ಚಂದನವನದಲ್ಲಿ ಹೊಸ ಬಗೆಯ ವಿಭಿನ್ನ ಪ್ರಯತ್ನದ ಚಿತ್ರಗಳು ಆಗಾಗ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ. ಆ ನಿಟ್ಟಿನಲ್ಲಿ ವಿಕ್ರಂಪ್ರಭು ನಿರ್ಮಿಸಿ ನಿರ್ದೇಶಿಸಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರವು ಸೇರಿಕೊಳ್ಳುತ್ತದೆ ಎನ್ನಬಹುದು. ಈ ಚಿತ್ರದ ಹಾಡುಗಳು ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.
ನಿರ್ಮಾಪಕರಾದ ಭಾ.ಮ.ಹರೀಶ್ ಹಾಗೂ ಸುನೀಲ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಪ್ರೇಮ, ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು, ಸಂಕಲನಕಾರ ವಿಜೇತ್ ಚಂದ್ರ ಹಾಗೂ ಛಾಯಾಗ್ರಾಹಕ ಉದಯಲೀಲ ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.
ನಾನು ಹತ್ತೊಂಬತ್ತು ವರ್ಷದ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ “ಲವ್” ಚಿತ್ರಕ್ಕೆ ಕೆಲಸ ಮಾಡಿದ್ದೆ. ಆನಂತರ ಬೇರೆ ಪುಣೆಯಲ್ಲಿ ವ್ಯಾಪಾರ ಮಾಡುತ್ತಿದ್ದೆ. ಈಗ ಮತ್ತೆ ಚಿತ್ರರಂಗಕ್ಕೆ ಬಂದು “ವೆಡ್ಡಿಂಗ್ ಗಿಫ್ಟ್” ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದೇನೆ. ಕೆಲವು ಹೆಣ್ಣು ಮಕ್ಕಳು ಕಾನೂನನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದೇ ಕಥಾಹಂದರ.
ಹಿರಿಯ ನಟಿ ಪ್ರೇಮ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಶಾಂತ್, ಸೋನು ಗೌಡ, ಅಚ್ಯುತಕುಮಾರ್, ಪವಿತ್ರ ಲೋಕೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈಗ ಹಾಡುಗಳ ಬಿಡುಗಡೆಯಾಗಿದೆ. ಮೇ ತಿಂಗಳನ್ನು ಪ್ರಚಾರಕ್ಕೆ ಮೀಸಲಿಟ್ಟು, ಜೂನ್ ನಲ್ಲಿ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು ನಿರ್ಮಾಪಕ ಹಾಗೂ ನಿರ್ದೇಶಕ ವಿಕ್ರಂಪ್ರಭು.
ನಾನು ದುಡ್ಡಿಗಾಗಿ ಸಿನಿಮಾ ಮಾಡುವವಳಲ್ಲ. ಉತ್ತಮ ಕಥೆ ಇದ್ದರೆ ಮಾತ್ರ ಮಾಡುತ್ತೇನೆ. ವಿಕ್ರಂಪ್ರಭು ಅವರು ಈ ಚಿತ್ರದ ಕಥೆ ಹೇಳಿದ ತಕ್ಷಣ ಮಾಡಬೇಕೆನಿಸಿತು. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಾಯಕನ ಪರ ವಕಾಲತ್ತು ವಹಿಸುವ ವಕೀಲೆಯಾಗಿ ಕಾಣಿಸಿಕೊಂಡಿದ್ದೀನಿ.
ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಹಿರಿಯ ನಟಿ ಪ್ರೇಮ. ಉಳಿದಂತೆ ತಾಂತ್ರಿಕ ವರ್ಗದವರು ಕೂಡ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು. ಒಟ್ಟಾರೆ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರ ಅತೀ ಶೀಘ್ರದಲ್ಲಿ ಅದ್ದೂರಿ ಪ್ರಚಾರದ ಮೂಲಕ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ.
Be the first to comment