ಸಿನಿಮಾ ವಿಮರ್ಶೆ : ಭ್ರಷ್ಟ ವ್ಯವಸ್ಥೆ ಮೇಲೆ ಮಂಸೋರೆ ಬಾಂಬ್!

ಕಲಾವಿದರು : ಯಜ್ಞಾ ಶೆಟ್ಟಿ,ಬಿ. ಸುರೇಶ,ಪ್ರಮೋದ್ ಶೆಟ್ಟಿ,ಅವಿನಾಶ್,ಅಚ್ಯುತ್‌ ಕುಮಾರ್,ಕಿರಣ್,ಶ್ರುತಿ,ಶೋಭರಾಜ್,ಕೃಷ್ಣ ಹೆಬ್ಬಾಳೆ,ನಂದಗೋಪಾಲ್,ರಾಘು ಶಿವಮೊಗ್ಗ

ನಿರ್ದೇಶಕ : ಮಂಸೋರೆ

ಅವಧಿ:2 Hrs 7 Min

ರೇಟಿಂಗ್  : 4/5

‘ಆಕ್ಟ್–1978’ ಸಿನಿಮಾ ವಿಮರ್ಶೆ : ಭ್ರಷ್ಟ ವ್ಯವಸ್ಥೆ ಮೇಲೆ ಮಂಸೋರೆ ಬಾಂಬ್!

ವ್ಯವಸ್ಥೆಯ ಅವ್ಯವಸ್ಥೆಯ ಬಗ್ಗೆ ವಿರುದ್ಧ ಸಿಡಿದೇಳುವ ನಾಯಕ/ನಾಯಕಿಯ ಕಥೆ ನಮ್ಮಲ್ಲಿ ಹೊಸದಲ್ಲ. ಇದೇ ಕಂಟೆಂಟ್ ಇಟ್ಟುಕೊಂಡು ಗೆದ್ದ ಸಾಕಷ್ಟು ಚಿತ್ರಗಳನ್ನು ನೋಡದವರಿಲ್ಲ. ಮಂಸೋರೆ ನಿರ್ದೇಶನದ ‘ಆಕ್ಟ್-೧೯೭೮’ ಕೂಡ ಚಿತ್ರದ ಕಂಟೆಂಟ್ ವಿಚಾರದಲ್ಲಿ ಇದೇ ಗುಂಪಿಗೆ ಸೇರಿದರೂ, ನರೇಶನ್ ಮತ್ತು ಚಿತ್ರದ ಒಟ್ಟು ಆಶಯದ ವಿಚಾರದಲ್ಲಿ ಎತ್ತರದಲ್ಲಿ ನಿಲ್ಲುತ್ತದೆ.

ಮಂಸೋರೆ ಮನಸ್ಸಿನಲ್ಲಿ ಬುಗಿಲೆಬ್ಬಿಸಿದ ‘ಸಿಲ್ವರ್ ಗಾಂಧಿ’ಯ ಪಾತ್ರ ಪ್ರೇಕ್ಷಕನಲ್ಲೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸರ್ಕಾರಿ ಆಫೀಸ್‌ನ ಹೊರಗಡೇ ಮಾತೇ ಆಡದೇ ಕೂತೇ ಇರೋ ಗಾಂಧಿ, ಎದ್ದು ನಿಲ್ಲುವಷ್ಟರಲ್ಲಿ ಹೋರಾಟದ ತೀವ್ರತೆ ನಿಂತು ಹೋಗಿರುತ್ತದೆ. ಇದು ಇಂದಿನ ‘ಓ’ರಾಟಗಾರರ ಮೇಲಿನ ರೂಪಕದಂತೆ ಭಾಸವಾದರೆ ಅದು ನಿದೇಶಕನ ತಪ್ಪಲ್ಲ.

