ಚಿತ್ರ: ಕಾಂತಾರ -1
ನಿರ್ದೇಶನ: ರಿಷಬ್ ಶೆಟ್ಟಿ
ನಿರ್ಮಾಣ: ಹೊಂಬಾಳೆ ಫಿಲ್ಮ್ಸ್
ತಾರಾಗಣ: ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಜಯರಾಮ್ ಮುಂತಾದವರು.
ರೇಟಿಂಗ್: 4.5/5
ಕಾಂತಾರ ಮತ್ತೆ ಸದ್ದು ಮಾಡಿದೆ. ಮೂರು ವರ್ಷಗಳ ಅಂತರದ ಬಳಿಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತೊಮ್ಮೆ ಕಾಂತಾರದ ಕಡೆಗೆ ಕರೆದೊಯ್ದಿದ್ದಾರೆ.
ಚಿತ್ರದ ಕಥೆ ಕಾಡಿನಿಂದ ಶುರುವಾಗುತ್ತದೆ. ಅದು ಕೂಡ ಐದನೇ ಶತಮಾನದ ಕಾಡು. ಅಲ್ಲಿ ಒಂದಷ್ಟು ಮೂಲ ನಿವಾಸಿಗಳು. ಆ ಕಾಂತಾರದ ಕಾಡಲ್ಲೇ ಅವರ ನಂಬಿಕೆಯ ದೈವ ಶಕ್ತಿ. ಆ ಶಕ್ತಿಯಿರುವ ‘ಈಶ್ವರನ ಹೂದೋಟ’ದ ಮೇಲೆ ಬಾಂಗ್ರ ರಾಜನ ಕೆಟ್ಟ ದೃಷ್ಟಿ ಬೀಳುತ್ತದೆ. ಆದರೆ ಕಾಡನ್ನು ವಶ ಮಾಡಲು ಬಂದಾತ ಗುಳಿಗನ ಬೆಂಕಿ ಪೆಟ್ಟು ತಿಂದು ಮರಳಿ ಹೋಗುತ್ತಾನೆ.
ತಲೆಮಾರು ಬದಲಾಗುತ್ತದೆ. ಈಗಿನ ಬಾಂಗ್ರದ ಅರಸ ರಾಜಶೇಖರ ತನ್ನ ಕಾಲಾಂತ್ಯದಲ್ಲಿ ಪುತ್ರ ಕುಲಶೇಖರನಿಗೆ ಪಟ್ಟದ ಕಿರೀಟ ತೊಡಿಸುತ್ತಾನೆ. ಆದರೆ ಕುಲಶೇಖರ ಮತ್ತೆ ಅದೇ ಬ್ರಹ್ಮ ರಾಕ್ಷಸನ ವಾಸ ಸ್ಥಾನವಾದ ಈಶ್ವರನ ಹೋತೋಟಕ್ಕೆ ಬೇಟೆಗೆ ಹೋಗುತ್ತಾನೆ. ಈ ಬಾರಿ ಕಾಡಿನ ಬುಡಕಟ್ಟು ಸಮುದಾಯ ರಾಜನ ಬೆನ್ನುಬೀಳುತ್ತದೆ. ಹೀಗೆ ಬೆನ್ನು ಬೀಳಲು ಮುಖ್ಯ ಕಾರಣ ಬೆರ್ಮೆ. ಈತ ಆದಿವಾಸಿಗಳ ಯುವ ನಾಯಕ. ಬೆರ್ಮೆ ಮತ್ತು ಬಾಂಗ್ರ ರಾಜರ ಮಧ್ಯೆ ನಡೆಯುವ ಕಾಳಗ ಮತ್ತು ಅದರಲ್ಲಿ ದೈವ ವಹಿಸುವ ಪಾತ್ರವೇ ಇಡೀ ಕಾಂತಾರದ ಕೇಂದ್ರ ಶಕ್ತಿ.
