ಪುನೀತ್ ರಾಜ್ಕುಮಾರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಅಂಜನಿಪುತ್ರ’ ಚಿತ್ರವನ್ನು ಮೇ 10ಕ್ಕೆ ರೀ ರಿಲೀಸ್ ಮಾಡಲಾಗುತ್ತಿದೆ.
7 ವರ್ಷಗಳ ಹಿಂದೆ ತೆರೆಕಂಡಿದ್ದ ಆಕ್ಷನ್ ಫ್ಯಾಮಿಲಿ ಡ್ರಾಮಾ ಚಿತ್ರ ‘ಅಂಜನಿಪುತ್ರ’ ರೀ-ರಿಲೀಸ್ ಮಾಡುವಂತೆ ಅಭಿಮಾನಿಗಳು ಕೇಳುತ್ತಿದ್ದರು. ಹಾಗಾಗಿ ಈ ಪ್ರಯತ್ನ ಎಂದಿದ್ದಾರೆ ನಿರ್ಮಾಪಕ ಎಂ.ಎನ್ ಕುಮಾರ್ .
50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಅಂಜನಿಪುತ್ರ’ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಸ್ಕ್ರೀನ್ಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.
‘ಅಂಜನಿಪುತ್ರ’ ತಮಿಳಿನ ‘ಪೂಜೈ’ ಸಿನಿಮಾ ರೀಮೇಕ್. ಎ. ಹರ್ಷ ನಿರ್ದೇಶನದ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಪುನೀತ್ ತಾಯಿ ಪಾತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದಾರೆ. ಇನ್ನುಳಿದಂತೆ ಚಿಕ್ಕಣ್ಣ, ಆರ್ಮುಗ ರವಿಶಂಕರ್, ಮುಖೇಶ್ ತಿವಾರಿ, ಸಾಧುಕೋಕಿಲ ಚಿತ್ರದ ತಾರಾಗಣದಲ್ಲಿದ್ದಾರೆ. ‘ಅಂಜನಿಪುತ್ರ’ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಅಂಜನಾ ದೇವಿಯ ತುಂಬು ಕುಟುಂಬದ ಕಥೆ ಈ ಚಿತ್ರದಲ್ಲಿದೆ. ‘ಅಂಜನಿಪುತ್ರ’ ಬಿಡುಗಡೆ ವೇಳೆ ವಕೀಲರ ಕುರಿತು ಚಿತ್ರದಲ್ಲಿದ್ದ ಅವಹೇಳನಕಾರಿ ಸಂಭಾಷಣೆ ವಿರುದ್ಧ ದೂರು ದಾಖಲಾಗಿ ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಕೋರ್ಟ್ ಆದೇಶ ನೀಡಿತ್ತು. ಕೊನೆಗೆ ವಿವಾದಿತ ಸಂಭಾಷಣೆಗೆ ಕತ್ತರಿ ಬಿದ್ದ ಬಳಿಕ ಸಿನಿಮಾ ಪ್ರದರ್ಶನ ಮುಂದುವರೆದಿತ್ತು.
ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಜಾಕಿ’ ರೀ-ರಿಲೀಸ್ ವೇಳೆ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.
Be the first to comment