ವದಂತಿ ಹರಡಿದರೆ ಮಾನಹಾನಿ ಪ್ರಕರಣ: ಚಂದನ್, ನಿವೇದಿತಾ ಎಚ್ಚರಿಕೆ

‘ವದಂತಿಗಳನ್ನು ಹರಡಿದರೆ ಕಾನೂನಾತ್ಮಕ ಕ್ರಮ ಕೈಗೊಂಡು ಮಾನಹಾನಿ ಪ್ರಕರಣ ದಾಖಲಿಸುತ್ತೇವೆ’ ಎಂದು ಬಿಗ್ ಬಾಸ್  ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಎಚ್ಚರಿಕೆ ನೀಡಿದ್ದಾರೆ.

ವಿಚ್ಛೇದನಕ್ಕೆ ಸಂಬಂಧಿಸಿದಂತೆ ವದಂತಿಗಳನ್ನು ಹರಡುತ್ತಿರುವ ವ್ಯಕ್ತಿಗಳು ಹಾಗೂ ಸಾಮಾಜಿಕ ಮಾಧ್ಯಮಗಳ ವಿರುದ್ಧ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಚಂದನ್ ಹಾಗೂ ನಿವೇದಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ಕೆಲವು ವರ್ಷಗಳಿಂದ ನಮ್ಮ ಜೀವನಶೈಲಿ ಹೊಂದಾಣಿಕೆ ಆಗಲೇ ಇಲ್ಲ. ಒಬ್ಬರಿಗೊಬ್ಬರು ಸಮಯ ಕೊಡಲು ಆಗಲಿಲ್ಲ. ಮಾನಸಿಕವಾಗಿ ನೋವು ಅನುಭವಿಸಿಕೊಂಡು ಒಟ್ಟಿಗಿರುವುದಕ್ಕಿಂತ ಬೇರೆಯಾಗುವುದು ಒಳ್ಳೆಯದು ಎಂದು ಒಮ್ಮತದಿಂದ ನಿರ್ಧಾರ ಮಾಡಿದೆವು. ಜೂನ್‌ 7ರಂದು ನಮಗೆ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿದೆ. ಕಾನೂನಿನ ಪ್ರಕಾರ ವಿಚ್ಛೇದನ ಪಡೆದಿದ್ದೇವೆ” ಎಂದು ಚಂದನ್‌ ಹೇಳಿದರು.

”ನಮ್ಮಿಬ್ಬರ ನಡುವೆ ದ್ವೇಷ, ವೈಮನಸ್ಸು ಇಲ್ಲ. ನಾವಿಬ್ಬರೂ ಜೀವನಾಂಶ ಪಡೆದುಕೊಂಡಿಲ್ಲ. ಮಗುವಿನ ವಿಚಾರದಲ್ಲೂ ಯಾವುದೇ ಒತ್ತಡ ಹಾಕಿಲ್ಲ. ನಿವೇದಿತಾ ಸ್ವತಂತ್ರ ಮಹಿಳೆ. ಅವರ ಖರ್ಚುಗಳನ್ನು ಅವರು ನೋಡಿಕೊಳ್ಳುತ್ತಿದ್ದರು. ಮೂರನೇ ವ್ಯಕ್ತಿಯ ಜೊತೆ ನಿವೇದಿತಾ ಅವರ ಸಂಬಂಧ ಕಲ್ಪಿಸುತ್ತಿರುವುದರಿಂದ ಮನಸ್ಸಿಗೆ ಬೇಸರವಾಗುತ್ತಿದೆ. ಇಂತಹ ವಿಕೃತ ಮನಃಸ್ಥಿತಿ ಶೋಭೆ ತರುವುದಿಲ್ಲ. ಕೆಲವು ಯೂಟ್ಯೂಬ್‌ ಚಾನೆಲ್‌ಗಳು ವದಂತಿ ಫ್ಯಾಕ್ಟರಿಗಳಾಗುತ್ತಿವೆ. ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಳ್ಳುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೇದಿತಾ ಮಾತನಾಡಿ, ”ವದಂತಿಗಳು ನಮಗಷ್ಟೇ ಅಲ್ಲದೆ ನಮ್ಮ ಕುಟುಂಬಕ್ಕೂ ನೋವು ತಂದಿವೆ. ಯಾರ ಜೊತೆಗಾದರೂ ಪೋಸ್ಟ್‌ ಹಾಕಿದ ತಕ್ಷಣ ವ್ಯೂವ್ಸ್‌ಗಳಿಗಾಗಿ ಸಂಬಂಧ ಕಲ್ಪಿಸುತ್ತಾರೆ. ಇದು ಮನಸ್ಸಿಗೆ ನೋವಾಗುತ್ತದೆ. ನಾನೂ ಹಾಗೂ ಚಂದನ್‌ ಒಳ್ಳೆಯ ಗೆಳೆಯರು. ನಮ್ಮ ನಮ್ಮ ವೃತ್ತಿಯಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ಇರುತ್ತೇವೆ. ವಿಚ್ಛೇದನ ನಿರ್ಧಾರದ ಬಗ್ಗೆ ಯಾವುದೇ ವಿಷಾದ ಇಲ್ಲ” ಎಂದು ಸ್ಪಷ್ಟನೆ ನೀಡಿದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!