ಯುವ ಪಡೆಗಳು ಸೇರಿಕೊಂಡು ನಿರ್ಮಿಸಿರುವಂತಹ ಕೌಟುಂಬಿಕ ಕಥಾನಕದಲ್ಲಿ ಕಾನೂನಾತ್ಮಕ ವಿಚಾರಗಳ ಸೂಕ್ಷ್ಮ ಸಂದೇಶವನ್ನು ಜನರಿಗೆ ತಿಳಿಸುವಂತಹ ನೂತನ ಚಿತ್ರದ ಮುಹೂರ್ತ ಸಮಾರಂಭ ಹನುಮಂತನಗರದಲ್ಲಿರುವ ಶ್ರೀಕುಮಾರಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಚಾಲನೆ ಪಡೆಯಿತು.
ಈ ಚಿತ್ರದ ಶೀರ್ಷಿಕೆ ಬಹಳ ವಿಭಿನ್ನವಾಗಿದ್ದು ಅದುವೇ “ವೆಡ್ಡಿಂಗ್ ಗಿಫ್ಟ್” ಈ ಚಿತ್ರವನ್ನ ವಿಕ್ರಂ ಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆರಂಭ ಫಲಕ ತೋರಿದರು. ನಟಿ ಪ್ರೇಮ ಕ್ಯಾಮೆರಾ ಚಾಲನೆ ಮಾಡಿದರು.
ಮುಹೂರ್ತ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.ನಾನು ಕಳೆದ ಕೆಲವು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ ಬಳಿ ಕಾರ್ಯ ನಿರ್ವಹಿಸಿದೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ನಾನೇ ಕಥೆ ಬರೆದಿದ್ದು, ನಿರ್ಮಾಣವನ್ನು ಮಾಡುತ್ತಿದ್ದೇನೆ.
ನಿಶಾನ್ ನಾಣಯ್ಯ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದು , ನಾಯಕಿಯಾಗಿ ಸೋನು ಗೌಡ ಅಭಿನಯಿಸುತ್ತಿದ್ದಾರೆ. ಹಿರಿಯ ನಟಿ ಪ್ರೇಮ ನಾಲ್ಕುವರ್ಷಗಳ ನಂತರ ನಮ್ಮ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪವಿತ್ರ ಲೋಕೇಶ್, ಯಮುನ ಶ್ರೀನಿಧಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಮ್ಮ ಚಿತ್ರದ ಶೀರ್ಷಿಕೆ ಕೇಳುತ್ತಿದ್ದ ಹಾಗೆ, ಕೌಟುಂಬಿಕ ಚಿತ್ರ ಅನಿಸಬಹುದು ಆದರೆ, ಇದು ಡಾರ್ಕ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಚಿತ್ರ. ಬೆಂಗಳೂರು, ಚಿಕ್ಕಮಗಳೂರು, ಮಂಗಳೂರಿನಲ್ಲಿ ನಲವತ್ತೈದು ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ವಿಕ್ರಂ ಪ್ರಭು.
ನಾನು ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಭೇತಿ ಪಡೆದಿದ್ದೇನೆ. ಮಲೆಯಾಳಂ ಸೇರಿದಂತೆ ವಿವಿಧ ಭಾಷೆಗಳ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಮೊದಲ ಚಿತ್ರ. ಕಥೆ ತುಂಬಾ ಇಷ್ಟವಾಯಿತು . ವಿಲಾಸ್ ಎಂಬ ಪಾತ್ರ ನಿರ್ವಹಿಸಿಸುತ್ತಿದ್ದೇನೆ ಎಂದರು ನಾಯಕ ನಿಶಾನ್ ನಾಣಯ್ಯ.
ನಾನು ಈವರೆಗೂ ಮಾಡಿರದ ಪಾತ್ರ ಸಿಗಬೇಕು ಅಂದುಕೊಳ್ಳುತ್ತಿದೆ. ಈ ಚಿತ್ರದಲ್ಲಿ ಸಿಕ್ಕಿದೆ. ಗಂಡ-ಹೆಂಡತಿಯಲ್ಲಿ ಯಾವತ್ತೂ ನನ್ನದು ಎನ್ನುವುದು ಬರಕೂಡದು. ನಮ್ಮದು ಅಂತ ಇರಬೇಕು. ಯಾವಾಗ ನನ್ನದು ಅಂತ ಬರುತ್ತದೆಯೋ, ಆಗ ಅವರಿಬ್ಬರ ನಡುವೆ ಏನಾಗುತ್ತದೆ ಎಂಬುದೇ ಕಥಾಹಂದರ.
ನನಗೆ ಈ ಪಾತ್ರ ತುಂಬಾ ಇಷ್ಟವಾಯಿತು. ಎಲ್ಲರಿಗೂ ಹಿಡಿಸಲಿದೆ ಎಂಬ ನಂಬಿಕೆಯಿದೆ ಎಂದರು ನಾಯಕಿ ಸೋನು ಗೌಡ.
ಉಳಿದಂತೆ ನಟಿ ಯಮುನ ಶ್ರೀನಿಧಿ, ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು, ಛಾಯಾಗ್ರಹಕ ಉದಯಲೀಲ ಹಾಗೂ ಸಂಕಲನಕಾರ ವಿಜೇತ್ ಚಂದ್ರ ತಮ್ಮ ಕಾರ್ಯಗಳ ಬಗ್ಗೆ ಮಾತನಾಡಿದರು. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು , ಚಿತ್ರತಂಡ ಚಿತ್ರೀಕರಣದತ್ತ ಸಾಗಿದೆ. ಇನ್ನು ಮುಂದೆ ದಿನಗಳಲ್ಲಿ ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ನೀಡಲಿದೆ.
Be the first to comment