ರಮೇಶ್ ಅರವಿಂದ್ ನಟಿಸಿ ನಿರ್ದೇಶಿಸಿರುವ 100 ಚಿತ್ರದ ಟ್ರೈಲರ್ 2.3 ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ಚಿತ್ರಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ರಚಿತಾ ರಾಮ್ ಹಾಗೂ ಪೂರ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ 100 ಚಿತ್ರ ಸೈಬರ್ ಕ್ರೈಮ್, ಸಾಮಾಜಿಕ ಜಾಲತಾಣಗಳ ಅಪರಾಧಗಳನ್ನು ಇಟ್ಟುಕೊಂಡು ತಯಾರಾಗಿದೆ. ಈ ಸಿನಿಮಾ ನವೆಂಬರ್ 19 ರಂದು ತೆರೆಗೆ ಬರಲಿದೆ.
ಚಿತ್ರದ ಟ್ರೈಲರ್ ನಲ್ಲಿ ಕೊಲೆ, ಸೈಬರ್ ಅಪರಾಧದ ಅನಾವರಣ ಕಂಡು ಬಂದಿದೆ. ಹೀರೋ ಇಲ್ಲದ, ಇಬ್ಬರು ವಿಲನ್ ಇರುವ ಕತೆ ಇದು ಎಂದು ಹೇಳುವ ಟ್ರೈಲರ್ ನಲ್ಲಿ ರಮೇಶ್ ಪಾತ್ರ ಇಂಟರ್ ನೆಟ್ ಲೋಕದ ಬಗ್ಗೆ ಗೊತ್ತಿಲ್ಲದೆ ಸೈಬರ್ ಲೋಕದ ಪಾಪಿಗಳ ಕೈಯಿಂದ ನರಳುವ ಸನ್ನಿವೇಶ ಹೊಂದಿದೆ.
ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಈ ಸಿನಿಮಾ ಕೌಟುಂಬಿಕ ಕಥೆಯನ್ನು ಹೊಂದಿದೆ ಎಂದು ರಮೇಶ್ ಹೇಳಿದ್ದಾರೆ. ರಮೇಶ್ ರೆಡ್ಡಿ ಅವರು ಸೂರಜ್ ಪ್ರೊಡಕ್ಷನ್ಸ್ ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ರಮೇಶ್ ಅರವಿಂದ್ ಚಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ರಚಿತಾ ರಾಮ್ ಅವರು ರಮೇಶ್ ಅವರ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಇವರಿಬ್ಬರೂ ಪುಷ್ಪಕ ವಿಮಾನದಲ್ಲಿ ಜೊತೆಯಾಗಿ ನಟಿಸಿದ್ದರು.
ಇದಲ್ಲದೇ ಚಿತ್ರದಲ್ಲಿ ಪೂರ್ಣಾ, ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ, ಮಾಲತಿ ಸುಧೀರ್, ಬೇಬಿ ಸ್ಮಯ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜನೆ, ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಚಿತ್ರಕ್ಕೆ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ.
ಕಮಲ್ ಹಾಸನ್ ನಟನೆಯ ‘ರಾಮ ಶಾಮ ಭಾಮಾ’ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ರಮೇಶ್ ಅವರು ಸುಂದರಾಂಗ ಜಾಣ (2016) ಚಿತ್ರವನ್ನು ಕೊನೆಯದಾಗಿ ನಿರ್ದೇಶನ ಮಾಡಿದ್ದರು. ಈಗ 100 ಚಿತ್ರದ ಮೂಲಕ ನಿರ್ದೇಶಕರಾಗಿ ತೆರೆಯ ಮೇಲೆ ಮತ್ತೆ ಬಂದಿದ್ದಾರೆ. ಟ್ರೈಲರ್ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿರುವ ರಮೇಶ್ ಅವರು ತಮ್ಮ ನಿರ್ದೇಶನದ ಮೂಲಕ ಪ್ರೇಕ್ಷಕರನ್ನು ಯಾವ ರೀತಿ ಹಿಡಿದಿಡಲಿದ್ದಾರೆ ಎನ್ನುವುದಕ್ಕೆ ಚಿತ್ರ ಬಿಡುಗಡೆವರೆಗೆ ಕಾಯಬೇಕಿದೆ.
Be the first to comment