ತನ್ನ ಶೀರ್ಷಿಕೆಯ ಮೂಲಕವೇ ಬಹಳಷ್ಟು ಗಮನ ಸೆಳೆದಿರುವ ಈ ಚಿತ್ರ “ವಿಂಡೋ ಸೀಟ್”. ಸಾಮಾನ್ಯವಾಗಿ ಪ್ರಯಾಣ ಮಾಡುವಾಗ ಅದು ಬಸ್ಸೇ ಇರಲಿ, ಟ್ರೈನೇ ಇರಲಿ… ವಿಂಡೋಸೀಟ್ ಪಕ್ಕ ಕುಳಿತು ಕೊಳ್ಳಲು ಇಷ್ಟಪಡುತ್ತಾರೆ. ಏಕೆಂದರೆ ಕಿಟಿಕಿಯ ಪಕ್ಕ ಕುಳಿತು ಪ್ರಕೃತಿಯ ಸೌಂದರ್ಯವನ್ನು ಸವಿಯುವಂಥ ಜನ ಒಂದು ಕಡೆಯಾದರೆ, ಇನ್ನೊಂದು ಕಡೆ ತಮ್ಮ ಜೀವನದ ಹಳೇ ನೆನಪುಗಳಿಗೆ ಜಾರುವವರೂ ಕೆಲಮಂದಿ ಇದ್ದಾರೆ.
ಪ್ರಯಾಣ ಮಾಡುವವರಿಗೆ ಈ ವಿಂಡೋಸೀಟ್ ಅನ್ನುವುದು ಅಷ್ಟೊಂದು ಪ್ರಾಮುಖ್ಯತೆ ಪಡೆದಿದೆ. ವಿಂಡೋಸೀಟ್ ಹಿಡಿದು ಕೂತಿರುವ ನಾಯಕನ ಕಥೆಯನ್ನು ನಟಿ, ನಿರೂಪಕಿ ಶೀತಲ್ ಶೆಟ್ಟಿ ಅವರು ಹೇಳಹೊರಟಿದ್ದಾರೆ.
ಈ ವಿಂಡೋಸೀಟ್ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ಚಿತ್ರದ ನಿರ್ಮಾಪಕಿ ಶ್ರೀಮತಿ ಶಾಲಿನಿ ಮಂಜುನಾಥ್, ಶೀತಲ್ ಶೆಟ್ಟಿ, ನಾಯಕ ನಿರೂಪ್ ಭoಡಾರಿ, ನಾಯಕಿ ಅಮೃತಾ ಅಯ್ಯಂಗಾರ್, ನಟ ಸೂರಜ್ ಮತ್ತು ಚಿತ್ರತಂಡ ಹಾಜರಿತ್ತು.
ಈ ಚಿತ್ರ ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿದ್ದರೂ, ಕೊರೊನಾ ಕಾರಣಗಳಿಂದಾಗಿ ಶೂಟಿಂಗ್ ನಿಧಾನಗತಿಯಲ್ಲಿ ಸಾಗಿ, ಈಗ ಬಿಡುಗಡೆಯ ಹಂತ ತಲುಪಿದೆ. ಈ ಹಿಂದೆ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದ ನಿರೂಪಕಿ ಶೀತಲ್ಶೆಟ್ಟಿ ಅವರು ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ಚಲನಚಿತ್ರ ಇದಾಗಿದ್ದು, ಕಥೆ ಹಾಗೂ ಚಿತ್ರಕಥೆಯನ್ನು ಅವರೇ ಬರೆದಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಚಿತ್ರ 2016ರಲ್ಲೇ ಶುರುವಾಗಿತ್ತು. ಬಿಗ್ಬಾಸ್ ಮನೆಯಿಂದ ಹೊರಬಂದ ಮೇಲೆ ನಾನು ಸ್ನೇಹಿತರ ಜೊತೆ ಕೂತು ಈ ಕಥೆ ರೆಡಿ ಮಾಡಿಕೊಂಡಾಗ ನೀವೇ ಡೈರೆಕ್ಟ್ ಮಾಡಿ ಎಂಬ ಸಲಹೆ ಬಂತು. ನಂತರ ನಿರ್ಮಾಪಕರ ಹುಡುಕಾಟ ನಡೆಸುತ್ತಿದ್ದೆವು. ಯಾರೂ ಸಿಗಲಿಲ್ಲ.
