ಚಿತ್ರ: s/o ಮುತ್ತಣ್ಣ
ನಿರ್ದೇಶಕ: ಶ್ರೀಕಾಂತ್ ಹುಣಸೂರು
ನಿರ್ಮಾಪಕಿ: ಬಿ.ಎಂ ಮಂಜುಳ
ತಾರಾಗಣ: ಪ್ರಣಾಮ್ ದೇವರಾಜ್, ಖುಷಿ ರವಿ, ರಂಗಾಯಣ ರಘು ಮೊದಲಾದವರು…
ರೇಟಿಂಗ್ : 3.5/5
ತಂದೆ ಮತ್ತು ಮಗನ ಆತ್ಮೀಯ ಅನುಬಂಧದೊಂದಿಗೆ ಶುರುವಾಗುವ ಚಿತ್ರ. ನಿಜಕ್ಕೂ ತಂದೆ ಮತ್ತು ಮಗ ಇಷ್ಟೊಂದು ಆತ್ಮೀಯವಾಗಿರುತ್ತಾರ ಅಂತ ಅನುಮಾನ ಹೆಚ್ಚಾಗುವ ಹೊತ್ತಿಗೆ ಮಧ್ಯಂತರ ಬಂದಿರುತ್ತದೆ. ಅಷ್ಟು ಹೊತ್ತಿಗೆ ಸನ್ ಆಫ್ ಮುತ್ತಣ್ಣ ಕೇರ್ ಆಫ್ ಮುತ್ತಣ್ಣ ಆಗಿರುತ್ತಾನೆ. ಮುಂದೇನು ಎನ್ನುವುದನ್ನು ಪರದೆಯ ಮೇಲೆಯೇ ನೀವು ನೋಡಬೇಕು.
ಚಿತ್ರದ ಹೆಸರಿಗೆ ತಕ್ಕಹಾಗೆ ಇದು ತಂದೆ ಮಗನ ಕಥೆ. ಆದರೆ ಇಲ್ಲೊಂದು ಸುಂದರವಾದ ಪ್ರೇಮಕಥೆಯೂ ಇದೆ. ಅಸಲಿಗೆ ಆ ಪ್ರೇಮಕಥೆ ಇಲ್ಲ ಎಂದಾದರೆ ಚಿತ್ರಕ್ಕೆ ಅರ್ಥವೇ ಇಲ್ಲ ಎನ್ನುವಂತಾಗುತ್ತದೆ. ಹೀಗೊಂದು ಫ್ಯಾಮಿಲಿ ಸೆಂಟಿಮೆಂಟ್ ಸ್ಟೋರಿಯನ್ನು ರೆಡಿ ಮಾಡಿದ ನಿರ್ದೇಶಕರನ್ನು ಮೆಚ್ಚಲೇಬೇಕು.
ಸನ್ ಆಫ್ ಮುತ್ತಣ್ಣನಾಗಿ ಪ್ರಣಾಮ್ ದೇವರಾಜ್ ಲೀಲಾಜಾಲವಾದ ನಟನೆ ನೀಡಿದ್ದಾರೆ. ತಂದೆಯ ಜತೆಗಿನ ಸಲುಗೆ, ಪ್ರೇಯಸಿಯೊಂದಿಗಿನ ಪ್ರೇಮ ಬೆಸುಗೆ ಸೇರಿದಂತೆ ಪ್ರತಿಯೊಂದು ಭಾವವನ್ನು ಕೂಡ ಆಕರ್ಷಕವಾಗಿ ಪ್ರದರ್ಶಿಸಿದ್ದಾರೆ. ಹಾಡುಗಳಲ್ಲಿ ಕೂಡ ಅಷ್ಟೇ ಚೆನ್ನಾಗಿ ಕುಣಿದು ಗಮನ ಸೆಳೆದಿದ್ದಾರೆ. ತಂದೆಯಾಗಿ ರಂಗಾಯಣ ರಘು ಅದ್ಭುತ ನಟನೆ ನೀಡಿದ್ದಾರೆ. ಶೀರ್ಷಿಕೆಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಮುತ್ತಣ್ಣನ ಪುತ್ರನ ಬಾಳಿಗೆ ಪ್ರೇಯಸಿಯಾಗಿ ಪ್ರವೇಶ ಮಾಡುವ ಸುಂದರಿಯಾಗಿ ಖುಷಿ ರವಿ ನಟಿಸಿದ್ದಾರೆ. ಎರಡು ಪ್ರಮುಖ ಪಾತ್ರಗಳ ಮಧ್ಯೆ ಡಾಕ್ಟರ್ ಸಾಕ್ಷಿಯಾಗಿ ಖುಷಿ ನೀಡಿರುವ ಅಭಿನಯ ಅದ್ಭುತವಾಗಿದೆ.
ಚಿತ್ರದಲ್ಲಿ ಪಾತ್ರಧಾರಿಗಳು ಕಡಿಮೆ. ಆದರೆ ಕಾಣಿಸಿಕೊಳ್ಳುವ ಪ್ರತಿ ಪಾತ್ರಗಳು ಕೂಡ ಮನದಲ್ಲಿ ಸ್ಥಾನ ಪಡೆಯುತ್ತವೆ. ಇದಕ್ಕೆ ಉದಾಹರಣೆಯಾಗಿ ಖುಷಿಯ ತಂದೆ ಪಾತ್ರ ನಿರ್ವಹಿಸಿರುವ ಸುಚೇಂದ್ರ ಪ್ರಸಾದ್, ಸೀನಿಯರ್ ಡಾಕ್ಟರ್ ಶ್ರೀನಿವಾಸ ಪ್ರಭು, ಕೆಲವೇ ದೃಶ್ಯಗಳಲ್ಲಿ ಕಾಣಿಸುವ ಸುಧಾ ಬೆಳವಾಡಿ ಹೀಗೆ ಪ್ರತಿಯೊಬ್ಬರು ಕೂಡ ತಮ್ಮ ಸಹಜ ಅಭಿನಯದ ಮೂಲಕ ಚಿತ್ರದ ಭಾಗವಾಗಿದ್ದಾರೆ.
ಸಿನಿಮಾದ ಹಾಡುಗಳು ಮತ್ತೊಂದು ಪ್ರಮುಖ ಆಕರ್ಷಣೆ. ಒಟ್ಟು ಸಿನಿಮಾ ಒಂದು ಕೌಟುಂಬಿಕ ಚಿತ್ರವಾಗಿ ಪ್ರೇಕ್ಷಕರಿಗೆ ಸಂಭ್ರಮ ನೀಡುವುದರಲ್ಲಿ ಸಂದೇಹವಿಲ್ಲ.





Be the first to comment