ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ, ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಒಡೆತನದ ಕೆಆರ್‌ಜಿ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್ ಬ್ಯಾನರ್‌ನಡಿ ಎಕ್ಕ ಸಿನಿಮಾ ಅದ್ಧೂರಿಯಾಗಿ ತಯಾರಾಗುತ್ತಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಈ ಪ್ರೊಡಕ್ಷನ್ಸ್ ನಡಿ ಹೊಸ ಸಿನಿಮಾ ಘೋಷಣೆಯಾಗಿದೆ.
ಬಹಳ ದಿನಗಳಿಂದ ಕೇಳಿ ಬರ್ತಿದ್ದ ಯುವರಾಜ್‌ಕುಮಾರ್ ಹಾಗೂ ಸುಕ್ಕ ಸೂರಿ ಸಿನಿಮಾಗೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಅಕ್ಷಯ ತೃತೀಯದಿನವಾದ ಇಂದು ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್‌ಕುಮಾರ್ ಕ್ಲ್ಯಾಪ್ ಮಾಡಿದ್ದು, ಅಪ್ಪು ಅವರ ಮಗಳು ಧೃತಿ ಪುನೀತ್ ರಾಜ್ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವ ಫ್ಯಾಮಿಲಿ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ನಿರ್ದೇಶಕ ಸೂರಿ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು.
ಸುಕ್ಕ ಸೂರಿ ರಾ ಸ್ಟೈಲ್ ಮೇಕಿಂಗ್‌ಗೆ ಫೇಮಸ್..ಹೀಗಾಗಿ ಯುವ ಅವರ ಗರಡಿಯಲ್ಲಿ ಯಾವ ರೀತಿ ಕಾಣಿಸಲಿದ್ದಾರೆ ಎಂಬ ಕುತೂಹಲವಿದೆ. ಇನ್ನೂ ದುನಿಯಾ ವಿಜಯ್ ಮೊದಲ ಪುತ್ರಿ ರಿತನ್ಯಾ ವಿಜಯ್ ಕುಮಾರ್ ಈ ಚಿತ್ರದ ನಾಯಕಿ. ಈಗಾಗಲೇ ಅಪ್ಪನ ಜೊತೆ ಲ್ಯಾಂಡ್ ಲಾರ್ಡ್ ಸಿನಿಮಾ ಮೂಲಕ ಇಂಡಸ್ಟ್ರೀಗೆ ಬಲಗಾಲಿಟ್ಟಿರುವ ರಿತನ್ಯಾಗೆ ಇದು ಎರಡನೇ ಸಿನಿಮಾವಾದರೆ, ಯುವರಾಜ್ ಕುಮಾರ್ ಗೆ ಇದು ಮೂರನೇ ಚಿತ್ರ..
ಸೂರಿ ಗರಡಿಯಲ್ಲಿ ಖಾಯಂ ಆಗಿ ಕೆಲಸ ಮಾಡುವ ದೀಪು ಎಸ್ ಕುಮಾರ್ ಸಂಕಲನ, ಚರಣ್ ರಾಜ್ ಸಂಗೀತ ನಿರ್ದೇಶನ, ಸಂತೋಷ್ ಕಲಾ ನಿರ್ದೇಶನ, ಶೇಖರ್ ಕ್ಯಾಮೆರಾ ವರ್ಕ್ ಈ ಚಿತ್ರಕ್ಕೆ ಇರಲಿದೆ. ಮೇ ತಿಂಗಳಾತ್ಯಂತಕ್ಕೆ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ. ಪ್ರತಿಷ್ಠಿತ ಮೂರು ನಿರ್ಮಾಣ ಸಂಸ್ಥೆಯಡಿ ಬರ್ತಿರುವ ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ತಯಾರಗಲಿದೆ.
ಜೂನ್‌ಗೆ ಎಕ್ಕ
ಪಿಆರ್‌ಕೆ-ಕೆಆರ್‌ಜಿ-ಜಯಣ್ಣ ಫಿಲ್ಮಂ ಬ್ಯಾನರ್‌ನಡಿ ಬರ್ತಿರುವ ಯುವರಾಜ್ ಕುಮಾರ್ ನಾಯಕನಾಗಿ ಹಾಗೂ ರೋಹಿತ್ ಪದಕಿ ನಿರ್ದೇಶನದ ಎಕ್ಕ ಸಿನಿಮಾ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಹಾಗೂ ಟೈಟಲ್ ಟ್ರ್ಯಾಕ್ ದೊಡ್ಡ ಮಟ್ಟದ ಹಿಟ್ ಕಂಡಿದೆ.

Be the first to comment