ನಟನೆಗೆ ‘ದಳಪತಿ ವಿಜಯ್’ ಗುಡ್ ಬೈ

ಹೊಸ ಪಕ್ಷ ಘೋಷಣೆಯ ಬಳಿಕ ನಟನೆಗೆ ದಳಪತಿ ವಿಜಯ್ ಗುಡ್ ಬೈ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಎರಡು ಚಿತ್ರಗಳನ್ನು ಈಗ ಒಪ್ಪಿಕೊಂಡಿದ್ದೇನೆ. ಅವುಗಳ ಶೂಟಿಂಗ್ ನಡೆಯುತ್ತಿದೆ. ಅವುಗಳಲ್ಲಿ ಭಾಗಿಯಾಗೋ ಕಾರಣ, ಸ್ವಲ್ಪ ದಿನ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳೋದಕ್ಕೆ ಆಗುತ್ತಿಲ್ಲ ಎಂದರು.

ಒಪ್ಪಿಕೊಂಡಿರುವ ಎರಡು ಸಿನೆಮಾಗಳನ್ನು ಸಂಪೂರ್ಣವಾಗಿ ಮುಗಿಸಿದ ಬಳಿಕ ಸಿನೆಮಾಗೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.

ತಮಿಳಿನ  ಸ್ಟಾರ್ ನಟ ದಳಪತಿ ವಿಜಯ್ ಪಕ್ಷದ ಹೆಸರು ತಮಿಳಗ ವೆಟ್ರಿ ಕಳಗಂ. ಮುಂಬರುವ ಲೋಕಸಭೆ ಚುನಾವಣೆ ಮುಕ್ತಾಯದ ನಂತರ ವಿಜಯ್ ಸ್ಪರ್ಧೆ ಮಾಡಲಿದ್ದಾರೆ.  ‘ತಮಿಳಿಗ ವೆಟ್ರಿ ಕಳಗಂ’ ಎಂದರೆ ‘ತಮಿಳುನಾಡಿನ ವಿಜಯದ ಪಕ್ಷ’ ಎಂಬರ್ಥವನ್ನು ಸೂಚಿಸುತ್ತದೆ. ವಿಜಯ್ ಅವರೇ ಈ ಪಕ್ಷದ ಅಧ್ಯಕ್ಷರು.

ಮೂಲಗಳ ಪ್ರಕಾರ ಈಗಾಗಲೇ ನೋಂದಣಿ, ವೆಬ್‌ಸೈಟ್, ಬೈಲಾ, ಇತರೆ ತಯಾರಿಗಳನ್ನು ಮಾಡಿಕೊಂಡೇ ವಿಜಯ್ ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಜನವರಿ 25 ರಂದೇ ನೋಂದಣಿಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಅವರು ಅರ್ಜಿ ಸಲ್ಲಿಸಿದ್ದಾರೆ.

49 ವರ್ಷ ವಯಸ್ಸಿನ ವಿಜಯ್ ಹೊಸ ಪಕ್ಷ ಘೋಷಿಸುತ್ತಿದ್ದಂತೆ ಅವರ ಅಭಿಮಾನಿಗಳು  ಸಂಭ್ರಮ ವ್ಯಕ್ತಪಡಿಸಿದ್ದು, ಇದನ್ನು ‘ದಳಪತಿ 2.0’ ಎಂದು ಕೊಂಡಾಡಿದ್ದಾರೆ. ‘ಯಾವುದೇ ಪಕ್ಷದೊಂದಿಗೆ ಮೈತ್ರಿ ಅಥವಾ ಹೊಂದಾಣಿಕೆ ಮಾಡಿಕೊಳ್ಳದೇ ಏಕಾಂಗಿಯಾಗಿ ಪಕ್ಷವನ್ನು ಮುನ್ನಡೆಸುತ್ತೇವೆ’ ಎಂದು ವಿಜಯ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

‘2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಜನತೆ ಬಯಸಿದ ರಾಜಕೀಯ ಬದಲಾವಣೆಯನ್ನು ತರುವುದೇ ನಮ್ಮ ಪ್ರಮುಖ ಗುರಿ’ ಎಂದೂ ಅವರು ಇದೇ ವೇಳೆ ತಿಳಿಸಿದ್ದಾರೆ.

‘ಪಕ್ಷದ ಚಿನ್ಹೆ, ಧ್ವಜ ಹಾಗೂ ನೀತಿಗಳನ್ನು ಶೀಘ್ರವೇ ಪ್ರಕಟಿಸುತ್ತೇವೆ. ಬರುವ ಲೋಕಸಭಾ ಚುನಾವಣೆ ಮುಕ್ತಾಯದ ನಂತರ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತೇವೆ. ಅಲ್ಲಿವರೆಗೂ ಪಕ್ಷದ ಸಂಘಟನೆ, ಹಣಕಾಸು ಕ್ರೊಡೀಕರಣ, ವಿವಿಧ ಘಟಕಗಳ ರಚನೆ, ಅವುಗಳಿಗೆ ಪದಾಧಿಕಾರಿಗಳ ನೇಮಕ ಕೆಲಸವನ್ನು ಪೂರ್ಣಗೊಳಿಸಲಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ರಾಜಕೀಯ ಎನ್ನುವುದು ವೃತ್ತಿಯಲ್ಲ, ಇದು ಜನರ ಸೇವೆ ಮಾಡಲು ಇರುವ ಪವಿತ್ರ ಮಾರ್ಗ. ಹವ್ಯಾಸಕ್ಕಾಗಿ ಇದನ್ನು ಆಯ್ಕೆ ಮಾಡಿಕೊಂಡಿಲ್ಲ. ಪೂರ್ಣ ಮನಸ್ಸಿನಿಂದ ರಾಜಕೀಯಕ್ಕೆ ಕಾಲಿಡುತ್ತಿದ್ದೇನೆ’ ಎಂದು ದಳಪತಿ ಹೇಳಿದ್ದಾರೆ.

ವಿಜಯ್ ಅವರು, ನಿರ್ದೇಶಕ ವೆಂಕಟ್ ಪ್ರಭು ಅವರ ‘GOAT’ ಎಂಬ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. 1984 ರಲ್ಲಿ ವೆಟ್ರಿ ಎಂಬ ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ವಿಜಯ್, ಇದುವರೆಗೆ 65 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!