WheelchairRomeo Review :ಅಂಗವಿಕಲನ ಕನಸಿನ ಕಥೆ “ವ್ಹೀಲ್ ಚೇರ್ ರೋಮಿಯೋ”

ನಿರ್ದೇಶನ: ನಟರಾಜ್

ನಿರ್ಮಾಪಕ: ವೆಂಕಟಾಚಲಯ್ಯ
ತಾರಾಗಣ: ರಾಮ್ ಚೇತನ್, ಮಯೂರಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್ ಇತರರು.
ರೇಟಿಂಗ್: 4/5

ಅಂಗವಿಕಲನ ಕನಸಿನ ಕಥೆಯಾಗಿ ನಿಲ್ಲುವ ವ್ಹೀಲ್ ಚೇರ್ ರೋಮಿಯೋ ಭಿನ್ನ ಸಿನಿಮಾ ಎನ್ನಬಹುದು. ತಾಯಿ ಇಲ್ಲದೆ ಬೆಳೆದ ಕಾಲು ಇಲ್ಲದ ಮಗನಿಗೆ ಮದುವೆ ಮಾಡುವ ಬಯಕೆ ಅಪ್ಪನದ್ದು. ಆದರೆ ಕಾಲುಗಳಲ್ಲಿ ಬಲವಿಲ್ಲದಿದ್ದರೂ ಹುಡುಗನಿಗೆ ಬೇರೆಲ್ಲ ಶಕ್ತಿ ಇರುತ್ತದೆ. ವ್ಹೀಲ್ ಚೇರ್ ಮೇಲೆ ಕೂತಿದ್ದರೂ ವಿಟ ಬಯಕೆ ಅವನದು. ಮದುವೆ ಬೇಡ, ಹುಡುಗಿ ಬೇಕು ಎನ್ನುವ ಮಗನ ಬಯಕೆಯ ಕನಸು ಈ ಸಿನಿಮಾ ಆಗಿದೆ.

ಹೆತ್ತ ಮಗನ ದಾಹ ತಣಿಸಲು ಅಪ್ಪ ವೇಶ್ಯಾಗೃಹಕ್ಕೆ ಮಗನನ್ನು ಕರೆದುಕೊಂಡು ಹೋಗುತ್ತಾನೆ. ಬಳಿಕ ಹಾಸ್ಯದೊಂದಿಗೆ ಈ ಚಿತ್ರ ಅಂಗವಿಕಲತೆ ಹೊಂದಿರುವ ಜೀವಗಳ ಒಳ ವೇದನೆಗಳನ್ನು ತೆರೆದಿಡುತ್ತದೆ. ಅವರಲ್ಲೂ ಎಲ್ಲರಂತೆ ಬಯಕೆಗಳಿರುತ್ತವೆ. ಪ್ರೀತಿ, ಪ್ರೇಮ, ಕಾಮ ಅವರಿಗೂ ಎಂದು ಜಗತ್ತು ಮರೆತ ಅಂಶವನ್ನು ಸಿನಿಮಾದ ಕಥಾವಸ್ತು ನೆನಪು ಮಾಡುತ್ತದೆ.
ಈ ಥರದ ಸಬ್ಜೆಕ್ಟ್ ಯಾವುದೇ ಭಾಷೆಗಳಲ್ಲಿ ಯಾರೂ ಮುಟ್ಟಿದಂತಿಲ್ಲ. ಹೆತ್ತ ಮಗನ ಮನೋದೈಹಿಕ ಬಯಕೆಗಳನ್ನು ಅರ್ಥಮಾಡಿಕೊಳ್ಳುವ ಅಪ್ಪನ ಪಾತ್ರ ಇಲ್ಲಿ ಮೂಡಿದೆ. ಜೊತೆಗೆ ತನ್ನದೇ ಮಗಳು, ಕಟ್ಟಿಕೊಂಡ ಹೆಂಡತಿಯನ್ನೂ ನೋಡದೆ ತಲೆ ಹಿಡಿಯುವ ಅಪ್ಪನನ್ನೂ ಇಲ್ಲಿ ತೋರಿಸಲಾಗಿದೆ.

ವ್ಹೀಲ್ ಚೇರ್ ರೋಮಿಯೋದಲ್ಲಿ ರಂಗಾಯಣ ರಘು ನಕ್ಕು ನಗಿಸುತ್ತಾರೆ. ಹೀರೋ ಪಾತ್ರದಲ್ಲಿರುವ ರಾಮ್ ಚೇತನ್ ಅಂಗವಿಕಲ ಎನ್ನುವ ಮಟ್ಟಿಗೆ ಸಹಜ ಅಭಿನಯ ಮಾಡಿದ್ದಾರೆ. ನಾಯಕಿ ಮಯೂರಿ ಅಂಧತ್ವವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್ ಅವರದ್ದು ಮೆಚ್ಚುವ ಅಭಿನಯ.

ಸಿನಿಮಾದ ಗಟ್ಟಿಯಾದ ಕಥೆ, ಎಲ್ಲೂ ಗೊಂದಲವಾಗದ ನಿರೂಪಣೆ, ಪವರ್ ಫುಲ್ ಸಂಭಾಷಣೆ ಪ್ಲಸ್ ಪಾಯಿಂಟ್ ಎನಿಸಿಕೊಳ್ಳುತ್ತದೆ. ಗುರು ಕಷ್ಯಪ್ ಬರೆದ ಸಂಭಾಷಣೆ ನಗೆಗಡಲಲ್ಲಿ ತೇಲಿಸುತ್ತದೆ. ಯಾವುದೇ ಸಬ್ಜೆಕ್ಟನ್ನು ಆಯ್ಕೆ ಮಾಡಿಕೊಂಡು ಅದನ್ನು ತೆರೆಗೆ ಅಳವಡಿಸುವ ಕಸುಬುದಾರಿಕೆಯಲ್ಲಿ ನಿರ್ದೇಶಕ ನಟರಾಜ್ ಗೆದ್ದಿದ್ದಾರೆ. ಕಲಾವಿದ, ತಂತ್ರಜ್ಞರಿಂದ ಕೆಲಸ ತೆಗೆಸಿಕೊಳ್ಳುವ ಜಾಣ್ಮೆಯೂ ಚಿತ್ರದಲ್ಲಿ ಕಾಣುತ್ತದೆ
ಒಮ್ಮೆ ವ್ಹೀಲ್ ಚೇರ್ ರೋಮಿಯೋ ವನ್ನು ನೋಡಿ ಎಂಜಾಯ್ ಮಾಡಲು ಅಡ್ಡಿಯಿಲ್ಲ.
________

Be the first to comment

Leave a Reply

Your email address will not be published. Required fields are marked *

Translate »
error: Content is protected !!