ಚಿತ್ರದ ಪೋಸ್ಟರ್, ಟ್ರೆಲರ್ ನೋಡಿದವರಿಗೆ ಪ್ರೆಗ್ನೆಂಟ್ ಲೇಡಿಯೊಬ್ಬಳು, ಹೊಟ್ಟೆಯೊಳಗಿರುವ ಮಗುವನ್ನೂ ಲೆಕ್ಕಿಸದೆ, ಹೊಟ್ಟೆಗೆ ಬಾಂಬ್ ಕಟ್ಟಿಕೊಂಡು, ಗನ್ ಹಿಡಿದುಕೊಂಡು ಚಿತ್ರದಲ್ಲಿ ಏನು ಮಾಡುತ್ತಾಳೆ ಅನ್ನುವ ಕುತೂಹಲಕ್ಕಾಗಿ ಸ್ವಲ್ಪ ಕಥೆ ಬಿಟ್ಟು ಕೊಡುವುದಾದರೆ, ಆಕೆ ಇಡೀ ಸರ್ಕಾರಿ ಆಫೀಸ್‌ನ್ನು ತನ್ನ ವಶಕ್ಕೆ ತೆಗೆದುಕೊಂಡು.. ಅಲ್ಲಿನ ಸಿಬ್ಬಂದಿಗಳನ್ನು ಒತ್ತೆಯಾಳುವನ್ನಾಗಿಸುತ್ತಾಳೆ. ಇಲ್ಲಿಂದ ಮಂಸೋರೆ ವಿರಚಿತ ಇಂಟ್ರಸ್ಟಿಂಗ್ ಸ್ಕ್ರಿನ್ ಪ್ಲೇ ನೋಡುಗನ ಮನ ಸೂರೆಗೊಳ್ಳುತ್ತಲೇ ಹೋಗುತ್ತದೆ. ಒತ್ತೆಯಾಳಗಳ ಮೂಲಕ ಪ್ರೆಗ್ನೆಂಟ್ ಬಾಂಬರ್ ಏನು ಸಾಧಿಸುತ್ತಾಳೆ? ಚಿತ್ರದಲ್ಲಿನ ಇತರ ಪಾತ್ರಗಳು ಚಿತ್ರದ ಕಥೆಗೆ ಹೇಗೆ ಬೆಸೆದುಕೊಂಡಿದೆ ಅನ್ನೋದನ್ನು ಚಿತ್ರದಲ್ಲೇ ನೋಡಬೇಕು.

ಚಿತ್ರದ ಬಹುದೊಡ್ಡ ಪ್ಲಸ್‌ಪಾಯಿಂಟ್ ಚಿತ್ರದ ಬರವೆಣಿಗೆ. ಟಿ.ಕೆ.ದಯಾನಂದ, ವೀರು ಮಲ್ಲಣ್ಣ ಮತ್ತು ಮಂಸೋರೆ ನಿಜಕ್ಕೂ ಬಹು ಅಪರೂಪದ ಪ್ರಯತ್ನವನ್ನು ಮಾಡಿದ್ದಾರೆ. ಚಿತ್ರದ ಪ್ರತಿಯೊಂದು ಸಂಭಾಷಣೆಯೂ ಕೇವಲ ಮನರಂಜನೆಗೆ ಸೀಮಿತವಾಗದೆ ಯೋಚಿಸುವಂತೆ ಮಾಡುತ್ತದೆ. ಈ ಮೂಲಕ ‘ಆಕ್ಟ್-೧೯೭೮’ವನ್ನು ಕೇವಲ ಸಿನಿಮಾ ಚೌಕಟ್ಟಿನೊಳಗಡೇ ಅಷ್ಟೇ ಇಟ್ಟುಕೊಂಡು ನೋಡುವುದು ಸಾಧ್ಯವಾಗುವುದಿಲ್ಲ. ಭ್ರಷ್ಟ ವ್ಯವಸ್ಥೆಯ ವಿರುದ್ಧ ತನ್ನ ಪ್ರಾಣದ ಜೊತೆಗೆ, ತನ್ನ ಹೊಟ್ಟೆಯಲ್ಲಿರುವ ಮಗುವಿನ ಪ್ರಾಣವನ್ನೂ ಒತ್ತೆ ಇಟ್ಟು ಹೋರಾಡುವ ನಾಯಕಿ ಇಂದಿನ ಹತಾಶ ಹೆಣ್ಣುಮಕ್ಕಳ ದನಿಯಾಗುತ್ತಾಳೆ.

‘ಆಕ್ಟ್-೧೯೭೮’ನಲ್ಲಿ ನೋಡುಗನನ್ನು ಭಾವಪರಶಗೊಳಿಸುವ ಸಾಕಷ್ಟು ದೃಶ್ಯಗಳಿವೆ. ನಾಯಕಿ ಬಳಸುತ್ತಿದ್ದ ವಾಕಿ ಟಾಕಿಯನ್ನು ಫೋಕಸ್‌ನಲ್ಲಿಟ್ಟು ಆಕೆಯ ವೇದನೆಯನ್ನು ಕೇವಲ ಅರ್ತನಾದ ಮೂಲಕ ಕಟ್ಟಿಕೊಟ್ಟಿರುವ ಮಂಸೋರೆ ಅವರ ಸಿನಿಮಾ ಕೃಷಿ ಮೆಚ್ಚಬೇಕಾದದ್ದೆ. ಇಲ್ಲಿ ಕೂಡ ನಾಯಕಿಯ ಅರ್ತನಾದ ಹಿಂದಿನ ಕಾರಣವನ್ನು ದೃಶ್ಯರೂಪದಲ್ಲಿ ಡಿಟೇಲ್ ಆಗಿ ಪ್ರೇಕ್ಷಕನ ಮುಂದಿಟ್ಟಿದ್ದರೆ ಅದೊಂದು ಸಾಮಾನ್ಯ ದೃಶ್ಯವಾಗಿ ಬಿಡುತ್ತಿತ್ತು.

