ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕೋರ್ಟ್ ನವೆಂಬರ್ 10ಕ್ಕೆ ವಿಚಾರಣೆಯನ್ನು ಮುಂದೂಡಿದ್ದು ಆ ದಿನದಿಂದಲೇ ಡಿ–ಗ್ಯಾಂಗ್ ವಿರುದ್ಧ ಕೊಲೆ ಪ್ರಕರಣದ ಟ್ರಯಲ್ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳ ವಿರುದ್ಧ ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿಗಳ ವಿರುದ್ಧದ ದೋಷಾರೋಪಗಳನ್ನು ನ್ಯಾಯಾಧೀಶರು ಓದಿ ಕೇಳಿಸಿದರು. ಕಿಕ್ಕಿರಿದು ತುಂಬಿದ್ದ ಕೋರ್ಟ್ ಹಾಲ್ನಲ್ಲಿ ಗದ್ದಲದ ನಡುವೆ ದೋಷಾರೋಪಗಳನ್ನು ಕೇಳಿಸಿದರು.
ನಂತರ ನ್ಯಾಯಾಧೀಶರು ಆರೋಪಿಗಳಿಗೆ “ನಿಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ?” ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಯಾಗಿ, “ಪೊಲೀಸರು ಹೊರಿಸಿದ ಆರೋಪಗಳು ಸುಳ್ಳು,” ಎಂದು ಎಲ್ಲ ಆರೋಪಿಗಳು ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ, ಕೋರ್ಟ್ ನವೆಂಬರ್ 10ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆಯ ವೇಳೆ ಸುಮಾರು ಎರಡು ತಿಂಗಳ ಬಳಿಕ ದರ್ಶನ್ ಮತ್ತು ಪವಿತ್ರಾ ಗೌಡ ಮತ್ತೆ ಮುಖಾಮುಖಿಯಾಗಿದ್ದು, ಕೋರ್ಟ್ ಆವರಣದಲ್ಲಿ ನೂಕುನುಗ್ಗಲಿನ ನಡುವೆ ಪವಿತ್ರಾ, ದರ್ಶನ್ ಅವರೊಂದಿಗೆ ಮಾತನಾಡಲು ಯತ್ನಿಸಿದ ಘಟನೆ ಗಮನ ಸೆಳೆಯಿತು.
ವಿಚಾರಣೆ ಬಳಿಕ ದರ್ಶನ್ ಪರ ವಕೀಲರು ಮಾಧ್ಯಮಗಳೊಂದಿಗೆ ಮಾತನಾಡಿ, ‘ಎಲ್ಲಾ ಆರೋಪಿಗಳು ಆ ಆರೋಪಗಳನ್ನು ನಿರಾಕರಿಸಿದ್ದಾರೆ. ವಿಚಾರಣೆ ಎದುರಿಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ’ ಎಂದರು.





Be the first to comment