ಇತ್ತೀಚಿಗೆ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವ ಬಹಳ ಅದ್ದೂರಿಯಾಗಿ ನೆರವೇರಿತು. ಬಹುಭಾಷಾ ಹಿನ್ನಲೆ ಗಾಯಕಿ ಪ್ರಿಯದರ್ಶಿನಿಯವರಿಗೆ ಚಲನಚಿತ್ರ ಸಂಗೀತದದ ವಿಷಯದಲ್ಲಿ ಪಿಹೆಚ್. ಡಿ ಡಾಕ್ಟರೇಟ್ ಪದವಿಯನ್ನು ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹಲ್ಲೋಟ್, ಉನ್ನತ ಶಿಕ್ಷಣ ಸಚಿವರಾದ ಡಾ. ಸಿ. ಎನ್ . ಆಶ್ವತ್ಥ್ ನಾರಾಯಣ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಜಿ. ಹೇಮಂತ ಕುಮಾರ್ ಪ್ರದಾನಮಾಡಿದರು.
ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಅನೇಕ ಹೆಸರಾಂತ ಸಂಗೀತ ನಿರ್ದೇಶಕರಿಗೆ 130 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ ಕೆಲಸ ಮಾಡಿರುವ ಪ್ರಿಯದರ್ಶಿನಿಯವರು ಹಲವಾರು ಭಕ್ತಿ ಗೀತೆಗಳು, ಪ್ರೈವೇಟ್ ಆಲ್ಬಮ್ಗಳಿಗೂ ಸಹ ತಮ್ಮ ಧ್ವನಿಗೂಡಿಸಿದ್ದಾರೆ. ಪಿಹೆಚ್. ಡಿ ಡಾಕ್ಟರೇಟ್ ಪದವಿ ಪಡೆದ ನಂತರ ಪತ್ರಿಕಾ ಸಂದರ್ಶನಕ್ಕೆ ಮಾತನಾಡುತ್ತಾ ಹಲವಾರು ವಿಷಯ ಹಂಚಿಕೊಂಡರು
ನಿಮ್ಮ ಸಿನಿಮಾ ಪಯಣ ಹಾಗೂ ಗಾಯಕಿಯಾಗಿ ಮೊದಲಚಿತ್ರ?
ಸಿಂಗಾಪುರ್ ನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಸಂದರ್ಭದಲ್ಲಿ ಭಾರದ್ವಾಜ್ ಸಂಗೀತ ನಿರ್ದೇಶನದ “ಕಾದಲ್ ಡಾಟ್ ಕಾಮ್” ಎಂಬ ತಮಿಳು ಚಲನ ಚಿತ್ರದಲ್ಲಿ ಗಾಯಕ ಹರಿಹರನ್ ಜೊತೆ ಯುಗಳಗೀತೆ ಹಾಡುವ ಮೂಲಕ ನಾನು ಚಲನ ಚಿತ್ರರಂಗವನ್ನು ಪ್ರವೇಶಿಸಿದೆ. ನಂತರ ಹಲವಾರು ಸಂಗೀತ ದಿಗ್ಗಜರೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯಿತು. ಚಲುವಿನ ಚಿತ್ತಾರ, ಜ್ಯೂಲಿ , ನನ್ನೆದೆಯ ಹಾಡು, ಕುಸ್ತಿ , ನಂದಿ, ಸಿಂಹಬಲುಡು, ಮಾಣಿಕ್ಯಮ್ 420, ಗಿರಿ, ಮುತ್ತಿನ ಮಳೆಯಲಿ, ನಿರುದ್ಯೋಗಿ, ಪ್ರೀತಿಯಿಂದ ರಮೇಶ್, ಶ್ರೀ ನಾಗಶಕ್ತಿ , ನಾನ್ ದಾನ್ ಬಾಲ, ಜಯಹೇ, ಸೀನಾ, ನೇರ್ಮುಗಂ, ಉಪೇಂದ್ರ ಅಭಿನಯದ “ನ್ಯೂಸ್” ಚಿತ್ರ , ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ನಟಿಸಿರುವ “ಗರಂ ಮಸಾಲ” ಯಶ್ ಅಭಿನಯದ “ರಾಕಿ” ಚಿತ್ರದಲ್ಲಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಜೊತೆ ಯುಗಳಗೀತೆ ಮುಂತಾದ ಚಿತ್ರಗಳಲ್ಲಿ ಹಾಡಿದ್ದೇನೆ, ಕನ್ನಡದಲ್ಲಿ ನನ್ನ ಮೊದಲ ಚಿತ್ರ ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನದ “ಅಜ್ಜು”.
ಸಂಗೀತದಲ್ಲಿ ನಿಮ್ಮ ಕಲಿಕೆ ?
