ಯುವ ರಾಜ್​ಕುಮಾರನ ರಣ ಎಂಟ್ರಿ..!

ಅಣ್ಣಾವ್ರ ಕುಟುಂಬದಿಂದ ಮತ್ತೊಂದು ಕುಡಿ ಸ್ಯಾಂಡಲ್​ವುಡ್​ಗೆ ಭರ್ಜರಿ ಎಂಟ್ರಿ ಕೊಡಲು ಸಜ್ಜಾಗಿದೆ. ಇದಕ್ಕೆ ಬೇಕಾದ ಸಕಲ ತಯಾರಿಯೊಂದಿಗೆ ಶೂಟಿಂಗ್ ಕೂಡ ಆರಂಭಿಸಿದೆ. ಈಗಾಗಾಲೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ನಿರೀಕ್ಷೆ ಹುಟ್ಟು ಹಾಕಿದ್ದ ಯುವ-01 ಚಿತ್ರತಂಡ ಇದೀಗ ರಾಜ್ಯೋತ್ಸವದ ಪ್ರಯುಕ್ತ ಚಿತ್ರ ಟೈಟಲ್ ಅನ್ನು ಬಿಡುಗಡೆ ಮಾಡಿದೆ. ಅದು ಕೂಡ ಯುವ ರಾಜ್​ ಕುಮಾರ್​ ಅವರ ಖಡಕ್ ಡೈಲಾಗ್​ಗಳನ್ನೊಳಗೊಂಡ ಭರ್ಜರಿ ಟೀಸರ್ ಮೂಲಕ ಎಂಬುದು ವಿಶೇಷ.

ಹೌದು, ರಾಘವೇಂದ್ರ ರಾಜ್​ ಕುಮಾರ್ ಅವರ ಎರಡನೇ ಮಗ ಯುವ ರಾಜ್​ಕುಮಾರ್ ಅಭಿನಯದ ಮೊದಲ ಚಿತ್ರ ಈ ಹಿಂದೆಯೇ ಸೆಟ್ಟೇರಿತ್ತು. ಆದರೆ ಚಿತ್ರದ ಟೈಟಲ್ ಮತ್ತು ಪಾತ್ರದ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ನೀಡಿರಲಿಲ್ಲ. ಇದೀಗ 5 ನಿಮಿಷಗಳ ಟೀಸರ್ ಮೂಲಕ ‘ಯುವ ರಣಧೀರ ಕಂಠೀರವ’ನ ಎಂಟ್ರಿ ಝಲಕ್ ತೋರಿಸಿದ್ದಾರೆ.

ಭರ್ಜರಿ ಡೈಲಾಗ್ ಮತ್ತು ಜಬರ್‌ದಸ್ತ್ ಫೈಟ್​ನ್ನು ಟೀಸರ್​ನಲ್ಲಿ ತೋರಿಸಲಾಗಿದ್ದು, ಇದರೊಂದಿಗೆ ‘ಯುವ ರಣಧೀರ ಕಂಠೀರವ’ ಚಿತ್ರವು ಐತಿಹಾಸಿಕ ಕಥಾ ಹಂದರ ಹೊಂದಿರಲಿದೆ ಎಂಬುದು ಬಹಿರಂಗವಾಗಿದೆ. ಯುವ ರಾಜ್​ಕುಮಾರ್ ಅವರ ಚೊಚ್ಚಲ ಚಿತ್ರದ ಟೀಸರ್​ ಬಿಡುಗಡೆಯನ್ನು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್​ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ಕುಮಾರ್ ಸೇರಿದಂತೆ ಕುಟುಂಬ ವರ್ಗ ಭಾಗಿಯಾಗಿ ಹರಸಿದರು.

ಇನ್ನು ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಪುನೀತ್ ರುದ್ರನಾಗ್. ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿರುವ ಪುನೀತ್ ಈಗ ಚೊಚ್ಚಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗೆಯೇ ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್ ‘ಯುವ ರಣಧೀರ ಕಂಠೀರವ’ ಬ್ಯಾಂಡ್ ಬಜಾಯಿಸಿದ್ದಾರೆ. ಇನ್ನು ಸಂಕೇಶ್ ಛಾಯಾಗ್ರಹಣ, ಚೇತನ್ ಡಿಸೋಜಾ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!