ಕೋಣ

Movie Review: ಅಲೆಮಾರಿ ನಾರಾಯಣ ಮತ್ತು ಭರ್ಜರಿ ಕೋಣ!

ಚಿತ್ರ : ಕೋಣ
ನಿರ್ದೇಶನ : ಹರಿಕೃಷ್ಣ ಎಸ್
ನಿರ್ಮಾಣ : ಕುಪ್ಪಂಡ ಪ್ರೊಡಕ್ಷನ್ಸ್
ತಾರಾಗಣ : ಕೋಮಲ್ ಕುಮಾರ್, ತನಿಷಾ ಕುಪ್ಪಂಡ ಮೊದಲಾದವರು…
ರೇಟಿಂಗ್ : 3.5/5

ಇದು ಎರಡು ಕಾಲಘಟ್ಟದ ಕಥೆ.‌ ರಾಜರ ಕಾಲದಲ್ಲಿ ಉದ್ಭವವಾದ ಸಮಸ್ಯೆ ಹೇಗೆ ಇಂದಿನ ಕಾಲಘಟ್ಟದಲ್ಲಿ ಸಮಾಪ್ತಿಯಾಗುತ್ತದೆ ಎನ್ನುವುದನ್ನು ಕುತೂಹಲದ ಜತೆಗೆ ರಂಜನೀಯವಾಗಿ ಸಾರಲಾಗಿದೆ.

1842ರ ಕಾಲದಿಂದ ಕಥೆ ಶುರುವಾಗುತ್ತದೆ. ಕೆರೆ ಸಮೀಪ ಹೋದವರೆಲ್ಲರ ಕಣ್ಣುಗುಡ್ಡೆ ಮೇಲ್ಭಾಗ ಸೇರುತ್ತದೆ‌. ಶವವಾಗಿ ಬೀಳುತ್ತಾರೆ. ಊರಿನ ಜನರನ್ನು ರಕ್ಷಿಸಲೆಂದು ರಾಜ ಪರಿಹಾರ ಕಾರ್ಯಕ್ಕೆ ಮುಂದಾಗುತ್ತಾನೆ. ಇವೆಲ್ಲಕ್ಕೂ ಕೆರೆ ಪಕ್ಕದಲ್ಲಿರುವ ಒಂದು ಬೆದರು ಬೊಂಬೆಯೇ ಕಾರಣ ಎಂದು ಅರಿವಾಗುತ್ತದೆ. ಅದಕ್ಕಾಗಿ ಪರಿಹಾರ ಪೂಜೆ ನಡೆಸಿ ಬಳಿಕ ಆ ಬೊಂಬೆಯನ್ನು ಊರಿನ ಗಡಿದಾಟಿಸಲು ಪ್ರಯತ್ನಿಸುತ್ತಾನೆ. ಮುಂದೇನಾಯಿತು? ಶತಮಾನಗಳ ಬಳಿಕ ನಾರಾಯಣನಿದ್ದ ಊರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಏನು? ಊರವರು ಕೋಣ‌ಬಲಿ ಕೊಡಲು ತೀರ್ಮಾನಿಸುವುದೇಕೆ? ನಾರಾಯಣನಿಗೂ ಅಂದಿನ ಬೊಂಬೆಗೂ ಇರುವ ಸಂಬಂಧವೇನು? ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಾದರೆ ನೀವು ಸಿನಿಮಾ ನೋಡಲೇಬೇಕು.

ನಾರಾಯಣ ಒಬ್ಬ ಅಲೆಮಾರಿ. ಜೋಗಿ ಎನ್ನುವ ಕಂಪ್ಯೂಟರ್ ಬೊಂಬೆಯನ್ನಿಟ್ಟು ಅದರಿಂದಲೇ ಭವಿಷ್ಯ ಹೇಳಿಸಿ, ಜೀವನ ಸಾಗಿಸುತ್ತಿರುತ್ತಾನೆ. ನಾರಾಯಣನ ಪಾತ್ರದಲ್ಲಿ ಕೋಮಲ್ ಪಕ್ಕಾ ಅಲೆಮಾರಿಯ ಭಾವಗಳನ್ನು ಆವಾಹಿಸಿಕೊಂಡಿದ್ದಾರೆ. ನಾರಾಯಣನ ಪತ್ನಿ ಲಕ್ಷ್ಮಿಯಾಗಿ ತನಿಷಾ ಕುಪ್ಪಂಡ ಈ ಹಿಂದೆಂದಿಗಿಂತಲೂ ವಿಭಿನ್ನವಾದ ಪಾತ್ರ ಮಾಡಿದ್ದಾರೆ. ಮೂಢನಂಬಿಕೆ ತುಂಬಿದ ಊರಿನವರಿಂದಾಗಿ ಲಕ್ಷ್ಮೀ ಎದುರಿಸಬೇಕಾದ ಅಸಹಾಯಕ ಸಂದರ್ಭಕ್ಕೆ ಕನ್ನಡಿ ಹಿಡಿಯಯವಂಥ ನಟನೆ ನೀಡಿದ್ದಾರೆ.

ಇದು ಹಾರರ್ ಕಥಾವಸ್ತುವಿನ ಚಿತ್ರ. ಆದರೆ ಭಯದ ಜತೆಯಲ್ಲೇ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ನಿರ್ದೇಶಕರ ಪ್ರಯತ್ನ ಯಶಸ್ವಿಯಾಗಿದೆ. ಇದಕ್ಕೆ ಕನ್ನಡ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ರಿಯಾಲಿಟಿ ಶೋ‌ ಕಲಾವಿದರ ದಂಡೇ ಸಾಥ್ ನೀಡಿದೆ. ಶತಮಾನದ ಹಿಂದಿನ ರಾಜನಾಗಿ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ನಟಿಸಿದ್ದಾರೆ. ಮಾತ್ರವಲ್ಲ ತುಕಾಲಿ ಸಂತು, ಮಂಜು ಪಾವಗಡ, ನಮ್ರತಾ ಗೌಡ ಮುಂತಾದ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಜನಪ್ರಿಯ ಹಾಸ್ಯ ಕಲಾವಿದರಾದ ರಘು ರಾಮನಕೊಪ್ಪ, ವಿಜಯ್ ಚೆಂಡೂರು ಮೊದಲಾದವರನ್ನು ಚೆನ್ನಾಗಿ ಬಳಸಿಕೊಳ್ಳಲಾಗಿದೆ.

ಪರದೆ ಮೇಲೆ ಪ್ರದರ್ಶನಗೊಳ್ಳುವ ಗ್ರಾಫಿಕ್ಸ್ ವೈಭವ ಅದ್ಭುತವಾಗಿದೆ. ಹಾಡುಗಳು ಮೆಲುಕು ಹಾಕುವಂತಿದೆ. ಹಿನ್ನೆಲೆ ಸಂಗೀತ ಪ್ಲಸ್ ಪಾಯಿಂಟ್. ಸಿನಿಪ್ರಿಯರು ಮನಸೋತರೆ ಅಚ್ಚರಿ ಇಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!