ನಾಲ್ಕನೇ ವಯಸ್ಸಿಗೆ ನಾನು ಗುರು ಶ್ರೀಮತಿ ಶಾರದಾ ಸ್ವಾಮಿನಾಥನ್ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಪ್ರಾರಂಭ ಮಾಡಿದೆ, 9ನೆೇ ವಯಸ್ಸಿಗೆ ನನ್ನ ಮೊದಲ ಸಂಗೀತ ಕಛೇರಿ ನೀಡಿದೆ, ನಂತರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಗಝಲ್ ಪಂಡಿತ್ ಶ್ರೀ ಚರಣ್ ಬಳಿ ಕಲಿತೆ, ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದೆ, ಪಾಶ್ಚಾತ್ಯ ಸಂಗೀತವನ್ನು – ಲಂಡನ್ ನ ದಿ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್ ನಲ್ಲಿ ಕಲಿತು ಈಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಿನಿಮಾ ಸಂಗೀತದಲ್ಲಿ ಪಿಹೆಚ್. ಡಿ ಪದವಿ ಮುಗಿಸಿದ್ದೇನೆ .
ಸಂಗೀತ ಸಂಶೋಧನೆ ಮಾಡಬೇಕು ಅನಿಸಿದ್ದು ಏಕೆ – ಅದರ ಉಪಯೋಗ?
ಹಿನ್ನಲೆ ಗಾಯಕಿಯಾದ ನನಗೆ ಭಾರತೀಯ ಚಲನಚಿತ್ರ ಸಂಗೀತವು ಬಹು ಆಯಾಮವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ”. ಈವರಗೆ ನಾ ಕಂಡಂತೆ ಸಿನಿಮಾ ಬಗ್ಗೆ ಹಲವಾರು ಗ್ರಂಥಗಳು ಪುಸ್ತಕಗಳು ಲಭ್ಯವಿದೆ ಆದರೆ ಸಿನಿಮಾ ಸಂಗೀತದ ಬಗ್ಗೆ ಬೆರಳೆಣಿಕೆಯೆಷ್ಟು ಮಾತ್ರ ಪುಸ್ತಕಗಳು ಮಾಹಿತಿಗಳು ಸಿಗುತ್ತವೆ. ಆದುದರಿಂದ ನಾನು ಚಲನಚಿತ್ರ ರಂಗಕ್ಕೆ ಚಲನಚಿತ್ರ ಸಂಗೀತದ ಬಗ್ಗೆ ಒಂದು ಮೂಲ ಗ್ರಂಥವನ್ನು ಕೊಡುಗೆಯಾಗಿ ನೀಡುವ ಮಹದಾಸೆಯಿಂದ ಈ ಸಂಶೋಧನ ವಿಷಯವನ್ನು ಆಯ್ಕೆಮಾಡಿದೆ. ಇದು ಖಂಡಿತವಾಗಿಯೂ ಭವಿಷ್ಯದ ಪೀಳಿಗೆಗೆ, ಸಂಗೀತಗಾರರಿಗೆ, ಗಾಯಕರಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ ಮತ್ತು ಅನೇಕರಿಗೆ ಜ್ಞಾನದ ಮೂಲವಾಗಿದೆ.
ನಿಮ್ಮ ಸಂಶೋಧನೆ ವಿಷಯ ಹಾಗೂ ಅದನ್ನು ಪೂರ್ಣ ಗೊಳಿಸಿದ ಬಗೆ ?
ನಾನು ಡಾ. ಸಿ. ಎ. ಶ್ರೀಧರ ಅವರ ಮಾರ್ಗದರ್ಶನದಲ್ಲಿ ನನ್ನ ಸಂಶೋಧನಾ ಅಧ್ಯಯನವನ್ನು ನಡೆಸಿದ್ದು “ಮ್ಯೂಸಿಕ್ ಇನ್ ಕನ್ನಡ ಅಂಡ್ ತಮಿಳ್ ಸಿನಿಮ – ಅ ಸ್ಟಡಿ” ಎಂಬ ವಿಷಯದಲ್ಲಿ ನಾನು ಸಂಶೋಧನೆ ಮಾಡಿದ್ದೇನೆ , ನನ್ನ ಮಹಾಪ್ರಭಂದವು (1917-2020) ಸರಿಸುಮಾರು 100 ವರ್ಷಗಳ ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿನ ಸಂಗೀತಕ್ಕೆ ಸಂಬಂಧಪಟ್ಟಿದ್ದು , ಚಿತ್ರಗೀತೆಯ ಹುಟ್ಟು, ಮೂಕಿ ಹಾಗೂ ಟಾಕಿ ಚಿತ್ರಗಳಲ್ಲಿನ ಸಂಗೀತ, ಹಿನ್ನಲೆ ಗಾಯನ, ಹಿನ್ನಲೆ ಸಂಗೀತ, ಆಯ್ದ ಗೀತೆಗಳ ವಿವಿಧ ದೃಷ್ಟಿಕೋನದಲ್ಲಿ ವಿಶ್ಲೇಷಣೆ, ಚಿತ್ರ ಸಂಗೀತದಲ್ಲಿನ ಶಾಸ್ತ್ರೀಯತೆ ಹಾಗೂ ಜಟಿಲತೆಗಳು, ರೆಕಾರ್ಡಿಂಗ್ ಮತ್ತು ರೆಕಾರ್ಡಿಂಗ್ ತಂತ್ರಜ್ಞಾನ ಹಾಗೂ ಅನೇಕ ವಿಚಾರಗಳನ್ನೊಳಗೊಂಡಿದೆ.
