ವಿಕ್ರಾಂತ್ ರೋಣನ ಅಸಲಿ ಯಶಸ್ಸು ಏನು ಗೊತ್ತಾ? ಕಿಚ್ಚ ಸುದೀಪ ಇನ್ ಬುರ್ಜ್ ಖಲೀಫಾ

ಒಂದು ಕಾಲ ಇತ್ತು. ಕನ್ನಡ ಚಿತ್ರಗಳು ಕರ್ನಾಟಕದಲ್ಲೇ ಓಡಲ್ಲ ಅಂತ ಜನ ಮಾತಾಡ್ತಾ ಇದ್ರು. ಈಗ ಕನ್ನಡ ಚಿತ್ರರಂಗ ಮತ್ತೆ ತನ್ನ ಹಳೆಯ ವೈಭವಕ್ಕೆ ಮರಳುವ ಮುನ್ಸೂಚನೆಗಳು ಸಿಗುತ್ತಿವೆ. ಯಶ್ ಅಭಿನಯದ ಕೆಜಿಎಫ್ ಚಿತ್ರ ದೇಶದಾದ್ಯಂತ ಸುದ್ದಿಯಾಗಿದ್ರೆ ಇದೀಗ ಕಿಚ್ಚ ಸುದೀಪ್ ದೇಶದ ಆಚೆಯೂ ಸದ್ದು ಮಾಡಿದ್ದಾರೆ.

ಹೌದು ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ನೆಪದದಲ್ಲೇ ತಮ್ಮ ಹೊಸ ಚಿತ್ರ ವಿಕ್ರಾಂತ್ ರೋಣನ ಶೀರ್ಷಿಕೆಯನ್ನು ಅನಾವರಣಗೊಳಿಸಲು ಸುದೀಪ್ ಮತ್ತು ತಂಡ ಆಯ್ಕೆ ಮಾಡಿಕೊಂಡಿದ್ದು ದುಬೈನ ಅತಿ ಎತ್ತರದ ವಿಶ್ವಖ್ಯಾತ ಬುರ್ಜ್ ಖಲೀಫಾ ಕಟ್ಟಡವನ್ನು.

ಇಷ್ಟು ದಿನ ಫ್ಯಾಂಟಮ್ ಆಗಿದ್ದ ಸುದೀಪ್ ಅವರ ಚಿತ್ರ ಈಗ ವಿಕ್ರಾಂತ್ ರೋಣ ಆಗಿ ಬದಲಾಗಿದೆ. ಅದನ್ನು ಪ್ರಪಂಚಕ್ಕೇ ಸಾರಿ ಹೇಳುವಂತೆ ನಿರ್ದೇಶಕ ಅನೂಪ್ ಭಂಡಾರಿ, ನಿರ್ಮಾಪಕ ಜಾಕ್ ಮಂಜು ಮತ್ತು ಸುದೀಪ್ ಕನ್ನಡ ಚಿತ್ರರಂಗದ ವೈಭವವನ್ನು ದೊಡ್ಡ ಸುದ್ದಿಯನ್ನಾಗಿಸಿದ್ದಾರೆ. ನೀರಿನಂತೆ ಹಣವನ್ನು ಖರ್ಚು ಮಾಡಿ ಈಗ ವಿಕ್ರಾಂತ್ ರೋಣ ಬುರ್ಜ್ ಖಲೀಫಾದಲ್ಲಿ ಅನಾವರಣಗೊಂಡಿದೆ.

ಸಹಜವಾಗಿಯೇ ಇದು ಅನೇಕ ಕನ್ನಡ ಸಿನಿಪ್ರೇಮಿಗಳಿಗೆ ಮತ್ತು ಸುದೀಪ್ ಅಬಿಮಾನಿಗಳಿಗೆ ಸಂತಸದ ವಿಷಯವಾಗಿದ್ದು ಅವರೆಲ್ಲರೂ ವಿಕ್ರಾಂತ್ ರೋಣನನ್ನು ಸಂಭ್ರಮಿಸುತ್ತಿದ್ದಾರೆ. ಬುರ್ಜ್ ಖಲೀಫಾದ 148ನೇ ಮಹಡಿಯಲ್ಲಿ ಟೈಟಲ್ ರಿವೀಲ್ ಆಗಿರೋದು ನೋಡಿ ಕನ್ನಡ ಚಿತ್ರರಂಗ ತುಂಬಾ ಎತ್ತರಕ್ಕೆ ಹೋಗಿದೆ ಎಂದು ಎಲ್ಲರೂ ಮಾತಾಡುತ್ತಿದ್ದಾರೆ. ಇದರ ಜೊತೆ 2 ಸಾವಿರ ಅಡಿ ಎತ್ತರದ ವರ್ಚುವಲ್ ಪೋಸ್ಟರ್ ರಿಲೀಸ್ ಆಗಿದೆ. ಅಲ್ಲದೆ ಸುದೀಪ್ ಅವರ 25 ವರ್ಷಗಳ ಸಿನಿ ಪಯಣದ 3 ನಿಮಿಷದ ವಿಡಿಯೋ ಕೂಡಾ ಪ್ಲೇ ಆಗಿದೆ. 3 ನಿಮಿಷಗಳ ಕಾಲ ಬುರ್ಜ್ ಖಲೀಫಾದಲ್ಲಿ ಕನ್ನಡ ಮತ್ತು ವಿಕ್ರಾಂತ್ ರೋಣನ ಜೊತೆ ಕಿಚ್ಚ ಸುದೀಪ್ ಅವರ ವೈಭವ ಕಂಡುಬಂದಿದೆ.

