ಜ್ಯೂನಿಯರ್

Movie Review: ಮನರಂಜನೆಯ ಜತೆ ಮನ‌ ಮುಟ್ಟುವ ಕಥೆ

ಚಿತ್ರ: ಜ್ಯೂನಿಯರ್
ನಿರ್ದೇಶಕ: ರಾಧಾಕೃಷ್ಣ ರೆಡ್ಡಿ
ನಿರ್ಮಾಪಕ: ಸಾಯಿ ಕೊರಪಟಿ
ತಾರಾಗಣ: ಕಿರೀಟಿ, ಜೆನಿಲಿಯಾ, ವಿ ರವಿಚಂದ್ರನ್

ಮಗ ಮತ್ತು ತಂದೆಯ ಬಾಂಧವ್ಯ, ಸ್ತ್ರೀ ಸಬಲೀಕರಣ ಮತ್ತು ಹಳ್ಳಿಗಳಲ್ಲಿ ಕೈಗಾರಿಕೋದ್ಯಮ ಸ್ಥಾಪಿಸುವ ಮೂಲಕ ನಡೆಸುವ ಅಭಿವೃದ್ಧಿ! ಮೂರು ವಿಭಿನ್ನ ಮಾದರಿಯ ಸಂದೇಶವನ್ನು ಒಂದೇ ಕಥೆಯೊಳಗೆ ಸೇರಿಸಿ ಮಾಡಲಾದ ಆಕರ್ಷಕ ಚಿತ್ರವೇ ಜ್ಯೂನಿಯರ್.

ಕಾಲೇಜ್ ವಿದ್ಯಾರ್ಥಿಯಾಗಿ‌ ಕಿರೀಟಿಯ ನಟನೆ ಸಹಜವೆನಿಸುವಂತಿದೆ. ಪ್ರಾಯಕ್ಕೆ ಒಪ್ಪುವ ಪಾತ್ರವನ್ನು ಕಿರೀಟಿ ಒಪ್ಪವಾಗಿ ನಿಭಾಯಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡಿರುವ ಸಿನಿಮಾ ಎರಡು ಭಾಷೆಗಳ ಚಿತ್ರರಸಿಕರಿಗೂ ಮೆಚ್ಚುಗೆಯಾಗುವಂತಿವೆ. ಉದಾಹರಣೆಗೆ ಕಿರೀಟಿಯ ನಾಟ್ಯ ವೈಭವ ಕನ್ನಡಿಗರಿಗೆ ಅಪ್ಪುವಿನ ನೆನಪು ತಂದರೆ ಆಂಧ್ರದ ಮಂದಿಗೆ ಜ್ಯೂನಿಯರ್ ಎನ್ ಟಿ ಆರ್ ನೆನಪಾಗುವುದು ಖಚಿತ. ಡಾನ್ಸ್ ಮಾತ್ರವಲ್ಲ ಸಾಹಸದ ದೃಶ್ಯಗಳಲ್ಲೂ ಕಿರೀಟಿ ಅದ್ಭುತವಾಗಿ ಪರ್ಫಾರ್ಮ್ ಮಾಡಿದ್ದಾರೆ‌. ಮೊದಲ ಚಿತ್ರ ಬರೀ ಹಾಡು, ಕುಣಿತಕ್ಕೆ ಸೀಮಿತಗೊಳ್ಳದೆ ಕೌಟುಂಬಿಕ ಹಿನ್ನೆಲೆಯ ಗಟ್ಟಿಕಥೆಯನ್ನು ಹೊಂದಿರಬೇಕು ಎನ್ನುವ ನಿರ್ದೇಶಕರ ಯೋಜನೆ ಸಫಲವಾಗಿದೆ.

ಕಿರೀಟಿ ಚಿತ್ರಕ್ಕೆ ಜ್ಯೂನಿಯರ್ ಆದರೆ ಸೀನಿಯರ್ ಆಗಿ ರವಿಚಂದ್ರನ್ ಅವರಿಗೂ ಅದ್ಭುತ ಅವಕಾಶ ಇದೆ. ಮಾಣಿಕ್ಯದಲ್ಲಿ‌ ಮೊದಲ ಬಾರಿ ತಂದೆಯ ಪಾತ್ರದಲ್ಲಿ ಕಾಣಿಸಿದ್ದ ಕ್ರೇಜಿಸ್ಟಾರ್, ಆನಂತರ ಮತ್ತೆ ಈಗಲೂ ಅಂಥದ್ದೇ ತಂದೆಯ ಪಾತ್ರವನ್ನು ನಿಭಾಯಿಸಿದ್ದಾರೆ. ಇಲ್ಲಿ ಮಾಣಿಕ್ಯಕ್ಕಿಂತಲೂ ರವಿಚಂದ್ರನ್ ಪಾತ್ರಕ್ಕೆ ಹೆಚ್ಚಿನ ಅವಕಾಶ ಇದೆ ಎಂದೇ ಹೇಳಬಹುದು. ಪ್ರೀತಿ, ವಾತ್ಸಲ್ಯ, ನೋವು, ಅನಾರೋಗ್ಯ ಹೀಗೆ ಬಹುವಿಧವಾದ ಭಾವಗಳಿಗೆ ರವಿಚಂದ್ರನ್ ಜೀವ ತುಂಬಿದ್ದಾರೆ.

ಜಿನಿಲಿಯಾ ನಿರ್ವಹಿಸಿರುವ ವಿಜಯ ಸೌಜನ್ಯ ಎನ್ನುವ ಪಾತ್ರ ಕೂಡ ಮತ್ತೊಂದು ಪ್ರಮುಖ ಕೇಂದ್ರಬಿಂದುವಾಗಿದೆ. ತಮ್ಮ ಎಂದಿನ ಶೈಲಿಗಿಂತ ವಿಭಿನ್ನವಾದ ಪಾತ್ರದಲ್ಲಿಯೂ ಜೆನಿಲಿಯ ಅಭಿಮಾನಿಗಳ ಮನಗೆಲ್ಲುತ್ತಾರೆ.

ಶ್ರೀಲೀಲ‌ ನಾಯಕನ ಸ್ನೇಹಿತೆಯಾಗಿದ್ದಾರೆ. ವೈರಲ್ ವೈಯಾರಿ ಡಾನ್ಸ್ ಮೂಲಕ ನಿಜಕ್ಕೂ ವೈರಲಾಗುತ್ತಾರೆ. ಉಳಿದಂತೆ ಕನ್ನಡದ ಜನಪ್ರಿಯ ಕಲಾವಿದರಾದ ಅಚ್ಯುತ್ ಕುಮಾರ್, ಬಿರಾದಾರ್, ವಿಜಯ್ ಚೆಂಡೂರ್ ಮೊದಲಾದವರು ನಟಿಸಿದ್ದಾರೆ. ತೆಲುಗು ನಟ ರಾವ್ ರಮೇಶ್ ನಟನೆಯನ್ನು ಕೂಡ ಮರೆಯಲಾಗದು.

ದೇವಿಶ್ರೀ ಪ್ರಸಾದ್ ಸಂಗೀತ ಮತ್ತು ಸೆಂದಿಲ್ ಛಾಯಾಗ್ರಹಣದಲ್ಲಿ ಅದ್ಧೂರಿ ಫ್ಯಾಮಿಲಿ ಎಂಟರ್ಟೇನರ್ ಆಗಿ ಸಿನಿಮಾ ಅಭಿಮಾನಿಗಳ ಮನ ಗೆದ್ದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!