ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರಕ್ಕಾಗಿ ಅದ್ದೂರಿ ಪ್ರಮೋಷನ್ ಸಾಂಗ್ ಗೆ ಹೆಜ್ಜೆ ಹಾಕಲು ಉಗಾಂಡದಿಂದ “ಘೆಟ್ಟೋ ಕಿಡ್ಸ್” ಎಂದೇ ಖ್ಯಾತರಾಗಿರುವ ನೃತ್ಯಗಾರರ ತಂಡ ಆಗಮಿಸಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ಅವರು ಉಗಾಂಡಾ ದಿಂದ ಆಗಮಿಸಿದ ನೃತ್ಯಗಾರರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಪ್ರಮೋಷನ್ ಸಾಂಗ್ ಕುರಿತು ಮಾತನಾಡಿದ ನಿರ್ದೇಶಕ ಅರ್ಜುನ್ ಜನ್ಯ, ಎಲ್ಲಾ ಚಿತ್ರಗಳಲ್ಲೂ ಸಾಮಾನ್ಯವಾಗಿ ಪ್ರಮೋಷನ್ ಸಾಂಗ್ಸ್ ಇರುತ್ತದೆ. ನಾವು ಸ್ವಲ್ಪ ವಿಭಿನ್ನವಾಗಿ ಮಾಡೋಣ ಅಂದುಕೊಂಡಿದ್ದೇವೆ. ತಮ್ಮ ಅಮೋಘ ನೃತ್ಯದಿಂದ ವಿಶ್ವದಲ್ಲೇ ಪ್ರಸಿದ್ದರಾಗಿರುವ ಉಗಾಂಡದ “ಘೆಟ್ಟೋ ಕಿಡ್ಸ್” ಎಂಬ ನೃತ್ಯಗಾರರ ತಂಡ ಈ ಹಾಡಿಗೆ ನೃತ್ಯ ಮಾಡಲು ದೂರದ ಉಗಾಂಡಾ ದಿಂದ ಆಗಮಿಸಿದ್ದಾರೆ. ಇವರು ಇದೇ ಮೊದಲು ಭಾರತಕ್ಕೆ ಆಗಮಿಸಿರುವುದು’ ಎಂದರು.
ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕರು ಸಿನಿಮಾವನ್ನು ಪ್ರೀತಿಸುವ ರೀತಿ ನೋಡಿದರೆ ಸಂತೋಷವಾಗುತ್ತದೆ. ಪ್ರಮೋಷನ್ ಸಾಂಗ್ ನ್ನು ಅದ್ದೂರಿಯಾಗಿ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಉಗಾಂಡಾದಿಂದ ಹೆಸರಾಂತ ನೃತ್ಯಗಾರರು ಆಗಮಿಸಿದ್ದಾರೆ. ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರು ಹಾಡಿನಲ್ಲಿ ಅಭಿನಯಿಸಲಿದ್ದಾರೆ ಎಂದು ತಿಳಿಸಿದರು.
ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ. “45” ಚಿತ್ರ ಭಾರತ ಹಾಗೂ ಭಾರತದಾಚೆಗೂ ಯಶಸ್ವಿಯಾಗಲಿದೆ ಎಂಬ ನಂಬಿಕೆ ನನಗಿದೆ. ಆಗಸ್ಟ್ 15 ರಂದು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದರು.
ಪ್ರಮೋಷನ್ ಸಾಂಗ್ ನ ಚಿತ್ರೀಕರಣದಲ್ಲಿ ಶಿವರಾಜಕುಮಾರ್, ಉಪೇಂದ್ರ , ರಾಜ್ ಬಿ ಶೆಟ್ಟಿ ಹಾಗೂ ಉಗಾಂಡಾದ “ಜಿಟೊ ಕಿಡ್ಸ್” ಪಾಲ್ಗೊಳ್ಳಲ್ಲಿದ್ದಾರೆ. ಇದಕ್ಕಾಗಿ ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ. ಎಂ.ಸಿ.ಬಿಜ್ಜು ಹಾಡನ್ನು ಬರೆದು ಹಾಡಿದ್ದಾರೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.
—–

Be the first to comment