ಚಿತ್ರ: ಸಮರ್ಥ
ನಿರ್ದೇಶಕ :ಎಸ್. ಜಿ.ಅರ್. ಪಾವಗಡ
ನಿರ್ಮಾಣ : ಸರ್ವ ಕ್ರಿಯೇಷನ್ಸ್
ಸಂಗೀತ : ಅಭಿಮನ್ ರಾಯ್
ಛಾಯಾಗ್ರಹಣ : ಎ.ಸಿ. ಮಹೇಂದ್ರನ್
ತಾರಾಗಣ : ರವಿ ಶಿರೂರ್, ರಚನಾ ದಶರಥ್, ಸಂಗೀತಾ, ಚೆಲುವ, ನಯನ(ಕಾಮಿಡಿ ಕಿಲಾಡಿಗಳು) ಹಾಗೂ ಮುಂತಾದವರು…
ರೇಟಿಂಗ್ : ***
ಸರ್ವ ಕ್ರಿಯೇಷನ್ಸ್ ಮೂಲಕ ನಿರ್ಮಾಣ ಮಾಡಿರುವ ಚಿತ್ರವನ್ನು ಪಾವಗಡ ಮೂಲದ ಕೆ.ಎಸ್.ಗೋವಿಂದರಾಜು ನಿರ್ದೇಶನ ಮಾಡಿದ್ದು , ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರನ್ನ ಸೆಳೆಯೋದಕ್ಕೆ ಮುಂದಾಗಿದ್ದಾರೆ. ಕಾಲೇಜ್ ವಿದ್ಯಾರ್ಥಿಗಳು , ಉಪನ್ಯಾಸಕ, ಪೋಲೀಸ್ , ನಿರ್ದೇಶಕರ ಗುಂಪು ಸೇರಿದಂತೆ ನಾನಾ ಮಜಲುಗಳ ನಡುವೆ ತಾಯಿ ಮಗನ ಬಾಂಧವ್ಯದ ಕಥೆಯಿದೆ. ಇದರ ಜೊತೆಗೊಂದು ಪ್ರೇಮಕಥೆಯೂ ಸಾಗುತ್ತದೆ. ನಾಯಕ ಸಮರ್ಥ(ರವಿ ಶಿರೂರು) ಆರಂಭದಲ್ಲಿ ನಿರುದ್ಯೋಗಿಯಾದರೂ ನಂತರ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕನ ಕೆಲಸ ಸಂಪಾದಿಸುತ್ತಾರೆ. ನಾಯಕಿ ಪರಿಸರ(ರಚನಾ ದಶರಥ್) ಅದೇ ಕಾಲೇಜಿನಲ್ಲಿ ಓದುತ್ತಿರುವ ಸ್ಟೂಡೆಂಟ್. ಇನ್ನು ನಾಯಕನ ತಾಯಿ(ಸಂಗೀತಾ) ಮನೆಗೆಲಸ ಮಾಡಿಕೊಂಡು ಮಗನನ್ನು ವಿದ್ಯಾವಂತನನ್ನಾಗಿ ಮಾಡಿರುತ್ತಾಳೆ. ಹುಡುಗಾಟದಿಂದಲೇ ಆರಂಭವಾಗುವ ಕಥೆಯಲ್ಲಿ ನಿರ್ದೇಶಕನೊಬ್ಬ ಚಿತ್ರ ನಿರ್ಮಿಸುವ ಸಲುವಾಗಿ ನಾಯಕಿಯ ಒಪ್ಪಿಗೆ ಪಡೆಯಲು ಹರಸಾಹಸ ಪಡುವುದನ್ನು ಹಾಸ್ಯ ಮಿಶ್ರಿತವಾಗಿ ಚಿತ್ರದ ಓಟಕ್ಕೆ ಜೋಡಿಸಿಕೊಂಡಿದ್ದಾರೆ.
ಚಿತ್ರ ಆರಂಭದಲ್ಲಿ ಒಂದು ರೀತಿ ಸಾಗಿದರೆ , ಮಧ್ಯಂತರದಲ್ಲಿ ಮತ್ತೊಂದು ಟ್ವಿಸ್ಟ್ ಪಡೆದು ಕೊಳ್ಳುತ್ತದೆ. ನಂತರ ಚಿತ್ರದಲ್ಲಿ ಒಬ್ಬ ಕಿಡ್ನಾಪರ್ ಹುಟ್ಟಿಕೊಳ್ಳುತ್ತಾನೆ. ಆತ ಯಾರು ಎನ್ನುವುದು ಸಸ್ಪೆನ್ಸ್. ಈ ಕಿಡ್ನ್ಯಾಪ್ ರನ್ನ ಕಂಡುಹಿಡಿಯಲು ಒಬ್ಬ ಪೊಲೀಸ್ ಅಧಿಕಾರಿ ಬರುತ್ತಾರೆ. ನಾಯಕ ಪರರಿಗೆ ಉಪಕಾರ ಮಾಡಲು ಹೋಗಿ ಒಂದು ದೊಡ್ಡ ಅಪರಾಧವನ್ನು ಮಾಡುತ್ತಾನೆ. ಆತ ಮಾಡೋ ಆ ಅಪರಾಧವಾದರೂ ಏನು, ಯಾವ ಉದ್ದೇಶ ಇಟ್ಟುಕೊಂಡು ನಾಯಕ ಸಮರ್ಥ ನಾಗಲು ಹೊರಟಿದ್ದಾನೆ ಎಂಬುದನ್ನು ನೀವು ತೆರೆಯ ಮೇಲೆ ನೋಡಿದರೆ ಚೆನ್ನ.
ಕಥಾಹಂದರ ವಿಭಿನ್ನವಾಗಿದ್ದರೂ ನಾಯಕ , ನಾಯಕಿ ಸೇರಿದಂತೆ ಒಂದಷ್ಟು ಪಾತ್ರಗಳು ಮತ್ತಷ್ಟು ಪರಿಪಕ್ವವಾಗಿ ತರಬೇತಿ ಪಡೆದು ಅಭಿನಯಿಸಬೇಕಾಗಿತ್ತು ಅನಿಸುತ್ತೆ. ಅಭಿಮನ್ ರಾಯ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳು ಪ್ರೇಕ್ಷಕರನ್ನು ಗುನುಗುವಂತೆ ಮಾಡುತ್ತದೆ. ಅದೇ ರೀತಿ ಛಾಯಾಗ್ರಾಹಕ ಎ.ಸಿ.ಮಹೇಂದ್ರನ್ ಅವರ ಕ್ಯಾಮೆರಾ ಕೈಚಳಕ ಗಮನಾರ್ಹವಾಗಿದೆ. ಲವ್ ,ಆಕ್ಷನ್ ಹಾಗೂ ಸಸ್ಪೆನ್ಸ್ , ಪ್ರಿಯರಿಗೆ ಒಪ್ಪುವಂತ ಚಿತ್ರ ಸಮರ್ಥ ಎನ್ನಬಹುದು. ಒಟ್ನಲ್ಲಿ ಕುಟುಂಬ ಸಮೇತ ಕುಳಿತು ನೋಡಬಹುದಾದ ಒಂದು ಸಂದೇಶವಿರುವ ಈ ಚಿತ್ರ ಇದಾಗಿದೆ.
Pingback: Casino