ಯಶ್- ತಾಯಿ ನಡುವೆ ಬಿರುಕು?

ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ತಾಯಿ ಪುಷ್ಪ ಅರುಣ್ ಕುಮಾರ್ ನಡುವೆ ಬಿರುಕು ಉಂಟಾಗಿದೆ ಎನ್ನುವ ಸಂಶಯ ಮೂಡಿದೆ.

ಪುಷ್ಪಾ ಅರುಣ್ ಕುಮಾರ್ ನಿರ್ಮಾಣ ಮಾಡಿರುವ ಚೊಚ್ಚಲ ಚಿತ್ರ ಕೊತ್ತಲವಾಡಿ ಆಗಸ್ಟ್ 1 ರಂದು ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಚಾರ ಪ್ರಾರಂಭಿಸುವ ಮೊದಲು ಮಾಧ್ಯಮದವರು ಕೇಳಿದ  ಪ್ರಶ್ನೆಗಳಿಗೆ ಪುಷ್ಪಾ ಅವರು ನೀಡಿದ ಉತ್ತರಗಳು ತಾಯಿ ಮತ್ತು ಮಗನ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ  ಹುಟ್ಟುವಂತೆ ಮಾಡಿದೆ.

‘ಯಶ್‌.. ಯಶ್‌.. ಅನ್ನೋದಾದ್ರೆ ಅವನ ಹತ್ತಿರವೇ ಹೋಗಿ. ಹೋಗಿ ಯಶ್‌ ಹತ್ರಾನೇ ಪ್ರಶ್ನೆ ಕೇಳಿ, ನಾನು ಯಶ್‌ ಬಗ್ಗೆ ಏನೂ ಹೇಳಲ್ಲ. ಯಶ್‌ ನಿಮಗೆ ಮಾತ್ರವಲ್ಲ, ನಮಗೂ ಸಿಗಲ್ಲ ಎಂದು ಪುಷ್ಪ ಅರುಣ್ ಕುಮಾರ್ ಗರಂ ಆದರು.

ಯಶ್ ಮತ್ತು  ರಾಧಿಕಾ ಪಂಡಿತ್ ಚಿತ್ರ ಬಿಡುಗಡೆಯಾಗುವ ಮೊದಲ ದಿನದ ಮೊದಲ ಪ್ರದರ್ಶನ ನೋಡುತ್ತಾರಾ ಎಂಬ ಪ್ರಶ್ನೆಗೆ ‘ಅದನ್ನು ಅವರನ್ನೇ ಹೋಗಿ ಕೇಳಿ. ನಾನು ನಿಮ್ಮನ್ನು ಆಹ್ವಾನಿಸಿದಾಗ ನೀವು ಬರದಿದ್ದರೆ, ನಾನು ಏನು ಮಾಡಲು ಸಾಧ್ಯ?’ ಎಂದು ಪ್ರಶ್ನಿಸಿದರು.

‘ಅಮ್ಮನ ಮೊದಲ ಸಿನಿಮಾ ಬರ್ತಿದೆ ಅನ್ನೋ ಸೆಂಟಿಮೆಂಟ್‌ ಎಲ್ಲ ನಮ್ಮ ಮನೇಲಿ ಇಟ್ಟುಕೊಂಡಿಲ್ಲ. ನಾವು ಮನೆ ಕಟ್ಟಿದ ಮೇಲೆ ಯಶ್‌ ಇಲ್ಲ ಎಂದರೂ ಗೃಹಪ್ರವೇಶ ಮಾಡ್ತೀವಿ’ ಎಂದು ಖಡಕ್‌ ಆಗಿ ಹೇಳಿದರು.

ಯಶ್ ನಿಮ್ಮ ಮಗ ಎಂದು ಹೇಳಿದಾಗ ಮಗ ಎಂದಾಕ್ಷಣ ‘ಅವನು ನನ್ನ ಮಾತು ಕೇಳಬೇಕು ಎಂದೇನಿಲ್ಲ. ನಮ್ಮ ಮನೆಯಲ್ಲಿ ಅಂತಹ ಯಾವುದೇ ನಿಯಮಗಳಿಲ್ಲ. ನಮ್ಮ ಚೊಚ್ಚಲ ಸಿನಿಮಾವನ್ನು ಯಶ್‌, ರಾಧಿಕಾ ಯಾರಿಗೂ ತೋರಿಸುವುದಿಲ್ಲ. ಈ ಸಿನಿಮಾ ನೋಡ್ತಾರೋ ಬಿಡ್ತಾರೋ ಅದನ್ನ ಅವರ ಬಳಿಯೇ ಕೇಳಿ. ಇಲ್ಲಿ ಮಗ ಬೇರೆ, ಅಮ್ಮ ಬೇರೆ, ಎಲ್ಲವೂ ಬೇರೆ ಬೇರೆ’ ಎಂದರು.

‘ಯಶ್‌ ನಮ್ಮ ಸಿನಿಮಾ ನೋಡ್ತಾನೋ, ನೋಡಲ್ವೋ ನಾನು ನಿರೀಕ್ಷೆ ಮಾಡಲ್ಲ. ಪ್ರೇಕ್ಷಕರು ನೋಡಬೇಕು. ಯಶ್‌ ನೋಡಿದ ತಕ್ಷಣ ಸಿನಿಮಾ ಹಿಟ್ ಆಗುತ್ತಾ? ನನ್ನ ಹಣ ವಾಪಸ್‌ ಬರುತ್ತಾ? ಇಲ್ಲಿ ನನಗೆ ಮಗನ ಅಭಿಪ್ರಾಯ ಬೇಕಾಗಿಲ್ಲ. ಪ್ರೇಕ್ಷಕರ ಅಭಿಪ್ರಾಯ ಮುಖ್ಯ. ಯಶ್‌ ಒಬ್ಬನಿಂದ ಸಿನಿಮಾ ಓಡಲ್ಲ. ನನ್ನ ಹಣ  ಬರಲ್ಲ. ಸುದೀಪ್, ದರ್ಶನ್, ಯಶ್ ಮತ್ತು ಧ್ರುವ ಸರ್ಜಾ ಅವರ ಅಭಿಮಾನಿ ಎಲ್ಲರೂ ಬಂದು ಸಿನಿಮಾ ನೋಡಲಿ. ಅವರ ಪ್ರತಿಕ್ರಿಯೆ ಮುಖ್ಯ’ ಎಂದರು.

ಇತ್ತೀಚೆಗೆ ಯಶ್ ಜೊತೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ ‘ಇಲ್ಲ,  ಮಾತನಾಡಿಲ್ಲ. ಅವನಿಗೆ ಈಗ ಹೆಂಡತಿ ಇದ್ದಾಳೆ. ನಾನು ಅವನ ಜೊತೆಯೇಕೆ ಮಾತನಾಡಬೇಕು? ಅವನು ಮದುವೆಯಾದ ಮೇಲೆ ನನ್ನ ಪಾತ್ರ ಮುಗಿಯಿತು. ಅವಳೇ ಎಲ್ಲವನ್ನೂ ನಿಭಾಯಿಸಬೇಕು’ ಎಂದು ಹೇಳಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!