‘ರಾಮ ಶ್ಯಾಮ ಭಾಮ’ ಖ್ಯಾತಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ (60) ಅವರು ಇಂದು ನಿಧನರಾಗಿದ್ದಾರೆ.
ಯಶವಂತ ಸರದೇಶಪಾಂಡೆ ಅವರಿಗೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತ ಉಂಟಾಯಿತು. ಅವರನ್ನು ಆಸ್ಪತ್ರೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಇತ್ತೀಚೆಗಷ್ಟೇ ಇವರ 60ನೇ ಹುಟ್ಟುಹಬ್ಬದ ಪ್ರಯುಕ್ತ ‘ಉತ್ತರೋತ್ತಮ ಉತ್ಸವ – 2025’ ನೃತ್ಯ, ಸಂಗೀತ ಮತ್ತು ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಕ್ಟೋಬರ್ 18ರಂದು ಪ್ರವೀಣ್ ಗೊಡಖಿ೦ಡಿ ರಚನೆಯ ‘ಕೊಳಲು.com(edy)’ ಎಂಬ ಹೊಸ ನಾಟಕದಲ್ಲಿ ಯಶವಂತ ಸರದೇಶಪಾಂಡೆ ಅಭಿನಯಿಸಲು ಮುಂದಾಗಿದ್ದರು. ಸೆಪ್ಟೆಂಬರ್ 28 ರ ಬೆಳಗ್ಗೆ ತಾವು ಮಾಡುತ್ತಿರುವ ಈ ಹೊಸ ಪ್ರಯೋಗದ ಕುರಿತು ಸೋಶೀಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದರು.
1965ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಒಕ್ಕಲಿ ಎಂಬಲ್ಲಿ ಶ್ರೀಧರ ರಾವ್ ಗೋಪಾಲರಾವ್ ಸರದೇಶಪಾಂಡೆ ಮತ್ತು ಕಲ್ಪನಾದೇವಿ ದಂಪತಿಗಳಿಗೆ ಹುಟ್ಟಿದ್ದ ಯಶವಂತ ಸರದೇಶಪಾಂಡೆ ಹೆಗ್ಗೋಡಿನ ‘ನೀನಾಸಂ’ ನಾಟಕ ಸಂಸ್ಥೆಯಿಂದ ಡಿಪ್ಲೋಮಾ ಪದವಿ ಪಡೆದಿದ್ದರು. ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ನಾಟಕ ರಚನೆ ಮತ್ತು ಚಲನಚಿತ್ರ ಸಂಭಾಷಣೆಯ ವಿಶೇಷ ತರಬೇತಿಯನ್ನು ಪಡೆದಿದ್ದರು.
”ಯದ್ವಾ ತದ್ವಾ”.. ”ಬಣ್ಣದ ಬುಗುರಿ”.. ”ದಶಾವತಾರ”.. ”ಪರ್ವ”.. ”ತುಂತುರು”.. ಧಾರಾವಾಹಿಗಳಲ್ಲಿ ಯಶವಂತ ಸರದೇಶಪಾಂಡೆ ಕಾಣಿಸಿಕೊಂಡಿದ್ದರು. ಕಮಲ್ ಹಾಸನ್-ರಮೇಶ್ ಅರವಿಂದ್ ಅಭಿನಯದ ”ರಾಮ ಶ್ಯಾಮ ಭಾಮ” ಚಿತ್ರಕ್ಕೆ ಸಂಭಾಷಣೆಯನ್ನು ಬರೆದಿದ್ದರು. ”ಐಡಿಯಾ ಮಾಡ್ಯಾರ” ಚಿತ್ರವನ್ನು ನಿರ್ಮಾಣ ಮಾಡಿದ್ದರು.
ಯಶವಂತ ಸರದೇಶಪಾಂಡೆ ಪತ್ನಿ ಮಾಲತಿ ರಂಗಭೂಮಿ ಮತ್ತು ಕಿರುತೆರೆಯ ಜನಪ್ರಿಯ ಕಲಾವಿದೆ. ದಂಪತಿ ಇಬ್ಬರೂ ಸೇರಿ ಕನ್ನಡ ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಕನ್ನಡದ ರಿಯಾಲಿಟಿ ಶೋ ಜೋಡಿ ನಂ.1ನಲ್ಲಿ ಭಾಗವಹಿಸಿದ್ದರು.
ಹಾಸ್ಯನಟ, ನಿರ್ದೇಶಕ, ನಾಟಕಕಾರ, ರಚನೆಕಾರ, ಸಂಭಾಷಣಾಕಾರರಾಗಿ ಯಶವಂತ ಸರದೇಶಪಾಂಡೆ ಲಕ್ಷಾಂತರ ಜನರ ಮನ ಗೆದ್ದಿದ್ದರು. ಯಶವಂತ ಸರದೇಶಪಾಂಡೆ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.
ಯಶವಂತ ಸರದೇಶಪಾಂಡೆ ಪತ್ನಿ ನಟಿ ಮಾಲತಿ, ಮಗಳು ದೋಸ್ತಿಯನ್ನು ಅಗಲಿದ್ದಾರೆ.
—-





Be the first to comment