ಒಮ್ಮೆ ಸುದೀಪ್ರನ್ನು ಕಂಡು ಯಾರಾದರೂ ಪ್ರೊಡ್ಯೂಸರ್ ಇದ್ರೆ ಹೇಳಿ ಎಂದಾಗ ಅವರು ಮಂಜು ಅವರನ್ನು ಸಜೆಸ್ಟ್ ಮಾಡಿದರು. ನಾನು ಮಂಜು ಅವರಬಳಿ ಹೋಗಿ ಕಥೆ ಹೇಳಿದೆ, ಒಂದಷ್ಟು ಕರೆಕ್ಷನ್ ಹೇಳಿ ನಿರ್ಮಾಣಕ್ಕೆ ಒಪ್ಪಿದರು. ಇನ್ನು ನಾಯಕನ ಪಾತ್ರಕ್ಕೆ ನಿರೂಪ್ ಅವರು ಒಪ್ತಾರೋ ಇಲ್ವೋ ಎಂಬ ಅನುಮಾನವಿತ್ತು, ಆದರೆ ಅವರು ಕಥೆ ಕೇಳಿದ ಕೂಡಲೇ ಹೊಸಬಳೆಂದು ಯೋಚಿಸದೆ ಗ್ರೀನ್ ಸಿಗ್ನಲ್ ಕೊಟ್ಟರು. ಹೀಗೆ ನಿರ್ಮಾಣವಾದ ಈ ಚಿತ್ರ ಜುಲೈ ಒಂದರಂದು ಬಿಡುಗಡೆಯಾಗುತ್ತಿದೆ ಎಂದರು.
ನಂತರ ನಿರ್ಮಾಪಕಿ ಶಾಲಿನಿ ಮಂಜುನಾಥ್ ಮಾತನಾಡುತ್ತ ನಮ್ಮ ಸಂಸ್ಥೆಯಿಂದ ಯಾವಾಗಲೂ ಹೊಸಬರಿಗೇ ಅವಕಾಶ ನೀಡುತ್ತ ಬಂದಿದೇವೆ. ಅದು ಲೈಫ್ ಇಷ್ಟೇನೇ, ಡೆಡ್ಲಿಸೋಮನೇ ಇರಬಹುದು. ಹೊಸಬರು ಬಂದಾಗ ಹೊಸ ಐಡಿಯಾ ಹೊರಬರುತ್ತದೆ, ಹೊಸತನ ಕೊಟ್ಟಾಗ ಜನನೂ ಮನೆಯಿಂದ ಹೊರಬರುತ್ತಾರೆ.
ಈಗ ಒಬ್ಬ ಮಹಿಳೆಗೆ ಅವಕಾಶ ಕೊಟ್ಟಿದೇವೆ. ಶೀತಲ್ ಶೆಟ್ಟಿ ಅದ್ಭುತವಾಗಿ ಈ ಚಿತ್ರ ಮಾಡಿಕೊಟ್ಟಿದ್ದಾರೆ, ಫಸ್ಟ್ ಟೈಮ್ ನಿರ್ದೇಶನ ಮಾಡಿದ್ದಾರೆ ಅನಿಸುವುದೇ ಇಲ್ಲ, ಇವರ ಥರನೇ ಎಲ್ಲಾ ಹೆಣ್ಣುಮಕ್ಕಳು ಮುಂದೆ ಬರಬೇಕು, ಅವರು ಅಡುಗೆ ಮನೆಯಿಂದ ಹೊರಬರಬೇಕು. ಪ್ರತಿಯೊಬ್ಬ ಹೆಣ್ಣುಮಕ್ಕಳಲ್ಲೂ ಒಂದು ಶಕ್ತಿ ಇದೇ ಇರುತ್ತದೆ. ನಮ್ಮ ಇಂಡಸ್ಟ್ರಿ ಈಗ ಪ್ರಪಂಚ ಮಟ್ಟದಲ್ಲಿ ಗುರ್ತಿಸಿಕೊಳ್ಳುತ್ತಿದೆ, ಅದಕ್ಕೆ ತಕ್ಕಂತೆ ನಾವು ಸಿನಿಮಾಗಳನ್ನು ಮಾಡಬೇಕಿದೆ ಎಂದರು.
