ಕೇರಳ ಮೂಲದ ಖ್ಯಾತ ನಟಿ ಲಕ್ಷ್ಮಿ ಮೆನನ್ ಗೆ ಐಟಿ ಉದ್ಯೋಗಿಯೊಬ್ಬರ ಕಾರನ್ನು ತಡೆದು ಅವರನ್ನು ಅಪಹರಿಸಿ ಥಳಿಸಿದ ಪ್ರಕರಣದಲ್ಲಿ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕರಣದ ಮೂರನೇ ಆರೋಪಿಯಾಗಿರುವ ಲಕ್ಷ್ಮಿ ಮೆನನ್ ಸದ್ಯ ತಲೆಮರೆಸಿಕೊಂಡಿದ್ದು, ಲಕ್ಷ್ಮಿ ಮೆನನ್ ಜೊತೆಗಿದ್ದ ಮಿಥುನ್, ಅನೀಶ್ ಹಾಗೂ ಓರ್ವ ಮಹಿಳಾ ಸ್ನೇಹಿತೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಲುವಾ ಮೂಲದ ಐಟಿ ಕಂಪನಿ ಉದ್ಯೋಗಿಯೊಬ್ಬರು ತನ್ನನ್ನು ಅಪಹರಿಸಿ, ಥಳಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಕೋರ್ಟ್ ಲಕ್ಷ್ಮೀ ಮೆನನ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಂತರ ಅವರ ಬಂಧನಕ್ಕೆ ತಡೆ ನೀಡಿದ್ದು, ಓಣಂ ನಂತರ ವಿಚಾರಣೆಗೆ ಅರ್ಜಿಯನ್ನು ಮುಂದೂಡಿದೆ. ಅಲ್ಲಿಯವರೆಗೆ ಅವರನ್ನು ಬಂಧಿಸಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಸದ್ಯಕ್ಕೆ ಲಕ್ಷ್ಮೀ ಮೆನನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಲಕ್ಷ್ಮೀ ಮೆನನ್ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ದೂರುದಾರರು ಬಾರ್‌ನಲ್ಲಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಾರ್‌ನಿಂದ ಹೊರಬಂದ ನಂತರ ದೂರುದಾರರು ಕಾರಿನಲ್ಲಿ ತಮ್ಮನ್ನು ಹಿಂಬಾಲಿಸಿ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ದೂರಿನ ವಿಷಯವು ಕಟ್ಟುಕಥೆಯಾಗಿದೆ. ಅಪರಾಧಕ್ಕೂ ತನಗೆ ಯಾವುದೇ ಸಂಬಂಧವಿಲ್ಲ. ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಿದ್ದಾರೆ.
ದೂರುದಾರ ಅಲಿಯಾರ್ ಶಾ ಸಲೀಂ ಪ್ರಕಾರ, ಕೆಲವು ದಿನಗಳ ಹಿಂದೆ ಬಾರ್‌ನಲ್ಲಿ ಯಾವುದೋ ಒಂದು ವಿಚಾರಕ್ಕೆ ಲಕ್ಷ್ಮೀ ಮೆನನ್ ಅವರ ಗ್ಯಾಂಗ್ ತಗಾದೆ ತೆಗೆದು ಜಗಳವಾಡಿದೆ. ಬಳಿಕ ಅಲಿಯಾರ್ ಅವರನ್ನು ಹಿಂಬಾಲಿಸಿ ಅವರ ಕಾರನ್ನು ಎರ್ನಾಕುಲಂ ನಾರ್ತ್ ಓವರ್‌ಬ್ರಿಡ್ಜ್ ಸಮೀಪದಲ್ಲಿ ತಡೆದಿದೆ. ಆರೋಪಿಗಳಾದ ಲಕ್ಷ್ಮೀ ಮೆನನ್, ಮಿಥುನ್, ಅನೀಶ್ ಮತ್ತು ಸೋನಾಮೋಲ್ ಸೇರಿದಂತೆ ಒಂದು ಗ್ಯಾಂಗ್ ಅಲಿಯಾರ್ನ್ನು ಕಾರಿನಿಂದ ಬಲವಂತವಾಗಿ ಎಳೆದು ಮತ್ತೊಂದು ವಾಹನದಲ್ಲಿ ಕರೆದೊಯ್ದು ದೈಹಿಕವಾಗಿ ಹಲ್ಲೆ ಮಾಡಿ ಗಂಭೀರ ಬೆದರಿಕೆ ಹಾಕಿದೆ. ನಂತರ, ಅಲಿಯಾರ್ ಅವರನ್ನು ಅಲುವಾ-ಪರವೂರ್ ಜಂಕ್ಷನ್‌ನಲ್ಲಿ ಬಿಟ್ಟು ಪರಾರಿಯಾದರು.
ಸಿಸಿಟಿವಿ ದೃಶ್ಯಗಳು ಹೊರಬಂದ ನಂತರ ಲಕ್ಷ್ಮಿ ಮೆನನ್ ಗ್ಯಾಂಗ್‌ನಲ್ಲಿದ್ದರು ಎಂದು ಪೊಲೀಸರು ದೃಢಪಡಿಸಿದ್ದಾರೆ. ಬಳಿಕ ಈ ಪ್ರಕರಣದಲ್ಲಿ ಲಕ್ಷ್ಮೀ ಮೆನನ್ ಅವರನ್ನು ಮೂರನೇ ಆರೋಪಿಯಾಗಿ ಹೆಸರಿಸಲಾಗಿದೆ. ವಿಡಿಯೋದಲ್ಲಿ ಲಕ್ಷ್ಮೀ ಮೆನನ್ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದು ಕಂಡುಬಂದಿದೆ.
—-





Be the first to comment