ಜನರಕ್ಷಕ ಚಿತ್ರದ ಪೋಸ್ಟರ್ ರಿಲೀಸ್

‘ಜನರಕ್ಷ’ಕ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮಲ್ಲೇಶ್ವರಂನ ಶುಕ್ರ ಆಡಿಟೋರಿಯಂನಲ್ಲಿ ನೆರವೇರಿತು.

ವೀಟು ಪ್ರೊಡಕ್ಷನ್ ಮೂಲಕ ನಿರ್ಮಾಣವಾಗಿರುವ ಚಿತ್ರದ ಟೈಟಲ್ ಪೋಸ್ಟರ್ ನ್ನು ಹಿರಿಯ ನಿರ್ಮಾಪಕ ಚಿನ್ನೇಗೌಡ್ರು ಹಾಗೂ ಕರಿಸುಬ್ಬು ಅವರು ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಚಿನ್ನೇಗೌಡ್ರು, ”ಕನ್ನಡದಲ್ಲಿ ಪಾರ್ವತಮ್ಮ ರಾಜಕುಮಾರ್, ಲೀಲಾವತಿ, ಜಯಶ್ರೀದೇವಿ, ಪ್ರಿಯಾ ಹಾಸನ್ ಸೇರಿದಂತೆ ಹಲವಾರು ಮಹಿಳೆಯರು ನಿರ್ಮಾಪಕಿಯಾಗಿ ಕೊಡುಗೆಯನ್ನು ನೀಡಿದ್ದಾರೆ. ಈ ಸಾಲಿಗೆ ಈ ಚಿತ್ರದ ಮೂಲಕ ಗೌರಿ ಶ್ರೀ ಅವರು ನಿರ್ಮಾಪಕಿಯಾಗಿ ಸೇರ್ಪಡೆಯಾಗಿದ್ದಾರೆ. ಈ ಚಿತ್ರ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿ” ಎಂದು ಹೇಳಿದರು.

ಕರಿಸುಬ್ಬು ಮಾತನಾಡಿ, ”ಕಲೆಗೆ ಯಾವತ್ತೂ ಸಾವಿಲ್ಲ. ಕಲಾವಿದನಾದವನು ಯಾವುದೇ ಪಾತ್ರವನ್ನು ನೀಡಿದರೂ ಅದಕ್ಕೆ ಜೀವ ತುಂಬಬೇಕು. ಗೌರಿಶ್ರೀ ಅವರು ಹೊಸ ಸಾಹಸಕ್ಕೆ ಕೈ ಹಾಕಿರುವುದು ಅಭಿನಂದನೀಯ. ದಾಸ್ ಅವರಂಥ ಅನುಭವಿ ಛಾಯಾಗ್ರಹಕ ಅವರಿಗೆ ಸಿಕ್ಕಿರುವುದು ಅದೃಷ್ಟ” ಎಂದು ಹೇಳಿದರು.

ನಿರ್ಮಾಪಕಿ ಗೌರಿ ಶ್ರೀ ಮಾತನಾಡಿ, ”ಐದಾರು ವರ್ಷದ ಹಿಂದೆ ನಾನು ಪರಮಾತ್ಮ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆ ಅಭಿನಯಿಸಿದ್ದೆ. ಆಗ ಅವರು ನನಗೆ ತುಂಬಾ ಪ್ರೋತ್ಸಾಹ ನೀಡಿದ್ದರು. ಅವರು ಡಾನ್ಸ್ ಸ್ಕೂಲ್ ಆರಂಭಿಸಲು ಸಹಾಯ ಮಾಡಿದ್ದರು. ಈ ಕಥೆಯನ್ನು ಲಾಕ್ಡೌನ್ ಸಮಯದಲ್ಲಿ ಬರೆದದ್ದು. ಮಕ್ಕಳಾದವರು ತಮ್ಮ ಕುಟುಂಬದ ಘನತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು? ಕುಡಿತದಿಂದ ಸಂಸಾರಗಳು ಹೇಗೆ ಹಾಳಾಗುತ್ತದೆ ಎನ್ನುವುದನ್ನು ಇಬ್ಬರು ಮಕ್ಕಳ ಮೂಲಕ ಚಿತ್ರದಲ್ಲಿ ಹೇಳುವ ಪ್ರಯತ್ನವನ್ನು ಮಾಡಿದ್ದೇನೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯ ಹಂತ ತಲುಪಿವೆ ” ಎಂದು ಹೇಳಿದರು.

ಈ ಚಿತ್ರಕ್ಕೆ ದೇವದಾಸ್ ಸಂಗೀತ ಸಂಯೋಜನೆ, ಪಿ ಕೆ ಎಚ್ ದಾಸ್ ಛಾಯಾಗ್ರಹಣ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ರಘು, ಗೌರಿ ಶ್ರೀ, ಭಾಗ್ಯಶ್ರೀ, ನಟರಾಜ್, ರತ್ನಮಾಲ, ಪ್ರಿಯಾ ಸೋಮಸುಂದರ್ ಮುಂತಾದವರು ನಟಿಸಿದ್ದಾರೆ.
_______

Be the first to comment

Leave a Reply

Your email address will not be published. Required fields are marked *

Translate »
error: Content is protected !!