ಚಿತ್ರ ವಿಮರ್ಶೆ :
ಚಿತ್ರ : ಎಂ ಎಂ ಸಿ ಎಚ್ ನಿರ್ದೇಶಕ : ಮುಸ್ಸಂಜೆ ಮಹೇಶ್
ನಿರ್ಮಾಪಕ: ಎಸ್.ಪುರುಷೋತ್ತಮ್,ಜಾನಕಿ ರಾಮ್, ಅರವಿಂದ್.
ಸಂಗೀತ : ಶ್ರೀಧರ್ ವಿ. ಸಂಭ್ರಮ್
ಛಾಯಾಗ್ರಹಣ : ನಾಗೇಶ್. ವಿ . ಆಚಾರ್ಯ
ತಾರಾಗಣ : ರಾಗಿಣಿ , ಮೇಘನಾರಾಜ್, ಪ್ರಥಮಾ ಪ್ರಸಾದ್, ಸಂಯುಕ್ತಾ ಹೊರನಾಡು, ದೀಪ್ತಿ ಹಾಗೂ ಮುಂತಾದವರು…
ರೇಟಿಂಗ್ : 3/5
ಇಂದು ತೆರೆಗೆ ಬಂದಿರುವ ಚಿತ್ರದ ಮೂಲಕ ಅದರ ಅಸಲಿ ಆಂತರ್ಯ ಬಯಲಾಗಿದೆ. ಮೇಘ, ಮಾಲಾ, ಛಾಯಾ ಮತ್ತು ಹರ್ಷಿಕಾ ಎಂಬ ನಾಲ್ವರು ಗೆಳತಿಯರು. ಕಾಲೇಜಿನಲ್ಲಿ ಒಟ್ಟಿಗೇ ಓದುವ ಈ ಸ್ನೇಹಿತೆಯರು ಹಾಸ್ಟೆಲ್ಲಿನಲ್ಲೂ ಒಂದೇ ರೂಮಿನಲ್ಲಿರುತ್ತಾರೆ. ಮಂಗಳೂರಿನ ಮೇಘ, ಮೈಸೂರಿನ ಮಾಲಾ, ಚಾಮರಾಜನಗರದ ಛಾಯಾ ಹಾಗೂ ಹಾಸನದ ಹರ್ಷಿಕಾ – ಈ ನಾಲ್ವರೂ ಬಿಟ್ಟೂಬಿಡದಂತೆ ಅಂಟಿಕೊಂಡೇ ತಿರುಗುವಷ್ಟು ಆಪ್ತರು. ಈ ನಡುವೆ ಮಾಲಾ ಪ್ರೇಮಪಾಶದಲ್ಲಿ ಮೈಮರೆಯುವ ಮೂಲಕ ಸಾಮಾನ್ಯ ಹುಡುಗೀರ ಕಥೆ ಅಸಾಮಾನ್ಯ ತಿರುವೊಂದನ್ನು ತಲುಪಿಕೊಂಡು ಬಿಡುತ್ತೆ!
ಈ ಮೂಲಕ ನಿದೇರ್ಶಕ ಮುಸ್ಸಂಜೆ ಮಹೇಶ್ ಅವರು ಹೊಸಾ ಬಗೆಯ ಕಥೆಯೊಂದರ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ. ಚಿತ್ರದುದ್ದಕ್ಕೂ ಹಲವಾರು ಏರುಪೇರುಗಳ ನಡುವೆಯೂ ಕುತೂಹಲವನ್ನು ಕಾಯ್ದಿಟ್ಟುಕೊಳ್ಳುವಲ್ಲಿಯೂ ಅವರು ಸಫಲರಾಗಿದ್ದಾರೆ.
