ವಿಷ್ಣುಪ್ರಿಯ

Movie Review: ವಿಷ್ಣು ಮತ್ತು ಪ್ರಿಯಾ ಪ್ರೇಮ ವಿಲಾಸ

ಚಿತ್ರ: ವಿಷ್ಣು ಪ್ರಿಯ
ನಿರ್ದೇಶನ: ವಿ ಕೆ ಪ್ರಕಾಶ್
ನಿರ್ಮಾಣ: ಕೆ ಮಂಜು
ತಾರಾಗಣ: ಶ್ರೇಯಸ್ ಮಂಜು, ಪ್ರಿಯಾ ವಾರಿಯರ್ ಮೊದಲಾದವರು
ರೇಟಿಂಗ್: 3.5/5

ತೊಂಬತ್ತರ ದಶಕದಲ್ಲಿ ಅದೆಷ್ಟೋ ಪ್ರೇಮಕತೆಗಳು ಸಿನಿಮಾವಾಗಿ ಬಂದು ಸೂಪರ್ ಹಿಟ್ ಆಗಿವೆ. ಅಂಥದೇ ಒಂದು ಲವ್ ಜಲಕ್ ಅನ್ನು ನೀಡುವಂಥ ಚಿತ್ರ ವಿಷ್ಣುಪ್ರಿಯ.

ಹಸಿರು ಸಿರಿ ತುಂಬಿದ ಹಳ್ಳಿಯಲ್ಲಿ ನಡೆಯುವ ಕತೆ. ಅಲ್ಲೊಂದು ಕಾಲೇಜು. ಕಾಲೇಜ್ , ತೋರಿಸದೇನೇ ವಿಷ್ಣು ಮತ್ತು ಪ್ರಿಯಾ ಎನ್ನುವ ಸ್ಟುಡೆಂಟ್ಸ್ ಪ್ರೀತಿಗೆ ಬೀಳುವುದನ್ನು ತೋರಿಸಿದ್ದಾರೆ ನಿರ್ದೇಶಕರು. ಮಕ್ಕಳ ಪ್ರೀತಿಯ ಕಥೆ ಹೆಚ್ಚು ತಡವಾಗದೇ ಮನೆಯವರಿಗೂ ಅರಿವಾಗುತ್ತದೆ. ಸಹಜವೆನ್ನುವ ಹಾಗೆ ಇಬ್ಬರನ್ನೂ ದೂರ ಮಾಡುತ್ತಾರೆ. ಹುಡುಗಿಯ ಕುಟುಂಬ ಊರನ್ನೇ ತೊರೆಯುತ್ತದೆ. ಮೊಬೈಲ್ ಫೋನ್ ಇಲ್ಲದ ಕಾಲದಲ್ಲಿ ಕಳೆದುಕೊಂಡ ಪ್ರೀತಿಯ ಸಂಪರ್ಕ ಪಡೆಯಲು ನಾಯಕ ಮಾಡುವ ಪಯತ್ನಗಳೇನು? ಕೊನೆಗೂ ಈ ಜೋಡಿ ಒಂದಾಗುತ್ತಾ ಅನ್ನೋದನ್ನು ನೋಡಲು ನೀವು ಚಿತ್ರಮಂದಿರಕ್ಕೆ ಹೋಗಲೇಬೇಕು.

ಮಲಯಾಳಂನ ಖ್ಯಾತ ನಿರ್ದೇಶಕ ವಿ ಕೆ ಪ್ರಕಾಶ್ ಇಲ್ಲಿ ಪ್ರೀತಿ ಕತೆಯನ್ನಷ್ಟೇ ಹೇಳಿಲ್ಲ. ಮಕ್ಕಳ ಪ್ರೇಮದಿಂದ ಆತಂಕಕ್ಕೊಳಗಾಗುವ ಎರಡು ಕುಟುಂಬಗಳ ಕತೆಯನ್ನು ಕೂಡ ಹೇಳಿದ್ದಾರೆ.‌ ಹಾಗಾಗಿ ಇದು ಒಂದು ಕೌಟುಂಬಿಕ ಪ್ರೇಮಕತೆ ಎಂದೇ ಹೇಳಬಹುದು.

ಈ ಚಿತ್ರದಲ್ಲಿ ಪ್ರೇಮಜೋಡಿಯಾಗಿ ಕಾಣಿಸಿರುವುದು ಶ್ರೇಯಸ್ ಮಂಜು ಮತ್ತು ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್. ಶ್ರೇಯಸ್ ಮತ್ತು ಪ್ರಿಯಾ ಅವರಿಬ್ಬರು ಪ್ರೀತಿಸುತ್ತಾ ಪ್ರೇಕ್ಷಕರ ಪ್ರೀತಿಯನ್ನು ಪಡೆಯುತ್ತಾ ಹೋಗುತ್ತಾರೆ.

ಹರೆಯದ ಮುಗ್ದತೆ, ಜತೆಯಲ್ಲೇ ತುಂಟಾಟ ಹಾಗೂ ಅನಿರೀಕ್ಷಿತ ತಿರುವುಗಳಿಗೆ ಇಬ್ಬರೂ ಸರಿಯಾದ ಭಾವಗಳನ್ನು ನೀಡಿ ಕಾಡಿದ್ದಾರೆ.

ವಿಷ್ಣುವಿನ ತಂದೆಯಾಗಿ ಅಚ್ಯುತ್ ಕುಮಾರ್, ತಾಯಿಯಾಗಿ ಅಶ್ವಿನಿಗೌಡ ನಾಯಕಿಯ ತಂದೆಯಾಗಿ ಸುಚೇಂದ್ರ ಪ್ರಸಾದ್ ಮತ್ತು ತಾಯಿಯಾಗಿ ಚಿತ್ಕಳಾ ಬಿರಾದಾರ್ ಎಲ್ಲರೂ ಇಬ್ಬರಿಗೊಬ್ಬರು ಸ್ಪರ್ಧಿಸುವಂಥ ಅಭಿನಯ ನೀಡಿದ್ದಾರೆ. ಗೋಪಿ ಸುಂದರ ಸಂಗೀತದಲ್ಲಿ ವಿ ನಾಗೇಂದ್ರ ಪ್ರಸಾದ್ ರಚಿಸಿದ ಪ್ರೇಮಗೀತೆಗಳು ಯುವ ಪ್ರೇಮಿಗಳ ಜತೆ ನಮ್ಮನ್ನು ತಲ್ಲೀನಗೊಳಿಸುತ್ತದೆ. ಬಹಳ ಸಮಯದ ಬಳಿಕ ಬಂದ ಒಂದು ಉತ್ತಮ ಪ್ರೇಮ ಚಿತ್ರ ಇದು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!