ರಮೇಶ್ ಅರವಿಂದ್ ನಟನೆ, ನಿರ್ದೇಶನದ 100 ಚಿತ್ರವನ್ನು ತೆಲುಗಿಗೂ ಡಬ್ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಮೇಶ್ ಅರವಿಂದ್ ಅವರು, “ಮನೆಯೊಳಗೆ ಬರುವ ಅಪರಿಚಿತರು ಮನೆಯ ಯಜಮಾನನಿಗೇ ಗೊತ್ತಾಗದ ಹಾಗೆ, ಆತನ ಪ್ರತಿಪಾದಿಸುವ ಮೌಲ್ಯಗಳನ್ನು ಹೇಗೆ ಬ್ರೇಕ್ ಮಾಡ್ತಾರೆ, ಆನ್‌ಲೈನ್ ಜಗತ್ತು ಫ್ಯಾಮಿಲಿಯೊಂದಕ್ಕೆ ಹೇಗೆಲ್ಲ ಮೋಸ ಮಾಡಬಹುದು ಅನ್ನೋದನ್ನು ಸಿನಿಮಾದಲ್ಲಿ ಹೇಳಿದ್ದೇವೆ. ಚಿತ್ರವನ್ನು ತೆಲುಗಿಗೂ ಡಬ್ ಮಾಡಲಾಗಿದೆ” ಎಂದಿದ್ದಾರೆ.
ನವೆಂಬರ್ 19ರಂದು ತೆರೆ ಕಾಣಲಿರುವ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಫೈಟ್‌ಗಳಿವೆ. ಎರಡು ಫೈಟ್ ದೃಶ್ಯಗಳನ್ನು ಜಾಲಿ ಬಾಸ್ಟಿನ್, ಇನ್ನೆರೆಡು ಫೈಟ್ ದೃಶ್ಯಗಳನ್ನು ರವಿವರ್ಮ ಮಾಡಿದ್ದಾರೆ. “ಸಿನಿಮಾದಲ್ಲಿರುವ ಚೇಸಿಂಗ್ ದೃಶ್ಯಕ್ಕೆ 100ರಿಂದ 150 ಕಾರುಗಳನ್ನು ಬಳಸಲಾಗಿದೆ. ಇಡೀ ರಸ್ತೆ ಬಾಡಿಗೆಗೆ ತೆಗೆದುಕೊಂಡು ದೃಶ್ಯವನ್ನು ಚಿತ್ರೀಕರಣ ಮಾಡಲಾಗಿದೆ. ಈ ಸನ್ನಿವೇಶಗಳನ್ನು ಚಿತ್ರೀಕರಿಸಿದ್ದೇ ಒಂದು ದೊಡ್ಡ ಥ್ರಿಲ್ಲಿಂಗ್ ಅನುಭವ ಆಗಿದೆ. ರವಿವರ್ಮಾ ಅವರು ಚಿತ್ರಮಂದಿರದ ಒಳಗೆ ಒಂದು ಫೈಟ್ ಸನ್ನಿವೇಶ ಶೂಟ್ ಮಾಡಿದ್ದಾರೆ. ನಿರ್ಮಾಪಕ ರಮೇಶ್ ರೆಡ್ಡಿ ಯಾವುದಕ್ಕೂ ಕಡಿಮೆ ಮಾಡದೆ ದೃಶ್ಯಗಳಿಗಾಗಿ ಖರ್ಚು ಮಾಡಿದ್ದಾರೆ” ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
ಸಿನಿಮಾಟೋಗ್ರಾಫಿ ಸತ್ಯ, ಕಲಾ ನಿರ್ದೇಶನ ಮೋಹನ್ ಪಂಡಿತ್, ಸಂಕಲನ ಶ್ರೀನಿವಾಸ್ ಅವರದ್ದು ಆಗಿದೆ. ಚಿತ್ರದಲ್ಲಿ ರಮೇಶ್ ಜೊತೆ ರಚಿತಾ ರಾಮ್, ಪೂರ್ಣ, ಬೇಬಿ ಸ್ಮಯ, ಶೋಭರಾಜ್ ಮತ್ತಿತರರು ನಟಿಸಿದ್ದಾರೆ.
ಚಿತ್ರ 120ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.
ರಮೇಶ್ ಅರವಿಂದ್ ಅವರು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ರಚಿತಾ ರಾಮ್, ರಮೇಶ್ ಅವರ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಇವರಿಬ್ಬರೂ ಪುಷ್ಪಕ ವಿಮಾನದಲ್ಲಿ ಜೊತೆಗೆ ನಟಿಸಿದ್ದರು. ಇದಲ್ಲದೇ ಚಿತ್ರದಲ್ಲಿ ಪೂರ್ಣಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಮ ಶಾಮ ಭಾಮಾ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ರಮೇಶ್ ಅವರು ಸುಂದರಾಂಗ ಜಾಣ (2016) ಚಿತ್ರವನ್ನು ಕೊನೆಯದಾಗಿ ನಿರ್ದೇಶನ ಮಾಡಿದ್ದರು. ಈಗ 100 ಚಿತ್ರದ ಮೂಲಕ ನಿರ್ದೇಶಕರಾಗಿ ತೆರೆಯ ಮೇಲೆ ಬಂದಿದ್ದಾರೆ.
____
Be the first to comment