ಬೆರ್ಮೆ ಪಾತ್ರದಲ್ಲಿ ರಿಷಬ್ ಶೆಟ್ಟಿ ಮತ್ತೊಮ್ಮೆ ದೈವಿಕ ಶಕ್ತಿಯಾಗಿ ಕಾಣಿಸಿದ್ದಾರೆ. ಈತನ ಹುಟ್ಟಿನ ಬಗ್ಗೆ ಯಾರಿಗೂ ತಿಳಿಯದು. ಅನಾಥವಾಗಿ ಕಾಡಲ್ಲಿ ಪತ್ತೆಯಾಗುವ ಕಂದನನ್ನು ಮನೆಗೆ ಕರೆತಂದು ಬೆರ್ಮೆ ಎಂದು ಹೆಸರಿಟ್ಟು ಕರೆದಿರುತ್ತಾರೆ. ಬೆರ್ಮೆ ತನ್ನ ಹೆಸರನ್ನು ಉಳಿಸುವಂತೆ ಬೆಳೆಯುತ್ತಾನೆ. ಎಲ್ಲರೊಂದಿಗೆ ಸೌಹಾರ್ದ ಸಂಬಂಧ ಬೆಸೆಯುತ್ತಾನೆ. ಆದರೆ ಮೋಸ ಎದುರಾದಾಗ ಬೆರ್ಮನ ಮೈಗೆ ಗುಳಿಗನ ಪ್ರವೇಶವಾಗುತ್ತದೆ. ಕಾಂತಾರದಲ್ಲಿ ದೈವ ನರ್ತನ ತೋರಿದ್ದ ರಿಷಬ್ ಶೆಟ್ಟಿ ಈ ಬಾರಿ ಮತ್ತೆರಡು ಬಾರಿ ತಮ್ಮ ವಿಶೇಷ ಪ್ರತಿಭೆ ಪ್ರದರ್ಶಿಸಿದ್ದಾರೆ. ಪ್ರೇಕ್ಷಕರು ಫಿದಾ ಆಗಿದ್ದಾರೆ.
ಬಾಂಗ್ರಾದ ರಾಜ ರಾಜಶೇಖರನಾಗಿ ಮಲಯಾಳಂ ನಟ ಜಯರಾಮ್ ಅದ್ಭುತ ನಟನೆ ನೀಡಿದ್ದಾರೆ. ರಾಜನ ಕುಲಪುತ್ರ ಕುಲಶೇಖರನಾಗಿ ಗುಲ್ಷನ್ ದೇವಯ್ಯ ನಟಿಸಿದ್ದಾರೆ. ಮಂತ್ರಿ ಭೋಗೇಂದ್ರನಾಗಿ ಪ್ರಮೋದ್ ಶೆಟ್ಟಿ ನಗಿಸಿದ್ದಾರೆ. ನಗಿಸುವವರ ಪಟ್ಟಿಯಲ್ಲಿ ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ರಾಕೇಶ್ ಪೂಜಾರಿ ಮತ್ತು ನವೀನ್ ಪಡೀಲ್ ಮೊದಲಾದವರ ಪಾತ್ರಗಳಿಗೆ ಪಾಲಿದೆ. ನಗುಮುಖದ ರಾಕೇಶ್ ಪೂಜಾರಿ ಸಾವಾಗಿರುವುದನ್ನು ಅರಗಿಸುವುದು ಕಷ್ಟವಾಗುತ್ತದೆ.
ಚಿತ್ರದ ನಾಯಕಿ ಕನಕವತಿಯಾಗಿ ರುಕ್ಮಿಣಿ ವಸಂತ್ ಅವರಿಗೆ ನಟನೆಗೆ ವಿಶೇಷ ಅವಕಾಶ ಲಭಿಸಿದೆ. ಪ್ರೇಮ, ದ್ವೇಷ, ಹಗೆ, ಹೊಡೆದಾಟ ಹೀಗೆ ವೈವಿಧ್ಯಮಯ ಭಾವಗಳಿಗೆ ಜೀವ ತುಂಬಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ ಈ ಬಾರಿ ಮತ್ತೊಮ್ಮೆ ಪ್ರೇಕ್ಷಕರ ಮೈ ನವಿರೇಳುವಂತೆ ಮಾಡಿದೆ. ಅದರಲ್ಲೂ ಯುದ್ಧದ ದೃಶ್ಯಗಳಲ್ಲಿಯೂ ಹಿನ್ನೆಲೆ ಸಂಗೀತದ ಮೂಲಕ ಮ್ಯಾಜಿಕ್ ಮಾಡಲಾಗಿದೆ. ಎಲ್ಲ ರೀತಿಯಿಂದಲೂ ಮೋಡಿ ಮಾಡಿರುವ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತಿದೆ.





Be the first to comment