ನೈಜ ಕಥೆಗೆ ಸಿನಿಮೀಯ ಸ್ಪರ್ಶ ನೀಡಿದ ಲವ್ ಯು ಮುದ್ದು

ಚಿತ್ರ: ಲವ್ ಯು ಮುದ್ದು
ನಿರ್ದೇಶಕ: ಕುಮಾರ್ ಎಲ್
ನಿರ್ಮಾಪಕ: ಕಿಶನ್ ಟಿ. ಎನ್
ತಾರಾಗಣ: ಸಿದ್ದು ಮೂಲಿಮನಿ, ರಾಜೇಶ್ ನಟರಂಗ, ರೇಷ್ಮಾ ಮೊದಲಾದವರು.
ರೇಟಿಂಗ್ : 3.5/5

ನಿಜವಾದ ಪ್ರೀತಿಗೆ ಇರುವ ಶಕ್ತಿ ಯಾವ ಮಟ್ಟದ್ದು ಎಂದು ಸಾಕಷ್ಟು ಸಿನಿಮಾಗಳು ತೋರಿಸಿವೆ. ಆದರೆ ನೈಜ ಘಟನೆಯನ್ನೇ ಆಧಾರವಾಗಿಸಿ ಇಷ್ಟೊಂದು ಪರಿಣಾಮಕಾರಿಯಾಗಿ ತೋರಿದಂಥ ಸಿನಿಮಾ ಮತ್ತೊಂದಿಲ್ಲ ಎಂದೇ ಹೇಳಬಹುದು.

ಇದು ಪ್ರೇಮಿಗಳ ಕಥೆ. ಪ್ರೇಮದ ಆರಂಭಕ್ಕೂ ಮುನ್ನ ತಂದೆ ಮಗನ ಕಥೆ. ತಾಯಿ ಇಲ್ಲದ ಮಗನನ್ನು ಮುದ್ದಾಗಿ ಸಾಕಿದ ತಂದೆ. ತಂದೆಯ ಎಲ್ಲಾ ಮಾತಿಗೂ ಒಪ್ಪುವ ಮಗನಿಗೆ ಮದುವೆಯ ವಿಚಾರದಲ್ಲಿ ಮಾತ್ರ ಯಾವ ಆಸಕ್ತಿ ಕೂಡ ಇರುವುದಿಲ್ಲ. ಇಂಥ ಪುತ್ರ ಕಾರ್ಕಳದ ತಾಯಿ ಮನೆಗೆ ಬಂದಾಗ ಮಾತ್ರ ಪ್ರೀತಿಯಲ್ಲಿ ಬೀಳುತ್ತಾನೆ. ಅದಕ್ಕೆ ಕಾರಣವಾಗಿದ್ದು ಒಬ್ಬಳು ಅನಾಥ ಹುಡುಗಿ. ಹಾಗಂತ ಅವಳು ಅಬಲೆ ಏನಲ್ಲ. ಶಿಕ್ಷಕ ವೃತ್ತಿಯಲ್ಲಿರುವ ಸ್ವಾಭಿಮಾನಿ ಸುಂದರಿ. ಇನ್ನೇನು ತಮ್ಮ ಪ್ರೀತಿಯನ್ನು ತಂದೆಗೆ ಹೇಳಬೇಕು ಎನ್ನುವಷ್ಟರಲ್ಲಿ ಹೊಸದೊಂದು ತಿರುವು ಸೃಷ್ಟಿಯಾಗುತ್ತದೆ. ಅದರ ಬಳಿಕ ತಿರುವುಗಳ ಮೆರವಣಿಗೆಯೇ ಶುರುವಾಗುತ್ತದೆ. ಒಂದೊಂದು ಟ್ವಿಸ್ಟ್ ಕೂಡ ಈ ಪ್ರೇಮಿಗಳನ್ನು ದೂರ ಮಾಡಲು ಖುದ್ದು ವಿಧಿಯೇ ಸುಫಾರಿ ಕೊಟ್ಟಂತೆ ಕಾಣಿಸುತ್ತದೆ. ಆದರೆ ಇವೆಲ್ಲವನ್ನೂ ದಾಟಿ ಒಂದು ಕ್ಲೈಮಾಕ್ಸ್ ಕೂಡ ಇದೆ. ಒಟ್ಟಿನಲ್ಲಿ ಒಂದು ಚೆತೋಹಾರಿ ಪ್ರೇಮಕಥೆ.

ಚಿತ್ರ ನೋಡುತ್ತಿದ್ದ ಹಾಗೆ ತೀರ ಸಿನಿಮೀಯ ಅನಿಸಬಹುದು. ಆದರೆ ನಿಜವಾಗಿ ನಡೆದ ಕಥೆ ಎನ್ನುವುದು ಒಪ್ಪಲೇಬೇಕಾದ ಸತ್ಯ. ಮಹಾರಾಷ್ಟ್ರದ ಆಕಾಶ್ ಮತ್ತು ಅಂಜಲಿ ಜೋಡಿಯ ಬಾಳಲ್ಲಿ ನಡೆದ ನೈಜ ಘಟನೆಗೆ ಸಿನಿಮೀಯ ಟಚ್ ಕೊಟ್ಟ ನಿರ್ದೇಶಕರು ಪ್ರೇಕ್ಷಕರ ಭಾವನೆಗಳನ್ನು ಬರಸೆಳೆಯುವಲ್ಲಿ ಗೆದ್ದಿದ್ದಾರೆ.

ಅಪ್ಪಟ ಪ್ರೇಮಿಯಾಗಿ ನಟಿಸಿರುವ ನಟ ಸಿದ್ದು ಮೂಲಿಮನಿಗೆ ನವ ಪ್ರತಿಭೆ ರೇಷ್ಮಾ ಸಾಥ್ ನೀಡಿದ್ದಾರೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಇಬ್ಬರು ಕೂಡ ಪ್ರಶಸ್ತಿ ಗೆಲ್ಲಬಲ್ಲ ನಟನೆ ನೀಡಿದ್ದಾರೆ. ನಾಯಕನ ಪ್ರೀತಿಯ ತಂದೆಯಾಗಿ ರಾಜೇಶ್ ನಟರಂಗ ನೀಡಿರುವ ನೈಜ ನಟನೆ ಕೂಡ ಗಮನಾರ್ಹ.

ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಜನಮನ ಗೆದ್ದ ನಿರ್ದೇಶಕ ಕುಮಾರ್ ಎಲ್ ಈ ಬಾರಿ ಮತ್ತೊಂದು ಹೊಸ ಮಾದರಿ ಪ್ರಯೋಗದ ಮೂಲಕ ಪ್ರೇಕ್ಷಕ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ತಮ್ಮ ಆಸ್ಥಾನ ಕಲಾವಿದ ತಬಲಾ ನಾಣಿಗೆ ಇಲ್ಲಿಯೂ ಒಂದೊಳ್ಳೆಯ ಪಾತ್ರವನ್ನೇ ನೀಡಿದ್ದಾರೆ. ಸಿನಿಮಾ ಮತ್ತೊಂದು ಮೈನಾ ಆಗುವ ಸಾಧ್ಯತೆ ಖಂಡಿತ ಇದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!