ಬ್ರ್ಯಾಟ್

Movie Review: ಬಾಳ ಜೂಜಾಟದಲ್ಲಿ ಗೆದ್ದವನೇ ಬ್ರ್ಯಾಟ್!

ಚಿತ್ರ: ಬ್ರ್ಯಾಟ್
ನಿರ್ದೇಶನ: ಶಶಾಂಕ್
ನಿರ್ಮಾಣ: ಡಾಲ್ಫಿನ್ ಎಂಟರ್ಟೈನ್ಮೆಂಟ್
ತಾರಾಗಣ: ಡಾರ್ಲಿಂಗ್ ಕೃಷ್ಣ, ಮನೀಷಾ ಕಂಡ್ಕೂರ್ ಮೊದಲಾದವರು…
ರೇಟಿಂಗ್: 4/5

ಬ್ರ್ಯಾಟ್ ಅಂದರೆ ಹಾಳಾಗಿ ಹೋದವನು ಎಂದು ಟ್ರೈಲರ್ ಮೂಲಕವೇ ವಿವರಿಸಲಾಗಿತ್ತು. ಆದರೆ ಎಷ್ಟೊಂದು ಚೆನ್ನಾಗಿ ಹಾಳಾಗಿ ಹೋಗಿದ್ದಾನೆ ಎನ್ನುವುದನ್ನು ಚಿತ್ರ ಹೇಳಿದೆ.

ಮಧ್ಯಮ ವರ್ಗದ ಯುವಕನೋರ್ವ ಬಡತನದ ಅವಮಾನ, ಸಂಕಷ್ಟಗಳ ವಿರುದ್ಧ ತಿರುಗಿ ನಿಲ್ಲುವ ಕಥೆ ಇದು. ಆದರೆ ಕೃಷ್ಣ ಎನ್ನುವ ಈ ಯುವಕ ತನ್ನ ಹೋರಾಟಕ್ಕೆ ಆಯ್ದುಕೊಳ್ಳುವುದು ಬೆಟ್ಟಿಂಗ್ ಕ್ಷೇತ್ರವನ್ನು. ಕಾನೂನು ಸಮ್ಮತವಲ್ಲದ ಬೆಟ್ಟಿಂಗ್ ಮೂಲಕ ನಾಯಕನ‌ ಸಂಪಾದನೆಯನ್ನು ನಿರ್ದೇಶಕರು ಸಮರ್ಥಿಸಿರುವ ರೀತಿಯೇ ರೋಚಕ. ಒಂದು‌ ಸತ್ಯದ ಗೆಲುವಿಗೆ ಇಂದು ನೂರು ಸುಳ್ಳುಗಳ ಅಗತ್ಯವಿದೆ ಎನ್ನುವ ಸಂಭಾಷಣೆಯಂತೂ ಹೈಲೈಟ್.

ದುಡಿದು‌ ದುಡ್ಡುಮಾಡುವ ಪ್ರಯತ್ನದಲ್ಲಿ ಕ್ರಿಷ್ಟಿಗೆ ಎದುರಾಗುವುದು ಅವಮಾನ ಮಾತ್ರ. ಆದರೆ ಬೆಟ್ಟಿಂಗ್ ದಂಧೆಗೆ ಇಳಿದಾಗ ಅಲ್ಲಿಯೂ ಸಿಗುವುದು ವಂಚನೆಯೇ. ವಂಚನೆಯ ವಿರುದ್ಧವೇ ಸಂಚು ಹೂಡುವ ನಾಯಕನಿಗೆ ಎದುರಾಗುವ ಸಂಚಕಾರಗಳೇನು? ಅವುಗಳ ಹೇಗೆ ಎದುರಿಸುತ್ತಾನೆ ಎನ್ನುವುದೇ ಬ್ರ್ಯಾಟ್ ಚಿತ್ರದ ಕಥಾ ಸಾರ.

ನಾಯಕನ ಸಂಚಿನ ಹೋರಾಟಕ್ಕೆ ಮೊದಲ ಎದುರಾಳಿ‌ ಮನೆಯಲ್ಲಿರುವ ತಂದೆಯೇ ಆಗಿರುತ್ತಾರೆ. ನಾಯಕನಾಗಿ ಡಾರ್ಲಿಂಗ್ ಕೃಷ್ಣ ಆಕರ್ಷಕ ನಟನೆ ನೀಡಿದ್ದಾರೆ.‌ ತಂದೆಯಾಗಿ ಅಚ್ಯುತ್ ಕುಮಾರ್ ಆದರ್ಶದ ‌ಪಠನೆ ಮಾಡಿದ್ದಾರೆ. ನಾಯಕಿಯಾಗಿ ಮನೀಷಾ ಸಿಕ್ಕ ಅವಕಾಶ ಚೆನ್ನಾಗಿ ಬಳಸಿಕೊಂಡಿದ್ದಾರೆ. ಸ್ಪೆಷಲ್ ಸಾಂಗ್ ನ ಕುಣಿತ, ವಿಲನ್ ಜತೆಯಲ್ಲಿನ‌ ಹೊಡೆತ ಎಲ್ಲೆಡೆಯೂ ಡಾರ್ಲಿಂಗ್ ಡೇರಿಂಗ್ ಸ್ಟೆಪ್ ಹಾಕಿ‌ ಮುನ್ನುಗ್ಗಿದ್ದಾರೆ.

ಚಿತ್ರದಲ್ಲಿ ಇಬ್ಬರು ಪ್ರಮುಖ‌ ಖಳರಿದ್ದಾರೆ. ಬೆಟ್ಟಿಂಗ್ ದಂಧೆಯ ಮಹಾಕುಳವಾಗಿ ಡ್ರಾಗನ್ ಮಂಜು ಭಯಮೂಡಿಸುತ್ತಾರೆ. ಭ್ರಷ್ಟ ಪೊಲೀಸ್ ಅಧಿಕಾರಿಯಾಗಿ ರಮೇಶ್ ಇಂದಿರಾ ಕ್ರೌರ್ಯದಲ್ಲೇ ಚಳಿ ಮೂಡಿಸುತ್ತಾರೆ. ಕೃಷ್ಟಿಯ ತಾಯಿಯಾಗಿ ಮಾನಸಿ ಸುಧೀರ್ ಮಮತೆ ಧಾರೆಯಾಗಿದ್ದಾರೆ. ಸ್ನೇಹಿತರು ಸೇರಿದಂತೆ ಪ್ರತಿಯೊಂದು ಪಾತ್ರಗಳು ಲವಲವಿಕೆಯ ಸಾಥ್ ನೀಡಿದ್ದಾರೆ.

ಅರ್ಜುನ್ ಜನ್ಯ ಸಂಗೀತದಲ್ಲಿನ ಹಾಡುಗಳು ಆಕರ್ಷಕ. ಅಭಿಲಾಷ್ ಕಳತ್ತಿಲ್ ಛಾಯಾಗ್ರಹಣ ಮನಮೋಹಕ. ಒಂದೊಳ್ಳೆಯ ಎಂಟರ್ಟೈನರ್ ನೋಡುವಾಸೆ ನಿಮ್ಮದಾಗಿದ್ದರೆ ಬ್ರ್ಯಾಟ್ ನೋಡಲು ಮರೆಯದಿರಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!