾತಂತ್ರ್ಯ ಸಿಕ್ಕ ಬಳಿಕದ ಕಥೆ. ಹಾಗೂ ಇವೆಲ್ಲವನ್ನೂ ನಿರೂಪಿಸುವ ವರ್ತಮಾನದ ಕಥೆ. ಈ ಎಲ್ಲ ಕಾಲಘಟ್ಟದ ಕಥೆಗಳಲ್ಲಿಯೂ ನಾಯಕ ಮತ್ತು ನಾಯಕಿ ಇದ್ದಾರೆ. ಆದರೆ ಅವರೇನಾ ಇವರು ಎಂದು ಸಂದೇಹ ಪಡುವ ರೀತಿಯಲ್ಲಿ ಪಾತ್ರದ ಹಿನ್ನೆಲೆಯನ್ನು, ರೂಪು ರೇಷೆಯನ್ನು ವ್ಯತ್ಯಸ್ತವಾಗಿ ತೋರಿಸಲಾಗಿದೆ.
ಪುರಾಣ ಕಾಲದ ಪ್ರೀತಿಯನ್ನು ಯಾವ ಪೌರಾಣಿಕ ಚಿತ್ರಗಳಿಗೂ ಕಡಿಮೆ ಇರದ ಮಾದರಿಯಲ್ಲಿ ಚಿತ್ರೀಕರಿಸಲಾಗಿದೆ. ಅದೇ ರೀತಿ ಪೋರ್ಚುಗೀಸರ ಕಾಲದ ಕಥೆಯನ್ನು ಕೂಡ ಆ ಕಾಲಕ್ಕೆ ಹೊಂದುವ ಹಾಗೆಯೇ ಚಿತ್ರೀಕರಿಸಿರುವುದು ವಿಶೇಷ. ಇಲ್ಲಿ ಕಥೆ ತಮಾಷೆಯಾಗಿ ಸಾಗಿದರೂ ಕಾಸ್ಟ್ಯೂಮ್ ನಿಂದ ಹಿಡಿದು ಯಾವ ವಿಚಾರದಲ್ಲಿಯೂ ಕಾಂಪ್ರೊಮೈಸ್ ಮಾಡಿರುವುದು ಕಾಣಿಸುವುದಿಲ್ಲ. ಹೀಗಾಗಿಯೇ ಇದೊಂದು ಅದ್ಧೂರಿ ಪ್ಯಾನ್ ಇಂಡಿಯನ್ ಮಾದರಿ ಚಿತ್ರದ ಗುಣಮಟ್ಟದಲ್ಲೇ ತಯಾರಾಗಿದೆ.
ಮೂರು ಜನ್ಮಗಳ ಕಥೆಯಲ್ಲಿ ಒಂದೊಂದಕ್ಕೂ ಒಂದೊಂದು ಹಿನ್ನೆಲೆ ಇದೆ. ಎರಡು ಜನ್ಮಗಳ ಕಥೆಗಳು ಸಾಮಾನ್ಯ ಎನ್ನುವಂತೆ ಅನಿಸಿದರೂ ಮೂರನೇ ಜನ್ಮ ಮೈ ನವಿರೇಳುವಂತೆ ಮಾಡುತ್ತದೆ. ಅದಕ್ಕೆ ಕಾರಣ ಕಥೆಯಲ್ಲಿರುವ ಹಿಂದಿನ ತಲೆಮಾರಿನ ಪ್ರೀತಿಯ ವಿನಿಮಯದ ರೀತಿ. ಪತ್ರದ ಮೂಲಕ ಪ್ರೇಮಿಗಳಾದ ಇಬ್ಬರು ಪರಸ್ಪರ ಭೇಟಿಯಾಗುತ್ತಾರ ಇಲ್ವ ಎನ್ನುವ ಕುತೂಹಲವನ್ನು ಚಿತ್ರಕಥೆಯಲ್ಲಿ ಹಿಡಿದಿಟ್ಟುಕೊಂಡಿರುವ ರೀತಿ ಅದ್ಭುತ.
ನಿರ್ದೇಶಕ ಸುನಿ ಗತವೈಭವದ ಮೂಲಕ ಮತ್ತೊಮ್ಮೆ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಿದ್ದಾರೆ. ಮೊದಲಬಾರಿ ನಾಯಕ ನಟನಾಗಿರುವ ದುಷ್ಯಂತ್ ಆಕರ್ಷಕವಾದ ನಟನೆ ನೀಡಿದ್ದಾರೆ. ಆಧುನಿಕ ಪಾತ್ರದಲ್ಲಿ ಆಶಿಕಾ ರಂಗನಾಥ್ ಅದ್ಭುತವಾದ ಬದಲಾವಣೆಗಳನ್ನು ತೋರಿಸಿದ್ದಾರೆ. ಮನೆಮನೆಗೆ ಹಾಲು ಮಾರುವ ಬಡಾಯಿ ಸುರೇಶನಾಗಿ ಕಾರ್ತಿಕ್ ನಟನೆ ಸೇರಿದಂತೆ ಕೃಷ್ಣ ಹೆಬ್ಬಾಲೆ, ಸುಧಾ ಬೆಳವಾಡಿ, ಬಿಗ್ ಬಾಸ್ ಖ್ಯಾತಿಯ ಕಿಶನ್ ಬೆಳಗಲಿ ಮೊದಲಾದವರ ಪಾತ್ರಗಳನ್ನು ಮರೆಯಲು ಸಾಧ್ಯವಿಲ್ಲ. ಕಾಲಘಟ್ಟಕ್ಕೆ ಹೊಂದುವ ಸಂಭಾಷಣೆ, ಹಿನ್ನೆಲೆ ಸಂಗೀತ ಮತ್ತು ಅಭಿನಯ ಈ ಚಿತ್ರದ ಹೈಲೈಟ್. ಕ್ಲೈಮ್ಯಾಕ್ಸ್ ತನಕ ಕುತೂಹಲಕಾರಿಯಾಗಿ ವೀಕ್ಷಿಸುವಂತೆ ಮಾಡುವ ಇಂಥದೊಂದು ಸಿನಿಮಾ ಈ ವರ್ಷ ತೆರೆಗೆ ಬಂದಿಲ್ಲ ಎಂದು ಧೈರ್ಯದಿಂದ ಹೇಳಬಹುದು.





Be the first to comment