ಕಥಾವಸ್ತು ಹಳೆಯದಾದರೂ ಪ್ರಸ್ತುತ ಎನ್ನುವ ಕಾರಣಕ್ಕೆ ಪ್ರೇಕ್ಷಕರಿಗೆ ಕನೆಕ್ಟ್ ಆಗುವ ಜವಾನ್ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸುತ್ತದೆ.
ಶಾರುಖ್ ಖಾನ್ ಸಿನಿಮಾದಲ್ಲಿ ದ್ವಿಪಾತ್ರ ಮಾಡಿದ್ದಾರೆ. ಅಪ್ಪ-ಮಗನ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಚಿತ್ರ ಎರಡು ಕಾಲಘಟ್ಟದಲ್ಲಿ ಕಥೆ ಸಾಗುತ್ತದೆ. ಶಾರುಖ್ ಖಾನ್ ನಟನೆಗಿಂತಲೂ ಹೆಚ್ಚಾಗಿ ಆ್ಯಕ್ಷನ್ಗೆ ಒತ್ತು ನೀಡಿದ್ದಾರೆ. ಮಾಸ್ ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ನೀಡಲು ಶಾರುಖ್ ಖಾನ್ ಮುಂದಾಗಿದ್ದಾರೆ.
ಸಿನಿಮಾದಲ್ಲಿ ಬಾಲಿವುಡ್ ಮತ್ತು ತಮಿಳು ಚಿತ್ರರಂಗದ ಸಂಗಮ ಆಗಿದ್ದು, ಕಾಲಿವುಡ್ನ ಪ್ರತಿಭಾವಂತ ಕಲಾವಿದರು ಮತ್ತು ತಂತ್ರಜ್ಞರು ಶಾರುಖ್ ಖಾನ್ ಜೊತೆ ಕೈ ಜೋಡಿಸಿದ್ದಾರೆ. ದೇಶದಲ್ಲಿ ಕಾಡುತ್ತಿರುವ ರೈತರ ಸಮಸ್ಯೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಎಲ್ಲಡೆ ಬೇರು ಬಿಟ್ಟಿರುವ ಭ್ರಷ್ಟಾಚಾರ ಮುಂತಾದ ಅಂಶಗಳ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗಿದೆ. ಎಲ್ಲವನ್ನೂ ಪಕ್ಕಾ ಮಾಸ್ ಕಮರ್ಷಿಯಲ್ ಶೈಲಿಯಲ್ಲಿ ನಿರೂಪಿರುವುದು ವಿಶೇಷ ಆಗಿದೆ.
ಸಿನಿಮಾದಲ್ಲಿ ಶಾರುಖ್ ಖಾನ್ ಆವರಿಸಿಕೊಂಡಿದ್ದಾರೆ. ಆದರೆ ಎಲ್ಲರಿಗೂ ಅಗತ್ಯವಾದ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿರುವ ನಯನತಾರಾ, ಖೈದಿಗಳಾಗಿ ಕಾಣಿಸಿಕೊಂಡ ಪ್ರಿಯಾಮಣಿ, ಸಾನ್ಯಾ ಮಲೋತ್ರಾ, ಫ್ಲ್ಯಾಶ್ ಬ್ಯಾಕ್ ದೃಶ್ಯಗಳಲ್ಲಿ ಬರುವ ದೀಪಿಕಾ ಪಡುಕೋಣೆ ಪಾತ್ರಗಳಿಗೆ ತೂಕ ಇದೆ. ವಿಜಯ್ ಸೇತುಪತಿ ಅವರು ಹೊಡಿಬಡಿ ದೃಶ್ಯಗಳಿಗಿಂತಲೂ ಹೆಚ್ಚಾಗಿ ಹಾವಭಾವದಲ್ಲೇ ಹೀರೋಗೆ ಟಕ್ಕರ್ ನೀಡುವ ವಿಲನ್ ಪಾತ್ರವಾಗಿ ಗಮನ ಸೆಳೆಯುತ್ತಾರೆ.
ಸಂಜಯ್ ದತ್ ಅವರು ವಿಶೇಷವಾದ ಪಾತ್ರ ಮಾಡಿದ್ದಾರೆ. ಕಾಮಿಡಿ ಜೊತೆಗೆ ಖಡಕ್ ಆಗಿ ನಡೆದುಕೊಳ್ಳುವ ಅವರು ಪ್ರೇಕ್ಷಕರಿಗೆ ಮನರಂಜನೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಚಿತ್ರದಲ್ಲಿ ರೊಮ್ಯಾಂಟಿಕ್ ಆಗಿ ಶಾರುಖ್ ಕಾಣಸಿಗುವುದಿಲ್ಲ. ಆದರೆ ಅವರು ಆ್ಯಕ್ಷನ್ ಹೀರೋ ಆಗಿ ಅಬ್ಬರಿಸಿದ್ದಾರೆ. ಆಕ್ಷನ್ ಜೊತೆಗೆ ಒಂದಷ್ಟು ದೇಶಭಕ್ತಿ, ಫ್ಯಾಮಿಲಿ ಎಮೋಷನ್ ಮುಂತಾದ ಅಂಶಗಳ ಮೂಲಕ ಎಲ್ಲಿಯೂ ಬೋರ್ ಆಗದಂತೆ ಚಿತ್ರ ನೋಡಿಸಿಕೊಂಡು ಹೋಗುವ ಮೂಲಕ ಚಿತ್ರ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಮತ್ತೆ ಶಾರುಖ್ ಖಾನ್ ಗೆಲುವಿನ ಓಟ ಮುಂದುವರೆಸಿದ್ದಾರೆ.
ಕಮರ್ಷಿಯಲ್ ಕಥೆಯ ಮೂಲಕ ಜನರಿಗೆ ಸಂದೇಶ ನೀಡುವ ಕೆಲಸ ಚಿತ್ರ ಮಾಡಿರುವುದು ಗಮನ ಸೆಳೆಯುವ ಅಂಶ ಆಗಿದೆ.
_____
Be the first to comment