ಈ ಸಂದರ್ಭದಲ್ಲಿ ಕಿಚ್ಚನಿಗೆ ಚಿತ್ರರಂಗದ ಹಲವಾರು ಗಣ್ಯರು ಶುಭಕೋರಿದ್ದಾರೆ. ಆದರೆ ಇದರ ಜೊತೆಗೆ ಅಷ್ಟೆಲ್ಲಾ ಖರ್ಚು ಮಾಡಿ ಹಣ ವೇಸ್ಟ್ ಮಾಡಿದ್ದಾರೆ, ಅದನ್ನು ಬಡವರಿಗೆ ಕೊಡಬಹುದಾಗಿತ್ತು ಎಂಬ ಕುಹಕಗಳಿಗೇನೂ ಕಮ್ಮಿ ಇಲ್ಲ. ಇಂಥವೆಲ್ಲ ಇದ್ದಿದ್ದೇ ಬಿಡಿ. ಹೇಳಿ ಕೇಳಿ ಚಿತ್ರರಂಗ ಅಂದ್ರೆ ವೈಭವಯುತ ರಂಗ. ಅಲ್ಲಿ ಹಣ ಖರ್ಚು ಮಾಡಿ ಹಣ ತೆಗೆಯೋದು ಒಂದು ಕಲೆ. ಅದಕ್ಕೂ ಕೊಂಕು ಮಾತಾಡಿದರೆ ಏನು ಹೇಳೋದು. ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಅದೆಷ್ಟು ಜನ ಶ್ರೀಮಂತರ ತಮ್ಮ ಹಣವನ್ನು ನಾನಾ ಕಾರಣಗಳಿಗೆ ದುಂದುವೆಚ್ಚ ಮಾಡುತ್ತಿಲ್ಲ. ಇದೇ ಮಾತನ್ನು ಅವರೆಲ್ಲರಿಗೂ ಹೇಳಲಾಗುತ್ತದೆಯೇ. ಹೋಗಲಿ ಬಿಡಿ, ಆದರೆ ಇದರೆಲ್ಲದರ ಆಚೆಗೂ ವಿಕ್ರಾಂತ್ ರೋಣನ ಅಸಲಿ ಯಶಸ್ಸು ದುಬೈ ಜನರಿಗೆ ಸಲ್ಲುತ್ತದೆ ಎಂದರೆ ತಪ್ಪೇನಿಲ್ಲ.

ನಮ್ಮ ಕರ್ನಾಟಕದ ಬೆಳಗಾವಿಯ ಪಾಲಿಕೆಯ ಮುಂದೆ ಕನ್ನಡದ ಧ್ವಜ ಹಾರಿದರೆ ಮರಾಠಿಗರು ಕಿರಿಕ್ ಮಾಡುತ್ತಾರೆ. ಚೆನ್ನೈನಲ್ಲಿ ಕನ್ನಡ ಮಾತಾಡಿದರೆ ತಮಿಳರು ಕನ್ನಡಿಗರ ಜೊತೆ ಹೊಡೆದಾಡುತ್ತಾರೆ. ಅಷ್ಟೇ ಯಾಕೆ, ನಮ್ಮ ಕರ್ನಾಟಕದಲ್ಲೂ ಹಿಂದಿ ಬೋರ್ಡ್ ಕಾಣಿಸಿದರೆ ನಾವು ಹಿಂದಿ ಹೇರಿಕೆ ಎನ್ನುತ್ತೇವೆ. ಆದರೆ ದುಬೈ ಜನ, ತಮ್ಮ ದೇಶದ ಪ್ರತಿಷ್ಠೆಗಳಲ್ಲಿ ಅತ್ಯುನ್ನತವಾದ ಸ್ಥಾನ ಹೊಂದಿರುವ ಬುರ್ಜ್ ಖಲೀಫಾ ಕಟ್ಟಡ, ಇನ್ಯಾವುದೋ ದೇಶದ, ಒಂದು ರಾಜ್ಯದ ಧ್ವಜದ ಕೆಂಪು ಹಳದಿ ಬಾವುಟವನ್ನು ಹೊದ್ದು ಮಿನುಗುತ್ತಿದ್ದರೆ ಅದಕ್ಕೆ ಯಾವ ತಕರಾರನ್ನೂ ಮಾಡಲಿಲ್ಲ. ಬದಲಾಗಿ ಅದನ್ನು ಜೊತೆಯಾಗಿ ಸಂಭ್ರಮಿಸಿದ್ದಾರೆ. ಇದು ನಿಜಕ್ಕೂ ಸಂತಸ ಮತ್ತು ಸೌಹಾರ್ದತೆಯ ಪ್ರತೀಕ. ಇದಕ್ಕಾಗಿ ದುಬೈ ಜನತೆಗೆ ಕನ್ನಡಿಗರು ಧನ್ಯವಾದ ಹೇಳಬೇಕಿದೆ. ಒಟ್ಟಿನಲ್ಲಿ ವಿಕ್ರಾಂತ್ ರೋಣ ಮತ್ತು ಸುದೀಪ್ ದೂರದ ದುಬೈನಲ್ಲಿ ಕನ್ನಡದ ಹಬ್ಬ ಮಾಡಿರೋದು ಸಂತಸದ ವಿಷಯ.

Be the first to comment

Leave a Reply

Your email address will not be published. Required fields are marked *

Translate »
error: Content is protected !!