ಮತ್ತೆ ಒಂದಾದ ರಾಬರ್ಟ್ ಜೋಡಿ

ವಿನೋದ್‌ ಪ್ರಭಾಕರ್‌ ಅವರ ಹೊಸ ಸಿನಿಮಾ ‘ಮಾದೇವ’ಕ್ಕೆ ನಾಯಕಿಯಾಗಿ ಸೋನಲ್‌ ಮೊಂತೆರೋ ಆಯ್ಕೆಯಾಗಿದ್ದಾರೆ.

ಕಳೆದ ವರ್ಷ ತೆರೆಕಂಡಿದ್ದ ‘ರಾಬರ್ಟ್‌’ ಸಿನಿಮಾದಲ್ಲಿ ಮೋಡಿ ಮಾಡಿದ್ದ ಈ ಜೋಡಿ ಮತ್ತೆ ತೆರೆ ಮೇಲೆ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

ವಿನೋದ್ ಹಾಗೂ ಸೋನಲ್ ರಾಬರ್ಟ್ ಸಿನಿಮಾದಲ್ಲಿ ತನು-ರಾಘವ ಎಂಬ ಪಾತ್ರದ ಮೂಲಕ ಪ್ರೇಕ್ಷಕರ ಮನೆ ಗೆದ್ದಿದ್ದರು. ‘ಪಂಚತಂತ್ರ’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ಕರಾವಳಿಯ ಬೆಡಗಿ ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳಿಗೆ ಕಾಲ್‌ಶೀಟ್‌ ನೀಡುತ್ತಿದ್ದಾರೆ.

‘ಖಾಕಿ’ ಸಿನಿಮಾ ನಿರ್ದೇಶಿಸಿದ್ದ ನವೀನ್ ಬಿ. ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮಾದೇವ’ ಚಿತ್ರದಲ್ಲಿ ಸೋನಲ್ 80ರ ದಶಕದ ಮಧ್ಯಮವರ್ಗದ ಹುಡುಗಿಯಾಗಿ ಬಣ್ಣ ಹಚ್ಚಿದ್ದಾರೆ. ವಿನೋದ್ ಪ್ರಭಾಕರ್ ಈ ಹಿಂದೆ ನಿರ್ವಹಿಸಿದ್ದ ಪಾತ್ರಗಳಿಗಿಂತ ಭಿನ್ನವಾಗಿ ಕಾಣಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಭಾವನಾತ್ಮಕ ಮತ್ತು ಮಾಸ್ ಎಲಿಮೆಂಟ್ ಕಥಾಹಂದರದ ಈ ಸಿನಿಮಾ ಜೈಲಿನ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯಲಿದೆ. ಶಿವಮೊಗ್ಗ, ಧಾರವಾಡ ಮತ್ತು ಹೈದರಾಬಾದ್‌ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಶ್ರುತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ತಾರಾಬಳಗದಲ್ಲಿದ್ದಾರೆ.

ಬಾಲಕೃಷ್ಣ ತೋಟ ಛಾಯಾಗ್ರಹಣ, ಪ್ರದ್ಯೋಥನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!