ಮೆಚ್ಚುಗೆಗೆ ಪಾತ್ರವಾದ “ಪ್ರೇಮಂ ಪೂಜ್ಯಂ” ಟ್ರೈಲರ್

ಬಹು ನಿರೀಕ್ಷಿತ “ಪ್ರೇಮಂ ಪೂಜ್ಯಂ” ಚಿತ್ರದ ಟೀಸರ್ ಬಿಡುಗಡೆ ಆಗಿದ್ದು ಸಿನಿಮಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಲವ್ಲಿ ಸ್ಟಾರ್ ಪ್ರೇಮ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಸ್ನೇಹ, ಪರಿಶುದ್ಧ ಪ್ರೇಮದ ಸುತ್ತ ಹೆಣೆದುಕೊಂಡಿದೆ.
ನಾಯಕ ಶೇ.100 ಪರಿಶುದ್ಧ ಪ್ರೇಮ ಬಯಸಿದರೆ, ನಾಯಕಿ ಶೇ.1ರಷ್ಟಾದರೂ ಪ್ರೀತಿಯನ್ನು ನಾಯಕನಿಂದ ಬಯಸುವ ಕಥೆ ಆಸಕ್ತಿ ಕೆರಳಿಸಿದೆ. ಚಿತ್ರದ ಮೇಕಿಂಗ್, ಕಥೆ, ಸಂಕಲನ, ಛಾಯಾಗ್ರಹಣದ ಬಗ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್  24 ಗಂಟೆ ಒಳಗಡೆ 1.29 ಲಕ್ಷ ವೀಕ್ಷಣೆ ಪಡೆಯುವ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸಿನಿಮಾ ಅಕ್ಟೋಬರ್ 29ರಂದು ಬೆಳ್ಳಿತೆರೆಗೆ ಬರಲಿದೆ. ಟೀಸರ್ ನಲ್ಲಿ ನವೀನ್ ಕುಮಾರ್ ಅವರ ಛಾಯಾಗ್ರಹಣ, ಹರೀಶ್ ಕೊಮ್ಮೆ ಅವರ ಸಂಕಲನದ ಕೆಲಸ ಎದ್ದು ಕಾಣುತ್ತಿದೆ.

12 ಹಾಡು ಇರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ಸಂಗೀತವನ್ನೂ ಡಾ. ಬಿ. ಎಸ್. ರಾಘವೇಂದ್ರ ನೀಡಿದ್ದಾರೆ. ಪ್ರೇಮ್ ಜೊತೆಗೆ ಬೃಂದಾ ಆಚಾರ್ಯ, ಐಂದ್ರಿತಾ ರೇ, ಸಾಧು ಕೋಕಿಲ, ಮಾಸ್ಟರ್‌ ಆನಂದ್‌, ಅನು ಪ್ರಭಾಕರ್‌, ಮಾಳವಿಕಾ ಅವಿನಾಶ್‌, ನಾಗಾಭರಣ ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ರಕ್ಷಿತ್ ಕೆಡಂಬಾಡಿ, ಡಾ.ರಾಜ್ ಕುಮಾರ್ ಜಾನಕಿ ರಾಮನ್, ಡಾ. ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ಅವರು ಬಂಡವಾಳ ಹಾಕಿದ್ದಾರೆ. ಲವ್ ರೋಮ್ಯಾಂಟಿಕ್ ಆಗಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಪ್ರೇಕ್ಷಕರು ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!