ನಾನು ಸಂಶೋಧನಾ ಅಧ್ಯಯನಕ್ಕಾಗಿ ಅನೇಕ ಸಂಗೀತ ದಿಗ್ಗಜರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಂದರ್ಶನ ಮಾಡಿದ್ದೇನೆ. ಎ.ಆರ್. ರೆಹಮಾನ್, ಎಸ್. ಜಾನಕಿ, ಇಳಯರಾಜ, ಎಂ. ಬಾಲಮುರಳಿಕೃಷ್ಣ, ವಾಣಿ ಜಯರಾಮ್, ರಾಮಕುಮಾರ್ ಗಣೇಶನ್, ಧೀನ, ರಾಜನ್ (ರಾಜನ್-ನಾಗೇಂದ್ರ), ಪಿ. ಸುಶೀಲ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರ, ಆರ್. ರತ್ನ, ಬಿ. ಕೆ. ಸುಮಿತ್ರ, ವಿ. ಮನೋಹರ್, ಭಾರದ್ವಾಜ್ ಇನ್ನಿತರರು ತಮ್ಮ ಅಮೂಲ್ಯವಾದ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡರು. ಸುಮಾರು 150 ಕ್ಕೂ ಹೆಚ್ಚು ವೈಯಕ್ತಿಕ ಸಂದರ್ಶನಗಳ ಒಂದು ದೊಡ್ಡ ಪಟ್ಟಿಯೇ ಇದೆ. ಇದಲ್ಲದೆ ನಾನು ನನ್ನ ಹಲವಾರು ಸಂಗೀತ ಕಾರ್ಯಕ್ರಮಗಳು, ಶೋ ಗಳು, ಹಾಡುಗಳ ರೆಕಾರ್ಡಿಂಗ್ ನ ಬಿಡುವು ಸಮಯವನ್ನು ನನ್ನ ಸಂಶೋಧನೆಗೂ ಸಹ ಬಳಸಿಕೊಳ್ಳುತ್ತಿದ್ದೆ. ಅಲ್ಲಿಗೆ ಬರುತ್ತಿದ್ದ ಸಂಗೀತ ನಿರ್ದೇಶಕರು, ಸಹ-ಗಾಯಕರು, ಸಂಗೀತಗಾರರು, ಸಾಹಿತಿಗಳು, ಸೌಂಡ್ ಇಂಜಿನಿಯರ್ಗಳು, ತಂತ್ರಜ್ಞರೊಂದಿಗೆ ನನ್ನ ಅಧ್ಯಯನಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುತ್ತಾ ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೆ.
ಡಾಕ್ಟರೇಟ್ ನ ನಂತರ ಮುಂದಿನ ಯೋಜನೆಗಳು ಏನು?
ಹಿನ್ನಲೆ ಗಾಯನ ಮುಂದುವರಿಸುವ ಜೊತೆಜೊತೆಗೆ ನನ್ನ ಈ ಮಹಾಪ್ರಬಂಧವನ್ನು ಪುಸ್ತಕವಾಗಿ ಪ್ರಕಟಿಸುವ ಉದ್ದೇಶ ಹೊಂದಿದ್ದೇನೆ. ನಾನು ಇದನ್ನು ಇಂಗ್ಲಿಷ್ನಿಂದ ಇತರ ಭಾಷೆಗಳಿಗೆ ಅನುವಾದಿಸಲು ಸಹ ಯೋಚಿಸಿದ್ದೇನೆ. ಇದು ಚಲನಚಿತ್ರ ಸಂಗೀತದಲ್ಲಿ 1080 ಪುಟಗಳ ಸುದೀರ್ಘವಾದ ಪ್ರಬಂಧವಾದ್ದರಿಂದ ಇದನ್ನು “ಗಿನ್ನೆಸ್ ವಿಶ್ವ ದಾಖಲೆಗಳು” ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ಕಳುಹಿಸಲು ಯೋಜಿಸುತ್ತಿದ್ದೇನೆ.”
ನಿಮ್ಮ ಮುಂಬರುವ ಚಲನಚಿತ್ರಗಳು ಮತ್ತು ಬಿಡುಗಡೆಗಳು?
ಆಂಡ್ರಿಯಾ ನಟಿಸಿರುವ ತಮಿಳು ಚಲನಚಿತ್ರ “ಮಾಳಿಗೈ”, ರಾಯ್ ಲಕ್ಷ್ಮಿ ನಟಿಸಿರುವ ಕನ್ನಡ ಚಲನಚಿತ್ರ “ಝಾನ್ಸಿ ಐಪಿಎಸ್”, ಕಧಿರ್, ತಮಸ್, ಧರ್ಮ ಕೀರ್ತಿರಾಜ್ ಅಭಿನಯದ “ಖಡಕ್ ” ಚಲನಚಿತ್ರ ಹಾಗೂ ಹಲವಾರು ಪ್ರೈವೇಟ್ ಆಲ್ಬಂಗಳು ಬಿಡುಗಡೆಗೆ ಸಿದ್ಧವಾಗಿದೆ.
Be the first to comment