‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು, ನಟ ಶಿವರಾಜ್ ಕುಮಾರ್ ಅವರನ್ನು ನೇರವಾಗಿ ಭೇಟಿ ಮಾಡಿ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.
ಸಹ ನಟಿಯ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆಯಾಗಿರುವ ಮಡೆನೂರು ಮನು ಶಿವರಾಜ್ ಕುಮಾರ್ , ದರ್ಶನ್ ಹಾಗೂ ಧ್ರುವ ಸರ್ಜಾ ಕುರಿತು ಮನು ಆಡಿದ ಮಾತುಗಳ ಆಡಿಯೋವೊಂದು ವೈರಲ್ ಆಗುವ ಮೂಲಕ ಅವರ ಅಭಿಮಾನಿಗಳನ್ನು ಕೆರಳಿಸಿತ್ತು. ನಂತರ ಕಿರುತೆರೆ ಹಾಗೂ ಹಿರಿತೆರೆಯಿಂದ ಅವರನ್ನು ಬ್ಯಾನ್ ಮಾಡಲಾಗಿತ್ತು. ಜೈಲಿನಿಂದ ಹೊರಬಂದ ಬಳಿಕ ಆ ಆಡಿಯೋ ನನ್ನದೇ ಎಂದು ಮಡೆನೂರು ಮನು ಒಪ್ಪಿಕೊಂಡಿದ್ದರು.
ಕಂಠೀರವ ಸ್ಟುಡಿಯೋ ಬಳಿ ಶಿವಣ್ಣ ಬಂದಿದ್ದು ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ ‘ ಚಿತ್ರವನ್ನು ಮರು ಬಿಡುಗಡೆ ಮಾಡಲು ಬಯಸಿದ್ದು, ನಿಮ್ಮ ಒಪ್ಪಿಗೆ ಬೇಕು’ ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್ಕುಮಾರ್, ನಟ ಮಡೆನೂರು ಮನುಗೆ ಒಳ್ಳೆಯದಾಗಲಿ, ಒಳ್ಳೆಯ ಟೈಟಲ್ನ ಸಿನಿಮಾ ರಿಲೀಸ್ ಮಾಡಿ. ಕುಲದಲ್ಲಿ ಯಾರೂ ಕೀಳಲ್ಲ, ಮೇಲಲ್ಲ. ಯಾರೇ ಬೈದ್ರೂ, ಹೊಗಳಿದ್ರು ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ’ ಎಂದು ದೊಡ್ಡತನ ಮೆರೆದಿದ್ದಾರೆ.
ಶಿವರಾಜ್ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಅವರನ್ನು ನೇರವಾಗಿ ಭೇಟಿ ಮಾಡಿ ಕ್ಷಮೆ ಕೇಳಲು ಮಡೆನೂರು ಮನು ಪ್ರಯತ್ನ ಪಟ್ಟಿದ್ದರು. ಅದು ಸಾಧ್ಯವಾಗಿರಲಿಲ್ಲ. ಅವರ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದ ಧ್ರುವ ಸರ್ಜಾ, ನನ್ನ ಕುರಿತು ಚಿಂತೆ ಮಾಡಬೇಡ. ನಿನ್ನ ಮನೆ, ಮಕ್ಕಳು ಕುಟುಂಬದ ಕುರಿತು ಕಾಳಜಿ ವಹಿಸು. ಶಿವಣ್ಣ ಮತ್ತು ದರ್ಶನ್ ಸರ್ ಗೆ ಕರೆ ಮಾಡಿ ಮಾತುನಾಡು ಎಂದು ಹೇಳಿದ್ದರು.
ಮಡೆನೂರು ಮನು ಕಳೆದ ಜೂನ್ ನಲ್ಲಿ ಶಿವರಾಜ್ ಕುಮಾರ್ ಅವರ ಮುತ್ತು ನಿವಾಸದೆದುರು ತಮ್ಮ ಪತ್ನಿ ಮತ್ತು ಮಗು ಜೊತೆಗೆ ಕಾದರೂ ಶಿವಣ್ಣ ದರ್ಶನ ಸಿಕ್ಕಿರಲಿಲ್ಲ. ಅವರು ಅಮೆರಿಕಕ್ಕೆ ಹೋಗಿದ್ದರು ಎಂಬ ವಿಚಾರವನ್ನು ನಂತರ ಮಡೆನೂರು ಮನು ಅವರೇ ವಿಡಿಯೋ ಮೂಲಕ ಹೇಳಿದ್ದರು.
——





Be the first to comment