ಚಿತ್ರ ವಿಮರ್ಶೆ : ಮಾಸ್ ಆಗಿರುವ ಕ್ಲಾಸ್ ರೂಮ್ ಸ್ಟೋರಿ

ನಿರ್ಮಾಪಕ : ವಿಜಯ್ ಕಿರಗಂದೂರ
ನಿರ್ದೇಶಕ : ಸಂತೋಷ್‌ ಆನಂದ್‌ರಾಮ್  
ತಾರಾಗಣ :
ಪುನೀತ್ ರಾಜ್‌ಕುಮಾರ್, ಸಾಯೇಶಾ, ಪ್ರಕಾಶ್ ರೈ, ಧನಂಜಯ್, ಸಾಯಿಕುಮಾರ್, ಸುಧಾರಾಣಿ, ಅಚ್ಯುತ್‌ಕುಮಾರ್, ಸಾಧು ಕೋಕಿಲ
ಅವಧಿ:2 Hrs 41 Min
ಬಿ ಸಿನಿಮಾಸ್ ರೇಟಿಂಗ್ : 4/5

ರಾಜಕುಮಾರ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ರಾಜರತ್ನನನ್ನಾಗಿಸಿದ್ದ ನಿರ್ದೇಶಕ ಸಂತೋಷ್ ಆನಂದ ರಾಮ್ ಈಗ ಅವರನ್ನು ಯುವರತ್ನನನ್ನಾಗಿಸಿದ್ದಾರೆ. ಅಂದಹಾಗೆ ಅವರು ಈ ಚಿತ್ರದಲ್ಲೂ ಪುನೀತ್ ಅವರ ರಾಜನ ಇಮೇಜ್ ಅನ್ನು ಧಾರಾಳವಾಗಿ ಬಳಸಿಕೊಂಡಿದ್ದಾರೆ.

ಎಜ್ಯುಕೇಷನ್ ಸಿಸ್ಟಮ್ ಎಂಬ ಗಂಭೀರ ವಿಷಯವನ್ನಿಟ್ಟುಕೊಂಡು ಸಂತೋಷ್ ಇಲ್ಲಿ ಸಿನಿಮಾ ಮಾಡಿದ್ದಾರೆ. ಹಾಗಂತ ಚಿತ್ರದಲ್ಲಿ ಅವರು ಶಿಕ್ಷಣ ಮಾಡುವ ಮಾಸ್ಟರಂತೆ ಕಾಣುವುದಿಲ್ಲ. ಬದಲಾಗಿ ಮನರಂಜನೆಯ ದಾರಿಯಲ್ಲಿ ಶಿಕ್ಷಣದ ಪ್ರಾಮುಖ್ಯತೆ ಹೇಳುವ ಕೆಲಸ ಮಾಡಿದ್ದಾರೆ. ಹಾಗಾಗಿ ಇಲ್ಲಿ ಪುನೀತ್ ಅವರನ್ನು, ಚಿತ್ರದ ಕಥೆಯಲ್ಲಿ ಮಾತ್ರವಲ್ಲ, ಎಲ್ಲಾ ರೀತಿಯಲ್ಲೂ ಮಾಸ್ಟರ್ ಮತ್ತು ಸ್ಟೂಡೆಂಟ್ ಎರಡೂ ಮಾಡಲಾಗಿದೆ. ಅದರ ಜೊತೆಗೆ ಅವರಿಗೆ ತಕ್ಕನಾಗಿ ಪ್ರಕಾಶ್ ರೈ ಕೂಡಾ ಇದ್ದಾರೆ. ಹಾಗಾಗಿ ಎಲ್ಲವೂ ಸೇರಿ ಯುವರತ್ನ ಒಂದು ಅತ್ಯುತ್ತಮ ಸಿನಿಮಾ ಆಗಿದೆ ಎಂದರೆ ಇದು ಶಿಕ್ಷಣ ವ್ಯವಸ್ಥೆಯ ಬಗೆಗಿನ ಚಿತ್ರದ ಬಗ್ಗೆ ಪೇಮೆಂಟ್ ಕೋಟಾದಲ್ಲಿ ಬರೆದ ಒಳ್ಳೆಯ ವಿಮರ್ಶೆ ಎಂದುಕೊಳ್ಳಬೇಕಾಗಿಲ್ಲ.

ಕಾಲೇಜು ಕಥೆಗಳಲ್ಲಿ ಒಂದು ಮಟ್ಟಕ್ಕೆ ಲವಲವಿಕೆ ಇದ್ದೇ ಇರುತ್ತದೆ. ಆದರೆ ಆ ಲವಲವಿಕೆಯ ಪ್ಲಾಟ್ ಜೊತೆಗೆ ಕಲಿಕೆಯನ್ನೂ ಕಲಬೆರಕೆ ಮಾಡಿ, ಒಂದು ಉತ್ತಮ ಪ್ರಾಜೆಕ್ಟ್ ಮಾಡಿ, ಜನರಿಗೆ ಪ್ರಯೋಜನ ಆಗುವಂಥ ಪ್ರಾಡಕ್ಟ್ ಕೊಟ್ಟು, ಸಮಾಜದಲ್ಲಿರೋ ಕೊಳೆಯನ್ನು ತೊಳೆಯುವ ಕಸಬರಿಕೆಯನ್ನಾಗಿಯೂ ಮಾಡಬಹುದು ಎಂಬುದಕ್ಕೆ ಯುವರತ್ನ ಒಳ್ಳೆಯ ಉದಾಹರಣೆ.

