ಚಿತ್ರ: ‘ಮಿಸ್ಟರ್ ನಟ್ವರ್ ಲಾಲ್’
ನಿರ್ದೇಶಕ : ಲವ
ನಿರ್ಮಾಪಕ : ತನುಷ್ ಶಿವಣ್ಣ
ಛಾಯಾಗ್ರಹಣ : ವಿಲಿಯಂ ಡೇವಿಡ್
ಸಂಗೀತ : ಧರ್ಮವಿಶ್
ತಾರಾ ಬಳಗ : ತನುಷ್ ಶಿವಣ್ಣ, ಸೋನಾಲ್ ಮೊಂಟೆರೋ, ರಾಜೇಶ್ ನಟರಂಗ, ನಾಗಭೂಷಣ್, ಹರಣಿ ಶ್ರೀಕಾಂತ್, ರಘು ರಮಣಕೊಪ್ಪ, ‘ಕಾಕ್ರೋಚ್’ ಸುಧಿ, ವಿಜಯ್ ಚೆಂಡೂರ್, ಇತರರು
ರೇಟಿಂಗ್: 3.5/5
ಆಧುನಿಕ ರಾಬಿನ್ ಹುಡ್ ರೀತಿಯ ಜೀವನ ನಡೆಸುವ ಕಥಾ ನಾಯಕನ ಕಥೆ ಇರುವ ಚಿತ್ರ ‘ಮಿಸ್ಟರ್ ನಟ್ವರ್ ಲಾಲ್’.
ಇದೊಂದು ಕ್ರೈಂ ಬೇಸ್ಡ್ ಕಥೆ. ಇಲ್ಲಿನ ನಾಯಕ ಹಗರಣ, ವಂಚನೆ ಮಾಡಿದರೂ, ಹಣವನ್ನು ಶ್ರೀಮಂತರಿಂದ ಕಿತ್ತುಕೊಂಡು ಬಡವರಿಗೆ ಹಂಚುವ ದಯಾಮಯಿ. ಈತ ಮಾಡುವ ವಂಚನೆಯ ಉದ್ದೇಶ ಏನು ಎನ್ನುವುದಕ್ಕೆ ಚಿತ್ರವನ್ನು ನೋಡಬೇಕು.
ಆನ್ಲೈನ್ ಜಗತ್ತಿನಲ್ಲಿ ನಡೆಯುವ ಮೋಸದ ಹಗರಣಗಳು ಇಲ್ಲಿವೆ. ಬುದ್ದಿವಂತ ಯುವಕನ ನಡೆಯಲ್ಲಿ ಅನ್ಯಾಯದ ವಿರುದ್ಧದ ಧ್ವನಿ ಕಂಡು ಬರುತ್ತದೆ. ಚಿತ್ರ ಹಲವು ಟ್ವಿಸ್ಟ್ ತೆಗೆದುಕೊಳ್ಳುವ ಮೂಲಕ ನೋಡುಗರಿಗೆ ರೋಚಕತೆಯನ್ನು ಉಂಟು ಮಾಡುತ್ತದೆ.
ಆರಂಭದಲ್ಲಿ ಮಹಿಳೆ ಒಬ್ಬರ ಕೊಲೆ ಆಗುತ್ತದೆ. ಆ ಕೊಲೆ ಯಾಕೆ ಆಗುತ್ತದೆ? ಆ ಮಹಿಳೆ ಯಾರು ಎನ್ನುವ ಪ್ರಶ್ನೆಗೆ ಕ್ಲೈಮಾಕ್ಸ್ ನಲ್ಲಿ ಉತ್ತರ ಸಿಗುತ್ತದೆ. ನಿರ್ದೇಶಕರು ಕುತೂಹಲದೊಂದಿಗೆ ಚಿತ್ರಕಥೆಯನ್ನು ತೆಗೆದುಕೊಂಡು ಹೋಗಿದ್ದಾರೆ.
ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ತನುಷ್ ಶಿವಣ್ಣ ಇಷ್ಟವಾಗುತ್ತಾರೆ. ವಂಚಕನ ಪಾತ್ರ ಮಾಡಿದರೂ, ಚಿತ್ರದ ಕೊನೆಯಲ್ಲಿ ಅವರು ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಸೋನಾಲ್ ತೆರೆಯಲ್ಲಿ ಕಾಣಿಸಿಕೊಳ್ಳುವ ವೇಳೆ ನೋಡುಗರಿಗೆ ಹಿತ ಅನಿಸುತ್ತಾರೆ. ರಾಜೇಶ್ ನಟರಂಗ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ.
ಧರ್ಮ ವಿಶ್ ಅವರ ಸಂಗೀತ ಹಿತ ಅನಿಸುತ್ತದೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ನೋಡುವವರಿಗೆ ‘ಮಿಸ್ಟರ್ ನಟ್ವರ್ ಲಾಲ್’ ಇಷ್ಟವಾಗಬಹುದು.
___

Be the first to comment