ವಿಂಡೋಸೀಟ್ ಎಂದ ಕೂಡಲೇ ಇದೊಂದು ಬರೀ ಜರ್ನಿ ಕಥೆ ಅಂದುಕೊಳ್ಳ ಬೇಕಿಲ್ಲ. ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಮಿಸ್ಟ್ರಿ ಕೂಡ ಇದರಲ್ಲಿದೆ. ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಸಿನಿಮಾದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸುತ್ತದೆ. ಈ ಚಿತ್ರದ ವಿಶಿಷ್ಟ ಟ್ರೈಲರನ್ನು ನಟ ಕಿಚ್ಚ ಸುದೀಪ್ ಅವರು ಟ್ವಿಟರ್ನಲ್ಲಿ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.
ತಾಳಗುಪ್ಪದಿಂದ ಸಾಗರದವರೆಗೆ ಸಾಗುವ ಟ್ರೈನ್ಕಥೆ ಈ ಚಿತ್ರದಲ್ಲಿದೆ. ಹೀಗಾಗಿ ವಿಂಡೋಸೀಟ್, ಮಲೆನಾಡು, ಅಲ್ಲಿನ ಜನರ ಜೀವನಶೈಲಿಯನ್ನು ಪರಿಚಯಿಸುವ ಜೊತೆಜೊತೆಗೆ ಒಂದು ಕುತೂಹಲಕರ ಮರ್ಡರ್ ಮಿಸ್ಟ್ರಿಯನ್ನು ಹೇಳಹೊರಟಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು, ಜುಲೈ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನಟ ನಿರೂಪ್ ಭoಡಾರಿ ಅವರು ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ತಾಳಗುಪ್ಪದ ರಘು ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಘು ಒಬ್ಬ ಹಾಡುಗಾರ. ಆತನಿಗೆ ವಿಂಡೋಸೀಟೆಂದರೆ ಬಲು ಪ್ರೀತಿ, ಈತನ ವಿಂಡೋಸೀಟಿನ ವ್ಯಾಮೋಹವೇ ಈತನನ್ನು ದೊಡ್ಡದೊಂದು ಸಂಕಷ್ಟಕ್ಕೆ ತಳ್ಳುತ್ತದೆ. ಇದರ ಸುಳಿಯಿಂದ ರಘು ಪಾರಾಗುತ್ತಾನಾ ? ಇಲ್ವಾ, ಕಟ್ಟುಪಾಡುಗಳಿಗೆ ಸಿಕ್ಕು ಸಂಕಷ್ಟಕ್ಕೆ ಸಿಲುಕುತ್ತಾನಾ? ಅನ್ನೋದು ವಿಂಡೋಸೀಟ್ ಸಿನಿಮಾದ ಮುಖ್ಯಕಥೆ.
ಪ್ರೀತಿ, ಭಾವನೆ, ನೋವು-ನಲಿವಿನ ಜೊತೆಗೆ ಒಂದು ಮರ್ಡರ್ಮಿಸ್ಟ್ರಿ ಕಥೆ ಹೇಗೆ ಸಾಗುತ್ತೆ ಎನ್ನುವುದೇ ಚಿತ್ರದ ಕುತೂಹಲ. ವಿಂಡೋಸೀಟ್ ಚಿತ್ರದಲ್ಲಿ ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ವಿಘ್ನೇಶ್ ರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸದ್ಯ ಬಿಡುಗಡೆ ಆಗಿರುವ ಟ್ರೈಲರ್ ಬಹಳಷ್ಟು ಸದ್ದು ಮಾಡಿದ್ದು, ಅತೀ ಶೀಘ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.
Be the first to comment