ಬಹುಶಃ ಮಾಲಾಳ ಪ್ರೀತಿ ಮಾಮೂಲಿನಂತೆ ಶುಭಾಂತ್ಯವಾಗಿದ್ದರೆ, ಒಂದು ಮೋಸ ಕಣ್ಣೀರಿನ ಮೂಲಕವೇ ಬಸಿದು ಹೋಗಿದ್ದರೆ ಈ ಕಥೆಯೇ ಹುಟ್ಟುತ್ತಿರಲಿಲ್ಲ. ಸೀರಿಯಸ್ಸಾಗಿಯೇ ಲವ್ವಲ್ಲಿ ಬೀಳೋ ಮಾಲಾ ಎಲ್ಲವನ್ನೂ ಆತನಿಗೆ ಅರ್ಪಿಸುತ್ತಾಳೆ. ಅದು ಯಾವ ಪರಿ ಸ್ವೇಚ್ಛೆಯಾಗಿ ಬದಲಾಗುತ್ತದೆ ಎಂದರೆ, ಮಾಲಾ ಬಸುರಲ್ಲಿ ಜೀವವೊಂದು ಕುಡಿಯೊಡೆಯಲಾರಂಭಿಸುತ್ತದೆ. ಈ ವಿಚಾರ ತಿಳಿದ ಗೆಳತಿಯರೆಲ್ಲರೂ ಮುಂದೇನು ಮಾಡೋದೆಂದು ದಿಕ್ಕು ತೋಚದೆ ನಿಂತಿರುವಾಗಲೇ ಮತ್ತೊಂದು ಆಘಾತವೂ ಅವರಿಗೆದುರಾಗುತ್ತದೆ, ಮಾಲಾ ಬಸುರಾಗಲು ಕಾರಣವಾಗಿದ್ದ ಹುಡುಗ ಏಕಾಏಕಿ ಉಲ್ಟಾ ಹೊಡೆದು ದೂರವಾಗುತ್ತಾನೆ.
ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಹುಡುಗೀರು ಭಯಾನಕ ದಾರಿಯನ್ನೇ ಆರಿಸಿಕೊಳ್ಳುತ್ತಾರೆ. ಅದರ ಫಲವಾಗಿ ಆ ಹುಡುಗ ಊರ ತಿಪ್ಪೆಗುಂಡಿಯಲ್ಲಿ ಹೆಣವಾಗಿ ಸಿಕ್ಕೇಟಿಗೆ ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ. ಈ ಥರದ ಕೆಲಸ ಮಾಡಿ ಅವರವರ ಊರಿಗೆ ಹುಡುಗೀರೆಲ್ಲ ತೆರಳಿರುವಾಗಲೇ ಪೊಲೀಸ್ ಇನ್ವೆಸ್ಟಿಗೇಷನ್ನು, ಖಡಕ್ಕು ಅಧಿಕಾರಿಯ ಎಂಟ್ರಿ… ಮುಂದೇನಾಗುತ್ತದೆ ಎಂಬುದು ಚಿತ್ರ ಮಂದಿರದಲ್ಲಿ ಬಯಲಾದರೇನೇ ಚೆಂದ. ಯಾಕೆಂದರೆ ಇಡೀ ಚಿತ್ರ ನಿಜವಾದ ವೇಗ ಪಡೆದುಕೊಳ್ಳುವುದು, ತುದಿಗಾಲಲ್ಲಿ ನಿಲ್ಲಿಸೋದು ಆ ನಂತರವೇ.
ಸಂಯುಕ್ತಾ ಹೊರನಾಡು, ದೀಪ್ತಿ, ಮೇಘನಾ ರಾಜ್ ಮತ್ತು ಪ್ರಥಮಾ ಚೆಂದದ ನಟನೆ ನೀಡಿದ್ದಾರೆ. ಪೋಸ್ಟರುಗಳಲ್ಲಿನ ರಗಡ್ ಲುಕ್ಕಿಗೆ ಪೂರಕವಾಗಿಯೇ ರಾಗಿಣಿ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ. ಕ್ಯಾಮೆರಾ, ಹಿನ್ನೆಲೆ ಸಂಗೀತ ಸೇರಿದಂತೆ ಎಲ್ಲವೂ ಕಥೆಯ ಲಯಕ್ಕೆ ಸಾಥ್ ನೀಡಿವೆ. ನಿರ್ದೇಶಕ ಮುಸ್ಸಂಜೆ ಮಹೇಶ್ ಅವರು ಕೊಂಚ ಬಿಗಿ ಮಾಡಿದ್ದರೂ ಈ ಕ್ರೈಂ ಥ್ರಿಲ್ಲರ್ ಕಥಾನಕ ಮತ್ತಷ್ಟು ಆವೇಗದೊಂದಿಗೆ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಿತ್ತು. ಆದರೂ ಹುಡುಗೀರ ಸುತ್ತಲಿನ ಪ್ರೇಮ, ಕಾಮ, ದುಡುಕಿನ ಕಥನ ಕಾಡುವಂತೆ ಮೂಡಿ ಬಂದಿದೆ.
Be the first to comment