ಭರ್ಜರಿ ಪ್ರತಿಕ್ರಿಯೆ ಪಡೆದ ಲವ್ ಯೂ ರಚ್ಚು ಸಾಂಗ್

ಅಜಯ್ ರಾವ್ ನಟನೆಯ ಬಹುನಿರೀಕ್ಷಿತ ‘ಲವ್ ಯೂ ರಚ್ಚು’ ಸಿನಿಮಾದ ವಿಡಿಯೋ ಸಾಂಗ್ ಇಂದು ಬಿಡುಗಡೆ ಆಗಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ. ‘ಮುದ್ದು ನೀನು’ ಎಂಬ ಈ ಹಾಡಿಗೆ ಟಾಲಿವುಡ್ ನ ಖ್ಯಾತ ಗಾಯಕ ಸಿದ್ ಶ್ರೀರಾಮ್ ಧ್ವನಿ ನೀಡಿದ್ದು, ಬಿಡುಗಡೆ ಆದ ಒಂದು ಗಂಟೆಯಲ್ಲಿ ಈ ಹಾಡು 51 ಸಾವಿರದಷ್ಟು ಭರ್ಜರಿ ವೀಕ್ಷಣೆ ಪಡೆದಿದೆ.

ಶಂಕರ್ ನಿರ್ದೇಶನದ ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಲವ್ ಯೂ ರಚ್ಚು ಚಿತ್ರದ ಶೂಟಿಂಗ್ ವೇಳೆ ಫೈಟರ್ ಸಾವನ್ನಪ್ಪುವ ಮೂಲಕ ವಿವಾದ ಉಂಟಾಗಿತ್ತು. ಬಿಡದಿ ಬಳಿಯ ಜೋಗನಪಾಳ್ಯ ಗ್ರಾಮದಲ್ಲಿ ‘ಲವ್ ಯೂ ರಚ್ಚು’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿ ಫೈಟರ್ ವಿವೇಕ್ ಮೃತಪಟ್ಟಿದ್ದರು. ಈ ವೇಳೆ ಮತ್ತೊಬ್ಬ ಸಾಹಸ ಕಲಾವಿದ ರಂಜಿತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಎಫ್‌ಐಆರ್ ಹಾಕಲಾಗಿತ್ತು.

ಚಿತ್ರದ ನಿರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹಾದೇವ್, ಸಾಹಸ ನಿರ್ದೇಶಕ ವಿನೋದ್ ನ್ಯಾಯಾಂಗ ಬಂಧನದಲ್ಲಿದ್ದು ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಪ್ರೊಡಕ್ಷನ್ ಮ್ಯಾನೇಜರ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ನಾಪತ್ತೆಯಾಗಿ ನಿರೀಕ್ಷಣಾ ಜಾಮೀನು ಪಡೆದು ಬಂಧನದಿಂದ ತಪ್ಪಿಸಿಕೊಂಡಿದ್ದರು.

ಈ ಎಲ್ಲ ವಿವಾದಗಳನ್ನು ದಾಟಿ ಬಂದಿರುವ ಚಿತ್ರ ತೆರೆಯ ಕಡೆಗೆ ಪ್ರೇಕ್ಷಕರನ್ನು ಸೆಳೆಯಲು ಸಿದ್ಧತೆ ನಡೆಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!