ಬಾಂಬರ್ ಲೇಡಿಯಾಗಿ ಯಜ್ಜಾಶೆಟ್ಟಿ ಅಭಿನಯ ಮಂಸೋರೆ ಚಿತ್ರದ ಬಗ್ಗೆ ಕಟ್ಟಿಕೊಂಡಿದ್ದ ಕನಸನ್ನು ಸಾಕಾರಗೊಳಿಸಿದೆ. ಗುಜುರಿ ಸೋಡಾ ಗ್ಲಾಸಿನಿಂದ ಕಣ್ಣಿನಲ್ಲೇ ಎಲ್ಲವನ್ನೂ ಹೇಳುವ ನಟ ಬಿ.ಸುರೇಶ ಅವರು ಇನ್ನಷ್ಟು ಹೊತ್ತು ತೆರೆಯ ಮೇಲೆ ಇರಬೇಕಿತ್ತು ಎಂದು ಅನ್ನಿಸೋದು ಸುಳ್ಳಲ್ಲ. ಕ್ರೂಶಿಯಲ್ ಸ್ಟೇಜ್‌ನಲ್ಲಿ ಎಂಟ್ರಿ ಕೊಡೋ ಸಂಚಾರಿ ವಿಜಯ್, ಕಥೆಯ ಸಂಚಾರಕ್ಕೆ ಒಂದೊಳ್ಳೆ ಟ್ವಿಸ್ಟ್ ಕೊಡುತ್ತಾರೆ. ಪ್ರಮೋದ್ ಶೆಟ್ಟಿ ಕೇವಲ ಪೋಲಿಸ್ ಪಾತ್ರಗಳಿಗಷ್ಟೇ ಬ್ರಾಂಡ್ ಆಗುವುದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಅವರ ವೃತ್ತಿ ಬದುಕಿನ ದೃಷ್ಠಿಯಿಂದ ಒಳ್ಳೆಯದು.

ಈ ಹಿಂದೆ ತಮ್ಮ ಕ್ಯಾಮರಾ ಕೈಚಳಕದ ಮೂಲಕ ಜೋಗದ ಆಳವನ್ನು ನೋಡುಗನ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಸತ್ಯ ಹೆಗಡೆ ಇಲ್ಲಿ, ಜೋಗದ ಆಳವನ್ನೂ ಮೀರಬಲ್ಲ ಮಾನವನ ಮನಸ್ಸನ್ನು ದೃಶ್ಯದ ಮೂಲಕ ಹೇಳವ ಅದ್ಭುತ ಪ್ರಯತ್ನ ಮಾಡಿದ್ದಾರೆ. ಹಾಗಿದ್ದರೆ ಚಿತ್ರದಲ್ಲಿ ಎನೂ ನೆಗೆಟೀವ್ ವಿಚಾರಗಳೇ ಇಲ್ವಾ? ಇದೆ, ಆದರೆ ಮೊಸರಿನಲ್ಲಿ ಒಂದೆರೆಡು ಕಲ್ಲಿದ್ದರೆ ಅದನ್ನೆತ್ತಿ ಬಿಸಾಕಬೇಕೆ ಹೊರತು, ಮೊಸರು ತುಂಬಾ ಕಲ್ಲಿದೆ ಎಂದು ಬಿಂಬಿಸಬಾರದು ಅಲ್ಲವೇ? ಒಟ್ಟಿನಲ್ಲಿ, ಕೋವಿಡ್ ಸಮಯದಲ್ಲಿ ರಿಲೀಸ್ ಆಗಿರುವ ‘ಆಕ್ಟ್-೧೯೭೮’ ಕನ್ನಡ ಚಿತ್ರರಂರಗದ ಭವಿಷ್ಯದ ದೃಷ್ಟಿಯಿಂದ ತುಂಬಾ ಮುಖ್ಯವಾದ ಚಿತ್ರ ಎಂಬ ಒಂದೇ ಕಾರಣಕ್ಕೆ ಚಿತ್ರವನ್ನು ಥೀಯೆಟರ್‌ಗೆ ಹೋಗಿ ನೋಡುವ ಅಗತ್ಯವಿಲ್ಲ. ಬಿಕಾಸ್, ‘ಆಕ್ಟ್-೧೯೭೮’ಗೆ ಎಲ್ಲಾ ಜಂಜಾಟಗಳನ್ನು, ಅಡ್ಡಿಗಳನ್ನು ಮೀರಿ ನಿಲ್ಲಬಲ್ಲ ಶಕ್ತಿ ಇದೆ.

-ಬಿಸಿನಿಮಾಸ್ ಡಾಟ್ ಇನ್

Be the first to comment

Leave a Reply

Your email address will not be published. Required fields are marked *

Translate »
error: Content is protected !!