ಚಿತ್ರ: ವೃಷಭ
ನಿರ್ದೇಶನ: ನಂದ ಕಿಶೋರ್
ನಿರ್ಮಾಣ: ಕನೆಕ್ಟ್ ಮೀಡಿಯಾ, ಬಾಲಾಜಿ ಮೋಶನ್ ಪಿಕ್ಚರ್ಸ್ ಮತ್ತು ಅಭಿಷೇಕ್ ಎಸ್ ವ್ಯಾಸ್ ಸ್ಟುಡಿಯೋ
ತಾರಾಗಣ: ಮೋಹನ್ ಲಾಲ್, ಸಮರ್ ಜಿತ್ ಲಂಕೇಶ್, ರಾಗಿಣಿ ಮುಂತಾದವರು.
ರೇಟಿಂಗ್ : 3.5/5
ವೃಷಭ ವಂಶದ ರಾಜ ವಿಜಯೇಂದ್ರ. ಅದು ಸ್ಪಟಿಕಲಿಂಗ ಸಂರಕ್ಷಕ ವಂಶ. ಈ ಲಿಂಗದ ಮೇಲೆ ಕಣ್ಣು ಹಾಕಿದವರು ಹಲವರು. ಅವರಿಂದ ಲಿಂಗವನ್ನು ಸಂರಕ್ಷಿಸಿ ಹೆಸರು ಮಾಡಿದವನು ವೃಷಭ ರಾಜ. ಆದರೆ ಒಮ್ಮೆ ಇಂಥದೇ ಪ್ರಯತ್ನದಲ್ಲಿ ನಡೆಯುವ ಹೋರಾಟದಲ್ಲಿ ಸನ್ಯಾಸಿನಿ ಪುತ್ರನ ಸಾವಾಗುತ್ತದೆ. ಪುತ್ರನನ್ನು ಕಳೆದುಕೊಂಡ ತಾಯಿ ಅದೇ ದುಃಖದಿಂದ ರಾಜನ ಮೇಲೆ ಕೋಪಗೊಳ್ಳುತ್ತಾಳೆ. ಮಗನಿಂದಲೇ ನಿನಗೆ ಸಾವಾಗಲಿ ಎಂದು ಶಾಪ ನೀಡುತ್ತಾಳೆ. ಆ ತಾಯಿಯ ಶಾಪ ರಾಜನನ್ನು ಯಾವ ಮಟ್ಟಕ್ಕೆ ಕಾಡುತ್ತದೆ ಎನ್ನುವುದನ್ನು ಪರದೆಯ ಮೇಲೆ ನೋಡುವುದೇ ಚಂದ.
ಅಂದಹಾಗೆ ವೃಷಭದಲ್ಲಿ ರಾಜವಂಶದ ಕಥೆ ಒಂದೇ ಅಲ್ಲ. ವಿಜಯೇಂದ್ರ ರಾಜನ ಮರುಜನ್ಮವೂ ಇದೆ. ಪ್ರಸ್ತುತ ಕಾಲಘಟ್ಟದಲ್ಲಿ ಉದ್ಯಮಿಯಾಗಿರುತ್ತಾನೆ. ಉದ್ಯಮಿ ಆದಿ ದೇವ ವರ್ಮ ಮತ್ತು ಉದ್ಯಮಿಯ ಪುತ್ರ ತೇಜನ ಮಧ್ಯೆ ನಡೆಯುವ ಕುತೂಹಲಕಾರಿ ಘಟನೆಗಳು ಪೂರ್ವಜನ್ಮದ ಸಂಬಂಧವನ್ನು ಅನಾವರಣಗೊಳಿಸುತ್ತಾ ಹೋಗುತ್ತದೆ.
ರಾಜ ವಿಜಯೇಂದ್ರನಾಗಿ ಮೋಹನ್ ಲಾಲ್ ನಟಿಸಿದ್ದರೆ ಪುತ್ರ ತೇಜನಾಗಿ ಸಮರಜಿತ್ ಲಂಕೇಶ್ ನಟಿಸಿದ್ದಾರೆ. ವಿಶೇಷ ಏನೆಂದರೆ ಸಮರ್‌ಜಿತ್ ಗೂ ಎರಡು ಶೇಡ್ ಪಾತ್ರವಿದೆ. ಅದನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದಾರೆ.
ಒಂದು ಕಡೆ ಪೌರಾಣಿಕ ಗೆಟಪ್ ನಲ್ಲಿ ಬಂದು ಹಯಗ್ರೀವನಾಗಿ ಹೋರಾಟ ನಡೆಸುವ ದೃಶ್ಯದಲ್ಲಿ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ. ತೇಜನಾಗಿ ಇಂಟ್ರೋ ಪಡೆಯುವಾಗಲೇ ಸಾಹಸ ಮೆರೆದಿದ್ದಾರೆ. ಹಾಡು, ಡಾನ್ಸ್ ಎರಡರಲ್ಲೂ ಸೈ ಅನಿಸಿದ್ದಾರೆ.
ಚಿತ್ರದ ನಿರ್ದೇಶಕ ಮಾತ್ರವಲ್ಲ, ಪ್ರಮುಖ ಕಲಾವಿದರು ಕೂಡ ಕನ್ನಡ ಚಿತ್ರರಂಗದವರೇ ಇದ್ದಾರೆ ಎನ್ನುವುದು ಕನ್ನಡಿಗರಿಗೂ ಖುಷಿಯ ವಿಚಾರ. ಮೋಹನ್ ಲಾಲ್ ಗೆ ಜೋಡಿಯಾಗಿ ರಾಗಿಣಿ ನಟಿಸಿದ್ದಾರೆ. ಮನಶಾಸ್ತ್ರಜ್ಞ ವೈದ್ಯನಾಗಿ ಕಿಶೋರ್ ಒಂದೇ ದೃಶ್ಯದಲ್ಲಿ ಬಂದರೂ ನೆನಪಲ್ಲಿ ಉಳಿಯುತ್ತಾರೆ. ಕೆ.ಜಿ.ಎಫ್ ಖ್ಯಾತಿಯ ಗರುಡ ರಾಮ್ ಈ ಚಿತ್ರದಲ್ಲಿ ಪ್ರಧಾನ ಖಳನಾಗಿ ಕಾಣಿಸಿದ್ದಾರೆ.
ಸಮರ್ ಜಿತ್ ಗೆ ಜೋಡಿಯಾಗಿ ನಯನ್ ಸಾರಿಕಾ ಅಭಿನಯಿಸಿದ್ದಾರೆ. ಬಾಲಿವುಡ್ ನಟ ಜಿತೇಂದ್ರ ಅತಿಥಿ ಪಾತ್ರದಲ್ಲಿ ಆಗಮಿಸಿದ್ದಾರೆ. ಬಜೆಟ್, ಕಥೆ, ನಟನೆ ಎಲ್ಲದರಲ್ಲೂ ಆಕರ್ಷವಾಗಿರುವ ಚಿತ್ರವಾಗಿ ವೃಷಭ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.





Be the first to comment