ಬಂಡೆ ಮಹಾಂಕಾಳಿ ಸನ್ನಿಧಿಯಲ್ಲಿ “ಗ್ರಾಮಾಯಣ” ಚಿತ್ರದ ಅದ್ಧುರಿ ಮೂಹೂರ್ತ!

ಜಿ.ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ನಿರ್ಮಾಣದ, ದೇವನೂರು ಚಂದ್ರು ನಿರ್ದೇಶನದ ಹಾಗೂ ವಿನಯ್ ರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ “ಗ್ರಾಮಾಯಣ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆರಂಭ ಫಲಕ ತೋರಿದರು. ಅಶ್ವಿನಿ ಪುನೀತ್ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ದುನಿಯಾ ವಿಜಯ್, ಧ್ರುವ ಸರ್ಜಾ, ರಾಜ್ ಬಿ ಶೆಟ್ಟಿ, ಆರ್ ಚಂದ್ರು, ಪವನ್ ಒಡೆಯರ್, ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

“ಗ್ರಾಮಾಯಣ” ಇದು ಗ್ರಾಮದಲ್ಲೇ ನಡೆಯುವ ಕಥೆ. ಸಿಂಪಲ್ ಸುನಿ ಅವರ ಮದುವೆ ಸಂದರ್ಭದಲ್ಲಿ ವಿನಯ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಅವರನ್ನು ನೋಡಿದ ಕೂಡಲೆ ಈ ಕಥೆಗೆ ಇವರೆ ಸೂಕ್ತ ನಾಯಕ ಅಂದುಕೊಂಡೆ. ಅವರು ಕಥೆ ಒಪ್ಪಿದರು. ನೀವು ಈವರೆಗೂ ನೋಡಿರದ ವಿನಯ್ ರಾಜಕುಮಾರ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಚಿಕ್ಕಮಗಳೂರು, ದೇವರಾಯ ಸಮುದ್ರ, ಅರಸಿಕೆರೆ, ಕಡೂರು ಸುತ್ತಮುತ್ತ ಚಿತ್ರೀಕರಣ ಮಾಡಲಿದ್ದೇವೆ. ಯಶಸ್ವಿನಿ ಅಂಚಲ್ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಅಪರ್ಣ(ನಿರೂಪಕಿ), ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ಮಾಪಕರಾದ ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ದೇವನೂರು ಚಂದ್ರು.

ಈಗಿನ ಯುವಕರ ದೃಷ್ಟಿಕೋನದಲ್ಲಿ ಹಳ್ಳಿ ಹೇಗೆ ಕಾಣಿಸುತ್ತದೆ ಎನ್ನುವುದೇ “ಗ್ರಾಮಾಯಣ. ನಾನು ಈವರೆಗೂ ಮಾಡಿರದ ಪಾತ್ರವಿದು. ಚಂದ್ರು ಅವರು ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ನಿರ್ಮಾಪಕರಿಗೆ ನನ್ನ ಧನ್ಯವಾದಗಳು ಎಂದರು ವಿನಯ್ ರಾಜಕುಮಾರ್. “U I” ಚಿತ್ರದ ಸೆಟ್ ನಲ್ಲಿ “ಗ್ರಾಮಾಯಣ” ಚಿತ್ರದ ಟೀಸರ್ ನೋಡಿದೆ. ಟೀಸರ್ ಗೆ ತುಂಬಾ ಪಾಸಿಟಿವ್ ಕಾಮೆಂಟ್ಸ್ ಗಳು ಬಂದಿದ್ದವು. ಇಂತಹ ಒಳ್ಳೆಯ ಚಿತ್ರ ನಿಲ್ಲಬಾರದು ಎಂದು ಲಹರಿ ಫಿಲಂಸ್ ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದೇನೆ ಎನ್ನುತ್ತಾರೆ ಕೆ.ಪಿ.ಶ್ರೀಕಾಂತ್.

ನಾನು “ಗ್ರಾಮಾಯಣ”ದ ಹಾಡೊಂದು ಕೇಳಿ ತುಂಬಾ ಖುಷಿಪಟ್ಟಿದೆ. ಈಗ ನಮ್ಮ ಅಣ್ಣ ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಚೆನ್ನಾಗಿ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾವಿರಲಿ ಎಂದರು ಲಹರಿ ವೇಲು. ಸಹ ನಿರ್ಮಾಪಕ ನವೀನ್ ಮನೋಹರನ್, ಕಲಾವಿದರಾದ ಅರುಣ್ ಸಾಗರ್, ಗೋಪಾಲಕೃಷ್ಣ ದೇಶಪಾಂಡೆ “ಗ್ರಾಮಾಯಣ” ದ ಕುರಿತು ಮಾತನಾಡಿದರು. ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದ ಅಷ್ಟು ಗಣ್ಯರು “ಗ್ರಾಮಾಯಣ”, ” ರಾಮಾಯಣ” ದಷ್ಟೇ ಕೀರ್ತಿ ಪಡೆಯಲಿ ಎಂದು ಹಾರೈಸಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!