‘ನನಗೂ ಹೆಂಡ್ತಿ ಬೇಕು’ ಅಂತಿದ್ದಾರೆ ತಬಲ ನಾಣಿ.. ಒಪ್ತಾರಾ ಚೈತ್ರಾ ಕೋಟೂರ್?

ಕನ್ನಡ ಚಿತ್ರರಂಗದ ಹಾಸ್ಯ ನಟ ತಬಲ ನಾಣಿ ‘ಕ್ರಿಟಿಕಲ್​ ಕೀರ್ತನೆಗಳು’ ಸಿನಿಮಾ ಬಳಿಕ ವಿಭಿನ್ನ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ಮಠ’ ಸಿನಿಮಾ ನಂತರ ತಬಲ ನಾಣಿ ಮತ್ತೆ ಅಂಧನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ‘ನನಗೂ ಹೆಂಡ್ತಿ ಬೇಕು’ ಎಂದು ಟೈಟಲ್​ ಇಡಲಾಗಿದೆ. ಈ ಹಿಂದೆ ದೇಶಪ್ರೇಮ ಸಾರುವ ‘ಆ್ಯಕ್ಟ್​ 370’ ಎಂಬ ಚಿತ್ರ ನಿರ್ದೇಶಿಸಿದ್ದ ಕೆ ಶಂಕರ್​ ಇದೀಗ ಕಾಮಿಡಿ ಜಾನರ್​ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ.

ಕೆ ಶಂಕರ್ ನಿರ್ದೇಶನವಿರುವ ಈ ಚಿತ್ರ ‘ನನಗೂ ಹೆಂಡ್ತಿ ಬೇಕು’. ಅಂಧನೊಬ್ಬ ಮದುವೆಯಾಗಲು ಹೊರಟಾಗ ನಡೆಯುವ ಪ್ರಸಂಗಗಳನ್ನು ಹಾಸ್ಯಮಯವಾಗಿ ಹೇಳುವ ಕಥೆ ಇದಾಗಿದೆ. ಸದ್ಯ ಈ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ತಬಲಾ ನಾಣಿ ಅಲ್ಲದೇ, ರಾಜ್ ಬಾಲ, ಬ್ಯಾಂಕ್ ಜನಾರ್ಧನ್, ಶೃತಿ, ಚೈತ್ರಾ ಕೋಟೂರ್, ರಮೇಶ್ ಭಟ್, ಕಿಲ್ಲರ್ ವೆಂಕಟೇಶ್, ಗಣೇಶ್ ರಾವ್, ದೊಡ್ಡ ರಂಗೇಗೌಡ, ಧರ್ಮ, ಕೆಜಿಎಫ್ ಕೃಷ್ಣಪ್ಪ, ಪ್ರಿಯಾಂಕ, ಗಾನವಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಕೆ ಶಂಕರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಸಂಪೂರ್ಣ ಕಾಮಿಡಿ ಜಾನರ್ ಚಿತ್ರವಾಗಿದೆ. ಮದುವೆಯಾಗಲು ಹೊರಟು ಒಂದು ಹೆಣ್ಣು ಕೂಡ ಸಿಗದೇ ಪರಿತಪಿಸುವ ಕುರುಡನ ಪಾತ್ರದಲ್ಲಿ ಹಾಸ್ಯನಟ ತಬಲ ನಾಣಿ ಅವರು ಕಾಣಿಸಿಕೊಂಡಿದ್ದಾರೆ. ತಬಲ ನಾಣಿ ಎದುರು ಬ್ಯಾಂಕ್ ಜನಾರ್ದನ್ ಮತ್ತು ಬಾಲು ನಕಾರಾತ್ಮಕ ಪಾತ್ರದಲ್ಲಿ ರಂಜಿಸಲಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಮೂಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಎರಡು ಫೈಟ್ ಮತ್ತು ಎರಡು ಹಾಡುಗಳಿದ್ದು, ಕೆ ಎಮ್ ಇಂದ್ರ ಅವರ ಸಂಗೀತ ಸಂಯೋಜನೆಯಿದೆ.

 ಚಿತ್ರದ ಚಿತ್ರೀಕರಣ ಚಿತ್ರದುರ್ಗ ಜಿಲ್ಲೆಯ ಸುಂದರ ತಾಣಗಳಲ್ಲಿ ಮಾಡಲಾಗಿದೆ. ಲೈರಾ ಎಂಟರ್​ಟೈನ್​ಮೆಂಟ್​ ಅಂಡ್ ಮೀಡಿಯಾ ಮೂಲಕ ಭರತ್ ಗೌಡ ಮತ್ತು ಸಿ ರಮೇಶ್ ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!