ಈ ಬಾರಿಯ ಬಿಗ್ ಬಾಸ್ ಸೀಸನ್ ಹೊಸ ಸ್ಥಳಕ್ಕೆ ಸ್ಥಳಾಂತರ ಹೊಂದಿದೆ.
ದೊಡ್ಡ ಆಲದ ಮರ ಬಳಿಯ ಜಾಗವೊಂದರಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದೆ. ನೂರಾರು ಕಾರ್ಮಿಕರು ನಾಲ್ಕು ತಿಂಗಳ ಕಾಲ ಶ್ರಮ ವಹಿಸಿ ಭವ್ಯವಾದ ಮನೆಯನ್ನು ಕಟ್ಟಿದ್ದಾರೆ.
ಹೊಸ ಮನೆ ಹೆಚ್ಚು ವಿಶಾಲವಾಗಿದ್ದು, ಬೇರೆಭಾಷೆಯ ಬಿಗ್ ಬಾಸ್ ಮನೆಗಳಿಗಿಂತ ದೊಡ್ಡದಾಗಿದೆ. 12 ಸಾವಿರ ಚದರಡಿಗಳ ಈ ಮನೆಯಲ್ಲಿ ಮೊದಲಿಗಿಂತ ದೊಡ್ಡ ಆಟ ಹಾಗೂ ಟಾಸ್ಕ್ ಗಳನ್ನು ಮಾಡಬಹುದು. 16ಸ್ಪರ್ಧಿಗಳು ಭಾಗವಹಿಸಲಿರುವ ಈ ಮನೆಯನ್ನು 73 ಕ್ಯಾಮರಾಗಳು ಕಾಯಲಿವೆ.
ಈ ಮನೆಗೆ ಸ್ಪರ್ಧಿಗಳು ಶನಿವಾರ ರಾತ್ರಿ ಎಂಟ್ರಿ ಕೊಡುವ ಸಾಧ್ಯತೆ ಇದೇ. ಭಾನುವಾರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸೋಮವಾರದಿಂದ ಪ್ರತೀ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.
ಕಳೆದ ಒಂಬತ್ತು ವರ್ಷಗಳಲ್ಲಿ ಮೊದಲ ಎರಡು ವರ್ಷ ಬಿಗ್ ಬಾಸ್ ಪೂಣೆಯಲ್ಲಿ ಚಿತ್ರೀಕರಣಗೊಳ್ಳುತ್ತಿತ್ತು. ಹಿಂದಿ ‘ಬಿಗ್ ಬಾಸ್’ ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಸೆಟ್ನಲ್ಲೇ ಕನ್ನಡ ಕಾರ್ಯಕ್ರಮದ ಚಿತ್ರೀಕರಣ ನಡೆಯುತ್ತಿತ್ತು. ಸುದೀಪ್ ಬೆಂಗಳೂರಿನಿಂದ ಲೋನಾವಳಕ್ಕೆ ಪ್ರಯಾಣ ಮಾಡಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.
ನಂತರ ಈ ಕಾರ್ಯಕ್ರಮ ಬೆಂಗಳೂರಿಗೆ ಶಿಫ್ಟ್ ಆಯಿತು. ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಈ ಕಾರ್ಯಕ್ರಮಕ್ಕಾಗಿ ವಿಶೇಷ ಸೆಟ್ ಹಾಕಿ ಚಿತ್ರೀಕರಣ ಮಾಡಲಾಯಿತು. ಇನ್ನೋವೇಟೀವ್ ಫಿಲಂ ಸಿಟಿ ಈಗ ಜಾಲಿವುಡ್ ಆಗಿರುವುದರಿಂದ ದೊಡ್ಡ ಆಲದ ಮರ ಬಳಿಯ ಜಾಗದಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದೆ.
ಈ ಬಾರಿ ‘777 ಚಾರ್ಲಿ’ ಚಿತ್ರದಲ್ಲಿ ನಟಿಸಿರುವ ಶ್ವಾನ, ನಟರಾದ ಸುನೀಲ್ ರಾವ್, ರಘು ಮುಖರ್ಜಿ, ಅಕ್ಕ ಅನು, ಪ್ರಕಾಶ್ ತುಮ್ಮಿನಾಡು, ರಂಜಿನಿ ರಾಘವನ್, ಹುಲಿ ಕಾರ್ತಿಕ್, ನಮ್ರತಾ ಗೌಡ, ಚಂದ್ರಪ್ರಭ, ‘ಬಾಲಾಜಿ ಫೋಟೋ ಸ್ಟುಡಿಯೋ’ ಖ್ಯಾತಿಯ ರಾಜೇಶ್ ಧ್ರುವ, ‘ಕೆಜಿಎಫ್’ನಲ್ಲಿ ಅಭಿನಯಿಸಿದ್ದ ರೂಪಾ ರಾಯಪ್ಪ, ಮಿಮಿಕ್ರಿ ಗೋಪಿ, ಕ್ರಿಕೆಟರ್ ವಿನಯ್ ಕುಮಾರ್, ಪೋಷಕ ನಟಿ ಸ್ವಾತಿ, ಬುಲೆಟ್ ಪ್ರಕಾಶ್ ಮಗ ರಕ್ಷಕ್, ರ್ಯಾಪರ್ ಇಶಾನಿ ಮುಂತಾದವರು ಭಾಗವಹಿಸುವ ನಿರೀಕ್ಷೆ ಇದೆ.
____
Be the first to comment