ಸಂತೋಷ್ ಆನಂದರಾಮ್ ಅವರು ಅದ್ಭುತ ಟೆಕ್ನಿಶಿಯನ್ ಅಲ್ಲದಿದ್ದರೂ ಅವರ ಎಮೋಷನ್ಸ್ ಚೆನ್ನಾಗಿ ವರ್ಕ್ ಆಗುತ್ತದೆ ಎಂಬುದನ್ನು ತಮ್ಮ ಹಿಂದಿನ ಚಿತ್ರಗಳಲ್ಲಿ ಅವರು ಪ್ರೂವ್ ಮಾಡಿದ್ದಾರೆ. ಹಾಗಾಗಿ ತಮ್ಮ ಪ್ರೂವ್ಡ್ ಸ್ಟ್ರೆಂತ್ ಅನ್ನು ಅವರು ಈ ಚಿತ್ರದಲ್ಲೂ ಬಳಸಿಕೊಂಡಿದ್ದಾರೆ. ಕೇವಲ ಚಿತ್ರದ ಪಾತ್ರವನ್ನಷ್ಟೇ ಅಲ್ಲ, ನಾಯಕನ ಪಾತ್ರಧಾರಿಯ ಪುನೀತ್ ಅವರ ಇಮೇಜ್ ಅನ್ನೂ ಸಂತೋಷ್ ಚೆನ್ನಾಗಿ ಪೋಷಣೆ ಮಾಡಿದ್ದಾರೆ. ಪ್ರೇಕ್ಷಕರ ನಾಡಿ ಮಿಡಿತವನ್ನು, ಅದರಲ್ಲೂ ನಮ್ಮ ನಾಡಿನ ಜನರ ನಾಡಿ ಮಿಡಿತವನ್ನು ಅವರು ಅರಿತುಕೊಂಡಿರುವ ಕಾರಣಕ್ಕೆ

ಈ ಚಿತ್ರದ ಸಂಭಾಷಣೆಯಲ್ಲಿ ಬಸವನ ಗುಡಿಯೂ ಇದೆ, ಗಂಧದ ಗುಡಿಯೂ ಇದೆ. ಇಷ್ಟೇ ಅಲ್ಲದೆ ಪುನೀತ್ ಅವರ ಅಭಿಮಾನಿಗಳಿಗೆ ಹಬ್ಬ ಎನ್ನುವಂತೆ ಡೈಲಾಗ್ ಮತ್ತು ಮ್ಯಾನರಿಸಂಗಳಿಗೆ ಒತ್ತು ಕೊಡುವ ಮೂಲಕ ಚಿತ್ರವನ್ನು ಇನ್ನಷ್ಟು ರಸವತ್ತಾಗಿಸಲಾಗಿದೆ. ಜೊತೆಗೆ ದೇಶಮುಖರ ಪಾತ್ರದಲ್ಲಿಕುವ ಪ್ರಕಾಶ್ ರೈ ತಮ್ಮ ಅಭಿನಯದ ಹಲವು ಮುಖಗಳನ್ನು ತೋರಿಸಿದ್ದಾರೆ.

ಯುವರತ್ನ ಇನ್ನೊಂದು ಕಿಕ್ ಕೊಡುವ ವಿಷಯ ಅಂದ್ರೆ ಅದು ಧನಂಜಯ. ಎಷ್ಟೇ ದೊಡ್ಡ ಸ್ಟಾರುಗಳು ಜೊತೆಗಿದ್ದರೂ ತಮ್ಮತನವನ್ನು ಪ್ರೂವ್ ಮಾಡುವ ಅಪರೂಪದ ನಟರಾಗಿರುವ ಧನಂಜಯ ಇಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ನಾಯಕಿ ಸಾಯೇಷಾ ಯುವರತ್ನನಿಗೆ ಸಮರ್ಥ ಜೋಡಿಯಾಗಿ ನಿಲ್ಲುತ್ತಾರೆ.

ಇನ್ನು ಸಂತೋಷ್ ಮತ್ತು ಪುನೀತ್ ಕಾಂಬಿನೇಷನ್ ನ ಹಿಂದಿನ ಚಿತ್ರ ರಾಜಕುಮಾರ ಚಿತ್ರದಲ್ಲಿ ಅದರ ಹಾಡುಗಳು ಹೆಚ್ಚು ಸದ್ದು ಮಾಡಿದ್ದವು. ಆದರೆ ಅದನ್ನು ಯುವರತ್ನ ಚಿತ್ರದ ವಿಷಯದಲ್ಲೂ ಹೇಳುವುದು ಕಷ್ಟ. ಏಕೆಂದರೆ, ತಮನ್ ಸಂಗೀತದಲ್ಲಿ ಯುವರತ್ನನ್ ಪದಗಳು ಅಷ್ಟಾಗಿ ರುಚಿಸುವುದಿಲ್ಲ. ಆದರೆ ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣದಲ್ಲಿ ಎಜ್ಯುಕೇಶನ್ ಸಿಸ್ಟಮ್ ಬಗ್ಗೆ ಮಾತಾಡುವ ಕಾಲೇಜು ಸ್ಟೋರಿ ಕ್ಲಾಸ್ ರೂಮ್ ಗಷ್ಟೇ ಸೀಮಿತವಾಗದೆ ಕ್ಲಾಸ್ ಮತ್ತು ಮಾಸ್ ಎರಡೂ ಆಗಿದೆ.

@bcinemas

Be the first to comment

Leave a Reply

Your email address will not be published. Required fields are marked *

Translate »
error: Content is protected !!